ಚನ್ನಪಟ್ಟಣ. ಅತಿ ಶೀಘ್ರದಲ್ಲಿಯೇ ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ. ಇಲ್ಲಿ ಗೆದ್ದಿದ್ದ ಕುಮಾರಸ್ವಾಮಿ, ಲೋಕಸಭೆಯಲ್ಲಿ ಗೆದ್ದು ಕೇಂದ್ರ ಸಚಿವರಾದ ಮೇಲೆ ಇದ್ದಕ್ಕಿದ್ದಂತೆ ಚನ್ನಪಟ್ಟಣ ಪೊಲಿಟಿಕಲ್ ಹಾಟ್ ಸ್ಪಾಟ್ ಆಗಿ ಹೋಯ್ತು. ಆದರೆ ಕ್ಯಾಂಡಿಡೇಟ್ ಯಾರು ಅನ್ನೋದು ಮಾತ್ರ ಇನ್ನೂ ಪಕ್ಕಾ ಆಗಿಲ್ಲ. ಏಕೆಂದ್ರೆ ಇಲ್ಲಿ ಅಭ್ಯರ್ಥಿಯಾಗೋದಕ್ಕೆ ಬಿಜೆಪಿಯಲ್ಲಿರೋ ಸಿಪಿ ಯೋಗೇಶ್ವರ್ ಹರಸಾಹಸ ಬೀಳ್ತಿದ್ದಾರೆ. ಯೋಗೇಶ್ವರ್ ಅವರ ಹಿಂದೆ ಒಂದು ವರ್ಗದ ಬಿಜೆಪಿ ನಾಯಕರ ಪಡೆಯಂತೂ ಇದೆ. ಆದರೆ ಕುಮಾರಸ್ವಾಮಿ ಅವರು ಗೆದ್ದಿದ್ದ ಕ್ಷೇತ್ರ, ಅವರಿಗೇ ನಿರ್ಧಾರ ಬಿಟ್ಟು ಬಿಡೋಣ ಅಂತಿದೆ ಹೈಕಮಾಂಡ್. ಹೀಗಾಗಿ ಇಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ.
ಹಾಗಾದರೆ ಕುಮಾರಸ್ವಾಮಿ ಮನಸ್ಸಿನಲ್ಲಿ ಏನಿದೆ.. ಅದು ಅವರಿಗಷ್ಟೇ ಗೊತ್ತಿದೆ. ಮೂಲಗಳ ಪ್ರಕಾರ ಆದಷ್ಟು ಬೇಗ ಅಭ್ಯರ್ಥಿ ಫೈನಲ್ ಮಾಡಿ ಎಂದು ಬಿಜೆಪಿಯ ರಾಧಾಮೋಹನ್ ಹೇಳಿದ್ದಾರಂತೆ. ಇನ್ನೂ ಟೈಂ ಇದೆಯಲ್ಲ, ನೋಡೋಣ ಅಂದ್ರೆ, ರಾಧಾಮೋಹನ್ ಅವರು ನೋ ನೋ.. ಅದು ನಿಮ್ಮ ಕ್ಷೇತ್ರ, ಎಷ್ಟು ಬೇಗ ಅಭ್ಯರ್ಥಿ ಫೈನಲ್ ಮಾಡ್ತೀರೋ, ಅಷ್ಟು ಬೇಗ ನಾಔ ಪ್ರಚಾರಕ್ಕೆ ಬರ್ತೇವೆ ಅಂದಿದ್ದಾರೆ. ವಿಷಯ ಗಂಭೀರವಾಗಿದೆ ಅನ್ನೋದು ಕುಮಾರಸ್ವಾಮಿ ಅವರಿಗೆ ಅರ್ಥವಾಗಿದೆ.
ಬಿಜೆಪಿ ಜೆಡಿಎಸ್ ಲೆಕ್ಕಾಚಾರಗಳೇನು..?
ಕ್ಷೇತ್ರವನ್ನು ಬಿಜೆಪಿಗೆ ಕೊಟ್ಟರೆ ಕ್ಷೇತ್ರ ಸಂಪೂರ್ಣವಾಗಿ ಕೈತಪ್ಪಬಹುದು ಎಂಬ ಆತಂಕ ಜೆಡಿಎಸ್ ನಾಯಕರಲ್ಲಿ ಇದೆ. ಏಕೆಂದರೆ ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ. ಇಲ್ಲಿ ಬಿಜೆಪಿಯ ಮತದಾರರ ಸಂಖ್ಯೆ ಕಡಿಮೆ. ಡಿಕೆ ಸೋದರರನ್ನು, ಗೌಡರ ಕುಟುಂಬದವರಷ್ಟೇ ಎದುರಿಸಲು ಸಾಧ್ಯ ಎನ್ನುವ ನಂಬಿಕೆ ಜೆಡಿಎಸ್‌ನಲ್ಲಿದೆ. ಆದರೆ ಕ್ಷೇತ್ರವನ್ನು ಜೆಡಿಎಸ್‌ಗೇನಾದರೂ ಕೊಟ್ಟು, ಸಿಪಿ ಯೋಗೇಶ್ವರ್ ಬಂಡಾಯವಾಗಿ ಸ್ಪರ್ಧೆ ಮಾಡಿದರೆ ಅಥವಾ ಕಾಂಗ್ರೆಸ್ಸಿಗೇ ಹೋಗಿ ಸ್ಪರ್ಧೆ ಮಾಡಿದರೆ.. ಆಗ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಪೆಟ್ಟು ಬೀಳಲಿದೆ ಎಂಬ ಆತಂಕ ಬಿಜೆಪಿಯದ್ದು. ಯೋಗೇಶ್ವರ್ ಅವರಿಗೆ, ಕುಮಾರಸ್ವಾಮಿ ಬೆಂಬಲ ನೀಡಿ ಸ್ಪರ್ಧೆ ಮಾಡಿದರೆ ಗೆಲ್ಲೋ ಚಾನ್ಸ್ ಜಾಸ್ತಿ ಅನ್ನೋದು ಬಿಜೆಪಿ ಪ್ಲಾನ್.
ಹೀಗಾಗಿಯೇ ಕುಮಾರಸ್ವಾಮಿ ಅಭ್ಯರ್ಥಿಯ ಹೆಸರು ಹೇಳದೆ ಕೋಡಂಬಳ್ಳಿ, ಇಗ್ಗಲೂರು ಸೇರಿದಂತೆ ಕೆಲವು ಕಡೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ನಾನು ನೀವು ಬೆಳೆಸಿದ ನಿಮ್ಮ ಮನೆ ಮಗ. ನೀವು ಬೆಳೆಸಿದ ನಿಮ್ಮ ಮಗನಿಗೆ ಹಾಲಾದರೂ ನೀಡಿ, ವಿಷವಾದರೂ ಕೊಡಿ. ನಾನು ಒಳ್ಳೆಯ ಕೆಲಸ ಮಾಡಿದ್ದರೆ, ಜನಪರ ಯೋಜನೆ ತಂದಿದ್ದರೆ ಬೆಂಬಲ ನೀಡಿ. ಕ್ಷೇತ್ರದಲ್ಲಿ ಅಭ್ಯರ್ಥಿಯನ್ನ ಗೆಲ್ಲಿಸಿ ಕೊಡಿ ಎಂದಿದ್ದಾರೆ.
ನಿಖಿಲ್ ಹೆಸರು ಕೂಗಿದ ಕಾರ್ಯಕರ್ತರು : ಇಗ್ಗಲೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಹೆಸರು ಘೋಷಣೆ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸುವಂತೆ ಒತ್ತಾಯಿಸಿದರು. ಈಗಾಗಲೇ ಈ ಬಗ್ಗೆ ಮೀಟಿಂಗ್ ಮಾಡಿದ್ದೀವಿ. ಇನ್ನೊಂದು ವಾರದಲ್ಲಿ ಮೈತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಕಾರ್ಯ ಕರ್ತರನ್ನು ಸಮಾಧಾನಪಡಿಸಿದ್ದಾರೆ.
ನಾನು ನಿಲ್ಲಲ್ಲ ಅಂತಿರೋ ನಿಖಿಲ್ : ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ತಾವು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡೋದಿಲ್ಲ.. ಮಾಡೋದಿಲ್ಲ.. ಮಾಡೋದಿಲ್ಲ ಅಂತ ಹೇಳ್ತಿದ್ದಾರೆ. ಹೀಗಿದ್ದ ಮೇಲೆಯೂ ನಿಖಿಲ್ ಹೆಸರು ಕೇಳಿ ಬರುತ್ತಿರೋದು ಏಕೆ..? ಈ ಪ್ರಶ್ನೆಗೆ ಉತ್ತರ ಇತಿಹಾಸದಲ್ಲಿದೆ.
ಕುಮಾರಸ್ವಾಮಿ ಇತಿಹಾಸದಲ್ಲೇ ಇದೆ ಅನುಮಾನ ಮತ್ತು ಉತ್ತರ : ಹೌದು, ಈ ಹಿಂದೆ ಕಳೆದ ಸರ್ಕಾರದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದಾಗ ಕುಮಾರಸ್ವಾಮಿ ಎರಡು ಕಡೆ ಸ್ಪರ್ಧಿಸಿ ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕಡೆ ಗೆದ್ದಿದ್ದರು. ಆಗ ತಮ್ಮ ಕುಟುಂಬದಿಂದ ಇನ್ಯಾರೂ ನಿಲ್ಲೋದಿಲ್ಲ ಎಂದೇ ಹೇಳಿದ್ದ ಕುಮಾರಸ್ವಾಮಿ, ಸಿಎಂ ಆದ ಮೇಲೆ ʻಪಕ್ಷದ ಕಾರ್ಯಕರ್ತರ ಒತ್ತಾಯʼದ ಮೇರೆಗೆ ಅನಿತಾ ಅವರನ್ನು ನಿಲ್ಲಿಸಿದ್ದರು. ಗೆದ್ದಿದ್ದರು. ಅನಿತಾ ಕುಮಾರಸ್ವಾಮಿ ಅವರು ಮಧುಗಿರಿಯಲ್ಲಿ ನಿಂತು ಗೆದ್ದಿದ್ದೂ ಕೂಡಾ ಹೀಗೆಯೇ ʻಜೆಡಿಎಸ್ ಕಾರ್ಯಕರ್ತರ ಒತ್ತಾಯʼದ ಮೇಲೆ. ಅದಾದ ಮೇಲೆ ಮಂಡ್ಯದಲ್ಲಿ ನಿಖಿಲ್ ಅಭ್ಯರ್ಥಿಯಾಗಿದ್ದು, ಆನಂತರ ರಾಮನಗರದಲ್ಲಿ ಅಭ್ಯರ್ಥಿಯಾಗಿದ್ದೂ ಕೂಡಾ ʻಜೆಡಿಎಸ್ ಕಾರ್ಯಕರ್ತರ ಒತ್ತಾಯʼದ ಮೇಲೆ. ಈಗ ಚನ್ನಪಟ್ಟಣಕ್ಕೆ ನಿಖಿಲ್ ಅಭ್ಯರ್ಥಿಯಾಗಲಿ ಎಂದು ಕಾರ್ಯಕರ್ತರು ಒತ್ತಾಯ ಮಾಡ್ತಿದ್ದಾರೆ. ಕುಮಾರಸ್ವಾಮಿ ಹೆಸರು ಫೈನಲ್ ಮಾಡಿಲ್ಲ.
ಕುಮಾರಸ್ವಾಮಿ ಹಾಗೆಲ್ಲ ಒತ್ತಾಯಕ್ಕೆ ಬಗ್ಗುವವರಲ್ಲ. ಆದರೆ ಇದು ಹಾಸನ ಜಿಲ್ಲೆಯ ಹಾಸನ ಕ್ಷೇತ್ರ ಅಲ್ಲ. ಕಾರ್ಯಕರ್ತರು ಹೇಳುತ್ತಿರುವ ಹೆಸರು ಭವಾನಿ ರೇವಣ್ಣ ಅವರದ್ದೂ ಅಲ್ಲ. ನಿಖಿಲ್ ಕುಮಾರಸ್ವಾಮಿ ಅವರದ್ದು. ಒತ್ತಾಯದ ಆಟ ಶುರುವಾಗಿದೆ.



