ಸಿದ್ಧರಾಮಯ್ಯ ಅವರ ʻಸಿಎ ಕುರ್ಚಿʼ ಭದ್ರವಾಗಿದೆಯೋ. ಇಲ್ಲವೋ.. ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಮೊನ್ ಮೊನ್ನೆ ತಾನೇ ಸಿದ್ಧರಾಮಯ್ಯ ಇನ್ನೂ ಎರಡೂವರೆ ವರ್ಷ ನಾನೇ ಸಿಎಂ ಎಂದು ಹೇಳಿದ್ದಾರೆ. ಸಿಎಂ ಹೇಳಿದ್ದಾರಲ್ಲ. ಅದೇ ಫೈನಲ್. ಇನ್ಯಾರಾದ್ರೂ ಮಾತನಾಡಿದ್ರೆ.. ಅಷ್ಟೆ.. ಸುಮ್ನಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೆಲ್ಲದರ ಮಧ್ಯೆ ಇಬ್ಬರೂ ಹೇಳಿರುವ ʻಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ. ಕೇಳಬೇಕುʼ ಎಂದಿರುವ ಮಾತೇ ಚರ್ಚೆ ಆಗ್ತಾ ಇದೆ. ಮುಂದಿನ ವರ್ಷಾನೂ ನೀವೇ ಚಾಮುಂಡೇಶ್ವರಿ ಪುಷ್ಪಾರ್ಚನೆ ಮಾಡ್ತೀರಾ ಎಂಬ ಪ್ರಶ್ನೆಗೆ ಸಿದ್ಧರಾಮಯ್ಯ ಕೊಟ್ಟಿರುವ ʻಐ ಹೋಪ್ ಸೋʼ.
ಹೀಗಿರುವಾಗಲೇ ಕೋಡಿ ಮಠದ ಸ್ವಾಮಿಗಳು ಒಂದು ಭವಿಷ್ಯ ಹೇಳಿದ್ದಾರೆ. ಕೋಡಿಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಪ್ರಕಾರ ʻಸಿದ್ಧರಾಮಯ್ಯ ಸರ್ಕಾರಕ್ಕೆ ಭಯ ಇಲ್ಲ. ಈಗಲೇ ಭವಿಷ್ಯ ಹೇಳೋಕೆ ಆಗಲ್ಲ. ಸಂಕ್ರಾಂತಿ ನಂತರ ಭವಿಷ್ಯ ಹೇಳುತ್ತೇನೆ. ಸಂಕ್ರಾಂತಿ ಕಳೆದ ನಂತರವೂ ಸಿದ್ಧರಾಮಯ್ಯ ಸರ್ಕಾರಕ್ಕೆ ಆತಂಕ ಇಲ್ಲʼ ಎಂದಿದ್ದಾರೆ. ಇಷ್ಟಕ್ಕೂ ಸಿದ್ಧರಾಮಯ್ಯ ಅಪ್ತರು ಕೋಡಿ ಶ್ರೀಗಳನ್ನೇ ಹೈಕಮಾಂಡ್ʻನಂತೆ ಭಾವಿಸುತ್ತಿರುವುದೇಕೆ..?
ಹೈಕಮಾಂಡ್ ಈ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಗೊಂದಲದ ಮೂಲ ಪ್ರಶ್ನೆಯೇ ಸಿದ್ಧರಾಮಯ್ಯ ಈ ಬಾರಿಯೂ 5 ವರ್ಷ ಕಂಪ್ಲೀಟ್ ಮಾಡ್ತಾರಾ.. ಇಲ್ವಾ.. ಎನ್ನುವುದು. ಯೆಸ್. ಸಿದ್ಧರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಹೇಳಬೇಕಿರುವುದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ವಾದ್ರಾ. ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇವರೇ ಹೈಕಮಾಂಡ್. ಇವರು ಮಿಕ್ಕಿದ್ದೆಲ್ಲವನ್ನೂ ಮಾತನಾಡ್ತಾರೆ.. ಆದರೆ.. ಈ ವಿಷಯದಲ್ಲಿ ಸೈಲೆಂಟ್. ಹೀಗಾಗಿ ಸಿದ್ಧು ಆಪ್ತರು ಕೊನೆಗೆ ನಂಬಿಕೊಂಡಿರೋದು ಕೋಡಿ ಶ್ರೀಗಳಂಥವರ ಹೇಳಿಕೆಗಳನ್ನೇ.
ಕಾಂಗ್ರೆಸ್‌ನ ಪ್ರಭಾವಿ ನಾಯಕ ಬಿಕೆ ಹರಿಪ್ರಸಾದ್ ಅವರೇ ಹೇಳ್ತಾರಲ್ಲ. ರಾಜ್ಯದಲ್ಲಿ ಪವರ್ ಶೇರಿಂಗ್ ನಡೆಯುತ್ತೆ, ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಆಗುತ್ತೆ ಅನ್ನೋದಾದರೆ ಈ ಬಗ್ಗೆ ಕೇವಲ ಮೂರು ಜನಕ್ಕೆ ಮಾತ್ರ ಗೊತ್ತು. ಅದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಮಾತ್ರ ಈ ಪವರ್ ಶೇರಿಂಗ್ ಬಗ್ಗೆ ಗೊತ್ತು ಎಂದಿದ್ದಾರೆ. ಅವರು ಬಾಯಿ ಬಿಡಲ್ಲ.
ಹೀಗಾಗಿ ಎಲ್ ಆರ್ ಶಿವರಾಮೇ ಗೌಡ, ಕುಣಿಗಲ್ ರಂಗನಾಥ್, ಶಿವಗಂಗಾ.. ಮೊದಲಾದ ಶಾಸಕರು ಡಿಕೆ ಸಿಎಂ ಆಗ್ತಾರೆ ಎನ್ನುವುದು.. ಮಹದೇವಪ್ಪ, ಎಂಬಿ ಪಾಟೀಲ್, ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ.. ಮೊದಲಾದವರು ಹಂಗೆಲ್ಲಿ ಆಗುತ್ತೆ. ಸಿಎಂ ಆಗಿ ಸಿದ್ಧರಾಮಣ್ಣ ಅವರಿದ್ದಾರೆ ಎನ್ನವುದು, ಪರಮೇಶ್ವರ್, ರಾಮಲಿಂಗಾ ರೆಡ್ಡಿಯಂತಹವರು ಅದನ್ನೆಲ್ಲ ಹೇಳ್ಬೇಕಿರೋದು ಹೈಕಮಾಂಡ್ ಎನ್ನುವುದು ನಡೆಯುತ್ತಲೇ ಇದೆ. ಸ್ಪಷ್ಟನೆ ಕೊಡಬೇಕಾದವರು ಕೊಡ್ತಿಲ್ಲ. ಹೀಗಾಗಿ.. ಸಿದ್ದು ಆಪ್ತರಿಗೆ ಸಿದ್ಧರಾಮಯ್ಯ ಸರ್ಕಾರ ಸೇಫ್ ಎನ್ನುತ್ತಿರುವ ಕೋಡಿಶ್ರೀಗಳೇ ಹೈಕಮಾಂಡ್ ಆಗಿದ್ದಾರೆ.



