ರಾಜ್ಯದಲ್ಲಿ ಕಾಂಗ್ರೆಸ್‍ನ್ನು ಶತಾಯಗತಾಯ ಗೆಲ್ಲಿಸುವ ಪಣ ತೊಟ್ಟಿರುವ ಕಾಂಗ್ರೆಸ್ ನಾಯಕರು ಪಕ್ಷವನ್ನು ಜನರ ಬಳಿಗೆ ಕೊಂಡೊಯ್ಯುವ ಯಾವ ಅಸ್ತ್ರವನ್ನೂ ಬಿಟ್ಟುಕೊಡುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಹಿಳಾ ಮತದಾರರು ಹಾಗೂ ಕಾರ್ಯಕರ್ತರಿಗೆಂದೇ ಪ್ರತ್ಯೇಕ ಸಮಾವೇಶ ನಡೆಸುತ್ತಿದೆ ಕಾಂಗ್ರೆಸ್. ಸಮಾವೇಶದ ಹೆಸರು ನಾ ನಾಯಕಿ. ಆ ಸಮಾವೇಶಕ್ಕೆ ಖುದ್ದು ಪ್ರಿಯಾಂಕಾ ವಾದ್ರಾ ಬರಲಿದ್ದಾರೆ.

ಜನವರಿ 6ರಿಂದ ಶುರುವಾಗುವ 3 ದಿನಗಳ ಸಮಾವೇಶ ಸಮಾರೋಪಗೊಳ್ಳೋದು ಜನವರಿ 9ಕ್ಕೆ. ಆ ದಿನ ಪ್ರಿಯಾಂಕಾ ವಾದ್ರಾ ಕರ್ನಾಟಕಕ್ಕೆ ಬರಲಿದ್ದು, ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ. ಅದೇ ದಿನ ಕ್ವೀನ್ಸ್ ರಸ್ತೆಯಲ್ಲಿ ಭಾರತ್ ಜೋಡೋ ಕಟ್ಟಡದ ಉದ್ಘಾಟನೆಯನ್ನೂ ಮಾಡಲಿದ್ದಾರೆ.
ಭಾರತ್ ಜೋಡೋ ಕಟ್ಟಡ ನಿರ್ಮಾಣ ಸುಮಾರು 6 ವರ್ಷಗಳಿಂದ ನಡೆಯುತ್ತಿದ್ದು, ಡಿಕೆ ಶಿವಕುಮಾರ್ ಅಧ್ಯಕ್ಷರಾದ ಮೇಲೆ ಕಟ್ಟಡ ನಿರ್ಮಾಣಕ್ಕೆ ವೇಗ ಸಿಕ್ಕಿತ್ತು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗಾಗಿ ಕರ್ನಾಟಕಕ್ಕೆ ಬಂದಿದ್ದಾಗ ನೂತನ ಕಟ್ಟಡಕ್ಕೆ ಭಾರತ್ ಜೋಡೋ ಎಂದು ಹೆಸರಿಡುವುದಾಗಿ ಘೋಷಿಸಿದ್ದರು. ಅದರಂತೆಯೇ ಕಟ್ಟಡ ನಿರ್ಮಾಣ ಪೂರೈಸಿದ್ದು ಈಗ ಉದ್ಘಾಟನೆಯಾಗುತ್ತಿದೆ. ಇದರ ನಡುವೆಯೇ ಪ್ರಿಯಾಂಕಾ, ಕರ್ನಾಟಕ ಕಾಂಗ್ರೆಸ್ಸಿಗೆ ಅದೃಷ್ಟವನ್ನೇ ಹೊತ್ತು ತರಲಿದ್ದಾರೆ ಎನ್ನುವ ನಂಬಿಕೆ ಕಾರ್ಯಕರ್ತರದ್ದು.

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿದಿದೆ. ಅಣ್ಣ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದು, ಚುನಾವಣೆಯ ಹೊಣೆಯಿಂದ ಹಿಂದೆ ಸರಿದಿದ್ದರು. ಆ ಸಂದರ್ಭದಲ್ಲಿ ಹಿಮಾಚಲ ಪ್ರದೇಶದಲ್ಲಿ ಚುನಾವಣೆಯ ನೇತೃತ್ವ ವಹಿಸಿದ್ದರು ಪ್ರಿಯಾಂಕಾ ವಾದ್ರಾ. ಮಹಿಳಾ ಮತದಾರರನ್ನು ಪಕ್ಷದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪಕ್ಷವನ್ನೂ ಬಹುಮತದೊಂದಿಗೆ ಅಧಿಕಾರಕ್ಕೆ ತಂದಿದ್ದರು. ಹೀಗಾಗಿ ಪ್ರಿಯಾಂಕಾ ವಾದ್ರಾ ಬಂದರೆ ಅಧಿಕಾರದ ಅದೃಷ್ಟವನ್ನೂ ತರಲಿದ್ದಾರೆ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರದ್ದು. ಆದರೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆ ಶಿವಕುಮಾರ್ ನಿರೀಕ್ಷೆಯೇ ಬೇರೆ. ಹಿಮಾಚಲದಲ್ಲಿಯೂ ಇದೇ ರೀತಿ ಭಿನ್ನಾಭಿಪ್ರಾಯ, ಭಿನ್ನಮತಗಳಿದ್ದವು. ಅವೆಲ್ಲವನ್ನೂ ಸರಿ ಮಾಡಿ ಒಗ್ಗಟ್ಟಿನ ಹೋರಾಟ ರೂಪುಗೊಳ್ಳುವಂತೆ ಮಾಡಿದ್ದರು ಪ್ರಿಯಾಂಕಾ. ಈಗ ಚುನಾವಣೆ ಹೊಸ್ತಿಲಲ್ಲಿ ಬರುತ್ತಿರುವ ಪ್ರಿಯಾಂಕಾ, ತನ್ಮೂಲಕ ರಾಜ್ಯ ಕಾಂಗ್ರೆಸ್ಸಿಗರ ಒಳ ಜಗಳ, ಬಣ ಜಗಳಗಳನ್ನೆಲ್ಲ ಪರಿಹರಿಸುತ್ತಾರೆ ಎಂಬ ಆಶಾಭಾವನೆ ಅವರದ್ದು.



