ದರ್ಶನ್ ಗ್ಯಾಂಗ್ ಜೊತೆಯಲ್ಲಿದ್ದವರಿಗೆ ಒಂದೊಂದೇ ಕಾಡುವುದಕ್ಕೆ ಶುರುವಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ & ಗ್ಯಾಂಗ್ ಜೈಲಿನಲ್ಲಿದೆ. ಈ ನಡುವೆ ದರ್ಶನ್ ಅವರ ಸ್ನೇಹಿತರ ಬಳಗಕ್ಕೆ ಕೂಡಾ ವಿಚಾರಣೆಯ ಬಿಸಿ ಎದುರಾಗಿದೆ. ಈ ಹಿಂದೆ ನಟ ಚಿಕ್ಕಣ್ಣ ಅವರನ್ನು ವಿಚಾರಣೆ ಮಾಡಲಾಗಿತ್ತು. ದರ್ಶನ್ ಅವರ ಜೊತೆ ಕಾಂಟ್ಯಾಕ್ಟ್ʻನಲ್ಲಿದ್ದ ಮಾಜಿ ಕಾರ್ಪೊರೇಟರ್/ಉಪ ಮೇಯರ್ ಮೋಹನ್ ರಾಜ್ (ಈತ ಬಿಜೆಪಿ ಶಾಸಕ ಸತೀಶ್ ರೆಡ್ಡಿಯವರ ಪರಮಾಪ್ತ) ಕೂಡಾ ಬಂದು ವಿಚಾರಣೆ ಎದುರಿಸಿದ್ದಾರೆ. ನಟ ಯಶಸ್ ಸೂರ್ಯ ಅವರಿಗೂ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ ಅವರ ಗೆಳತಿ ಸಮತಾ ಅವರನ್ನೂ ವಿಚಾರಣೆ ಮಾಡಲಿದ್ದಾರೆ. ಇದೀಗ ಡೈರೆಕ್ಟರ್ ಮಿಲನ ಪ್ರಕಾಶ್ (ಪ್ರಕಾಶ್ ವೀರ್) ಅವರನ್ನು ವಿಚಾರಣೆ ಮಾಡಲಾಗಿದೆ.
ಮಿಲನ ಪ್ರಕಾಶ್ ಈಗ ಪ್ರಕಾಶ್ ವೀರ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ದರ್ಶನ್ ನಟಿಸುತ್ತಿದ್ದ ‘ಡೆವಿಲ್’ ಸಿನಿಮಾದ ನಿರ್ದೇಶಕ ಮಿಲನ ಪ್ರಕಾಶ್ ಎಸಿಪಿ ಕಚೇರಿಯಲ್ಲಿ ವಿಚಾರಣೆ ಮಾಡಲಾಗಿದೆ. ಕೊಲೆ ನಡೆದ ಮರುದಿನ ಜೂನ್ 10ನೇ ತಾರೀಕು ದರ್ಶನ್ ಮೈಸೂರಿನಲ್ಲಿ ನಡೆಯುತ್ತಿದ್ದ ‘ಡೆವಿಲ್’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಿನಿಮಾದ ನಿರ್ದೇಶಕರನ್ನು ಭೇಟಿಯಾಗಿದ್ದರು. ಚಿತ್ರತಂಡವೇ ದರ್ಶನ್ ಅವರನ್ನು ಮೈಸೂರಿನ ರಾಡಿಸನ್ ಬ್ಲ್ಯೂ ಹೊಟೇಲ್‌ನಲ್ಲಿ ರೂಮ್ ಅನ್ನು ಬುಕ್ ಮಾಡಿತ್ತು. ಹೀಗಾಗಿ ದರ್ಶನ್ ಬಂಧನ ಆಗುವವರೆಗೂ ಮೈಸೂರಿನಲ್ಲಿ ಸಿನಿಮಾ ಸೆಟ್ಟಿಗೆ ಸಂಬಂಧಿಸಿದಂತೆ ಏನೆಲ್ಲ ನಡೀತು ಅನ್ನುವ ಮಾಹಿತಿಯನ್ನು ಕಲೆ ಹಾಕಿದ್ದರು ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ದರ್ಶನ್ ಮನೆಯಲ್ಲಿ 37 ಲಕ್ಷ ರೂಪಾಯಿ ಹಾಗೂ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂಪಾಯಿ ಹಣ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದರು. ಈ ಹಣಕ್ಕೂ ಮಿಲನ ಪ್ರಕಾಶ್‌ಗೂ ಸಂಬಂಧವಿದೆ ಅನ್ನೋ ಮಾತು ಕೇಳಿ ಬಂದಿತ್ತು.
ಮಿಲನ ಪ್ರಕಾಶ್ ಅವರ ವಿಚಾರಣೆ ಇನ್ನೂ ಮುಗಿದಿಲ್ಲ. ಸುಮಾರು ೨ ಗಂಟೆಗಳ ವಿಚಾರಣೆ ಬಳಿಕವೂ ಮತ್ತೆ ವಿಚಾರಣೆಗೆ ಬರುವಂತೆ ಹೇಳಿ ಕಳಿಸಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಅವರು ನಿಮ್ಮೊಂದಿಗೆ ಏನಾದರೂ ವಿಷಯ ಹೇಳಿಕೊಂಡಿದ್ರಾ..? ಯಾವಾಗಿನಿಂದ ಚಿತ್ರೀಕರಣ ಆರಂಭ ಮಾಡಿದ್ರಿ, ಯಾವಾಗ ಸ್ಥಗಿತವಾಗಿತ್ತು?ರೇಣುಕಾಸ್ವಾಮಿ ಕೊಲೆ ನಡೆದ ನಂತರ ದರ್ಶನ್ ನಿಮ್ಮ ಬಳಿ ಏನೇನು ಮಾತನಾಡಿದ್ರು. ಪ್ರಕರಣಕ್ಕೂ ಮುನ್ನ ಕೊನೆಯ ಬಾರಿ ದರ್ಶನ್ ಅವರನ್ನು ಭೇಟಿಯಾಗಿದ್ದು ಯಾವಾಗ? ಡೆವಿಲ್ ಚಿತ್ರಕ್ಕೆ ಸಂಬಂಧಪಟ್ಟಂತೆ ದರ್ಶನ್‌ಗೆ ಹಣ ನೀಡಿದ್ರಾ.. ಮೊದಲಾದ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಪಡೆದಿದ್ದಾರೆ.
ಇಲ್ಲೇನಾದರೂ ಪ್ರಕಾಶ್ ಅವರಿಗೆ ಕೊಲೆಯ ಬಗ್ಗೆ ಮಾಹಿತಿ ಇತ್ತು ಹಾಗೂ ಅದನ್ನು ಮುಚ್ಚಿಟ್ಟಿದ್ದರು ಎಂದಾದರೆ, ಮಿಲನ ಪ್ರಕಾಶ್ ಅವರಿಗೆ ಸಂಕಷ್ಟ ಶುರುವಾಗಲಿದೆ. ಮಿಲನ ಪ್ರಕಾಶ್ ಅವರಷ್ಟೇ ಅಲ್ಲದೆ ನಟ ಯಶಸ್ ಸೂರ್ಯ, ಪವಿತ್ರಾ ಗೌಡ ಅವರ ಆಪ್ತ ಗೆಳತಿ ಸಮತಾ ಅವರಿಗೂ ನೋಟಿಸ್ ನೀಡಲಾಗಿದೆ.
ಮಿಲನ ಪ್ರಕಾಶ್ ಹಿನ್ನೆಲೆ :
ಮಿಲನ ಪ್ರಕಾಶ್ ಎಂದೇ ಹೆಸರಾಗಿರುವ ಪ್ರಕಾಶ್ ಅವರ ತಂದೆ ಜಯರಾಂ. ಆಟೋ ರಾಜ, ಕಾಮನಬಿಲ್ಲು ಗಲಾಟೆ ಸಂಸಾರ, ರುದ್ರ ತಾಂಡವ, ಪಾವನ ಗಂಗಾ ಮೊದಲಾದ ಸಪ್ತಸ್ವರ ಮೂವಿಸ್ ಬ್ಯಾನರಿನಲ್ಲಿ, ಜೈಮಾತಾ ಕಂಬೈನ್ಸ್ ಬ್ಯಾನರ್‌ನಲ್ಲಿ ಖುಷಿ, ರಿಷಿ, ಮಿಲನ, ಗೋಕುಲ ಹಾಗೂ ತಾರಕ್ ಚಿತ್ರಗಳನ್ನು ನಿರ್ಮಾಣ ಮಾಡಿದವರು. ಇವುಗಳಲ್ಲಿ ಖುಷಿ, ರಿಷಿ, ಮಿಲನ, ಗೋಕುಲ ಹಾಗೂ ತಾರಕ್ ಚಿತ್ರಗಳ ನಿರ್ದೇಶಕರೇ ಈ ಮಿಲನ ಪ್ರಕಾಶ್. ಮಿಲನ ಸಿನಿಮಾ ನಂತರ ಮಿಲನ ಪ್ರಕಾಶ್ ಎಂದೇ ಫೇಮಸ್ ಆದರು.
ಡಾ.ರಾಜ್ ಕುಟುಂಬದ ಸಂಬಂಧಿಕರೂ ಆಗಿರುವ ಪ್ರಕಾಶ್ ಅವರು ವಿನಯ್ ರಾಜ್ ಕುಮಾರ್ ಅವರನ್ನು ಸಿದ್ಧಾರ್ಥ ಚಿತ್ರದ ಮೂಲಕ ಲಾಂಚ್ ಮಾಡಿದ್ದವರು. ಇದೀಗ ಡೆವಿಲ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.



