ಅಣ್ಣಾಮಲೈ.. ಬದುಕು ಹಲವರಿಗೆ ಸ್ಫೂರ್ತಿಯೂ ಹೌದು. ಅಣ್ಣಾಮಲೈ, ಐಪಿಎಸ್ ಅಧಿಕಾರಿಯಾಗಿದ್ದವರು. ತಾಯಿ ತಂದೆ ಕುರಿ ಸಾಕಿ ಓದಿಸಿದ ಹುಡುಗ. ಅಣ್ಣಾಮಲೈ ಅವರ ತಾಯಿ ಇವತ್ತಿಗೂ ಕುರಿ ಸಾಕುತ್ತಾರೆ. ಮಗ ದುಡಿಯುತ್ತಿದ್ದರೂ.. ಅಮ್ಮನ ಸ್ವಾಭಿಮಾನದ ಕಥೆಯೇ ಬೇರೆ. ಹಾಗೆ ಬಡತನದಿಂದಲೇ ಬಂದ ಅಣ್ಣಾಮಲೈ, ಸಿಂಗಂ ಎಂದೆಲ್ಲ ಫೇಮಸ್ ಆಗಿದ್ದರು.
ವಿಆರ್ʻಎಸ್ ತೆಗೆದುಕೊಂಡು ಈಗ ತಮಿಳುನಾಡಿನಲ್ಲಿ ಬಿಜೆಪಿ ಕಟ್ಟುತ್ತಿರುವ ಅಣ್ಣಾಮಲೈ, ತಮಿಳುನಾಡು ರಾಜಕೀಯದಲ್ಲಿ ಹೊಸ ಎತ್ತರಕ್ಕೇರುವ ಸುಳಿವು ಕೊಟ್ಟಿದ್ಧಾರೆ. ಅಣ್ಣಾಮಲೈ ಪ್ರವೇಶಿಸುವ ಮೊದಲು ಬಿಜೆಪಿಗೆ ತಮಿಳುನಾಡಿನಲ್ಲಿ ಬೇಸ್ʻಮೆಂಟೇ ಇರಲಿಲ್ಲ. ಬಿಜೆಪಿಯನ್ನು ದ್ವೇಷಿಸುವ ಒಂದು ಬೃಹತ್ ಸಮೂಹವೇ ಇದ್ದ ರಾಜ್ಯ ತಮಿಳುನಾಡು. ಅಂತಹ ತಮಿಳುನಾಡಿನಲ್ಲಿ ಬಿಜೆಪಿ ಕಟ್ಟುವ ಸವಾಲು ವಹಿಸಿಕೊಂಡ ಅಣ್ಣಾಮಲೈ, ಬಿಜೆಪಿಯನ್ನು ಅಧಿಕಾರದ ಗದ್ದುಗೆಗೇರಿಸಿದರೂ ಅಚ್ಚರಿಯಿಲ್ಲ ಎಂಬ ವಾತಾವರಣ ಇದೆ. ಅಂತಹ ಅಣ್ಣಾಮಲೈ ಈಗ ಚಿತ್ರರಂಗ ಪ್ರವೇಶಿಸಿದ್ದಾರೆ.
ಅಂದಹಾಗೆ ಚಿತ್ರದ ಹೆಸರು ಅರಬ್ಬೀ. ವಿಶ್ವಾಸ್ ಎಂಬ ವಿಶೇಷ ಚೇತನ ಯುವಕನೊಬ್ಬ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕಥೆ. ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯ ಜೊತೆಗೆ ತನ್ನ ಎರಡೂ ಕೈಗಳನ್ನು ಕಳೆದುಕೊಳ್ಳುವ ವಿಶ್ವಾಸ್, ಅವಮಾನಗಳಲ್ಲೇ ಬದುಕುತ್ತಿರುತ್ತಾನೆ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳೋದಿಲ್ಲ. ಕೈಗಳೇ ಇಲ್ಲದಿದ್ದರೂ.. ಈಜಿ ಸಾಧಿಸಿ ತೋರಿಸುತ್ತಾನೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಾನೆ. ವಿಶ್ವಾಸ್ ಕೇವಲ ಈಜುಪಟು ಅಲ್ಲ. ಒಳ್ಳೆಯ ಡ್ಯಾನ್ಸರ್. ಜಿಮ್ನ್ಯಾಸ್ಟಿಕ್ ಗೊತ್ತು. ಕೈಯಿಲ್ಲದಿದ್ದರೂ ಅಡುಗೆ ಮಾಡ್ತಾರೆ. ದಿನನಿತ್ಯದ ಎಲ್ಲ ಕೆಲಸಗಳನ್ನು ಯಾರ ಸಹಾಯವೂ ಇಲ್ಲದೆ ಮಾಡಿಕೊಳ್ತಾರೆ. ಆ ವಿಶ್ವಾಸದ ಬದುಕು ಕಟ್ಟಿಕೊಂಡಿರುವ ವಿಶ್ವಾಸ್ʻಗೆ ಸ್ಫೂರ್ತಿ ತುಂಬುವ ಕೋಚ್ ಆಗಿ ನಟಿಸಿರುವುದು ಅಣ್ಣಾಮಲೈ.
ವಿಶ್ವಾಸ್ ಅವರ ರಿಯಲ್ ಕಥೆಗೆ ಅವರೇ ಹೀರೋ. ಅವರಿಗೆ ಸ್ಫೂರ್ತಿ ತುಂಬುವ ಕೋಚ್ ಪಾತ್ರದಲ್ಲಿ ಅಣ್ಣಾಮಲೈ ನಟಿಸಿದ್ದಾರೆ. ಅಂದಹಾಗೆ ಅಣ್ಣಾಮಲೈ ನಟಿಸುವುದಕ್ಕೆ ಸಂಭಾವನೆ ಪಡೆದಿಲ್ಲ.
ಅರಬ್ಬೀ ಸಿನಿಮಾಗೆ ರಾಜಕುಮಾರ್ ಎಂಬುವವರು ನಿರ್ದೇಶಕರು. ರಾಜಕುಮಾರ್ ಅವರಿಗೆ ೧೮ ವರ್ಷಗಳ ಚಿತ್ರರಂಗದ ನಂಟಿದೆ. ಸರಿಗಮಪ’ ಖ್ಯಾತಿಯ ಕಂಬದ ರಂಗಯ್ಯ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. ಶ್ರೀವಿಜಯ ರಾಘವೇಂದ್ರ ಪ್ರೊಡಕ್ಷನ್ಸ್ ಮೂಲಕ ಚೇತನ್ ಸಿ ಎಸ್ ಈ ಚಿತ್ರಕ್ಕೆ ಪ್ರೊಡ್ಯಸೂರ್.
ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಉಪಾಧ್ಯಕ್ಷ ವೆಂಕಟೇಶ್, ಯಶವಂತಪುರ ಸರ್ಕಲ್ ಇನ್ಸ್ಪೆಕ್ಟರ್ ಅಜಯ್ ಸಾರಥಿ, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಟ್ರೇಲರ್ ರಿಲೀಸ್ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು.
ಸಿನಿಮಾ ಟ್ರೇಲರಿನಲ್ಲಿ ಕಾಣಸಿಗುವ ಅಣ್ಣಾಮಲೈ, ಸ್ಫೂರ್ತಿ ತುಂಬುವ ಮಾತುಗಳನ್ನು ಸಲೀಸಾಗಿ ಹೇಳಿದ್ಧಾರೆ. ಅಣ್ಣಾಮಲೈ ಮಾತೃಭಾಷೆ ತಮಿಳಾದರೂ.. ಕನ್ನಡ ಚೆನ್ನಾಗಿ ಗೊತ್ತಿದೆ. ಅಣ್ಣಾಮಲೈ ಬಾಯಲ್ಲಿ ಕನ್ನಡ ಕೇಳುವುದೇ ಚೆಂದ. ಅಣ್ಣಾಮಲೈ ಐಪಿಎಸ್ ಅಧಿಕಾರಿಯಾಗಿ ಹೆಸರು ಮಾಡಿದ್ದು ಕರ್ನಾಟಕದಲ್ಲಿ. ಈಗ ಸಿನಿಮಾಗೂ ಕಾಲಿಟ್ಟಿದ್ಧಾರೆ. ಆದರೆ.. ಸಿನಿಮಾ ಅಣ್ಣಾಮಲೈ ಅವರ ಫುಲ್ ಟೈಂ ವೃತ್ತಿ ಅಲ್ಲ.



