ಕೆಎಂಎಫ್. ಕರ್ನಾಟಕದ ರೈತರ ಜೀವನಾಡಿ.




ಮಂಡ್ಯದಲ್ಲಿ ನಡೆದ ಕೆಎಂಎಫ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮಿತ್ ಶಾ ಕರ್ನಾಟಕದ ಕೆಎಂಎಫ್ ಹಾಗೂ ಗುಜರಾತಿನ ಅಮುಲ್ ಎರಡೂ ಪರಸ್ಪರ ಕೈಜೋಡಿಸಿದರೆ ಇಡೀ ದೇಶದ ರೈತರ ಬದುಕನ್ನೇ ಬದಲಿಸಬಹುದು ಎಂದು ಹೇಳಿಕೆ ನೀಡಿದ್ದರು. ತಪ್ಪೇನಲ್ಲ, ಹಾಗೆ ನೋಡಿದರೆ ಕೆಎಂಎಫ್‍ಗೆ ಸ್ಫೂರ್ತಿಯೇ ಅಮುಲ್. ಕುರಿಯನ್ ಎಂಬ ಕನಸುಗಾರನ ಕನಸು ಅಮುಲ್. ಅದನ್ನೇ ಮಾದರಿಯಾಗಿಟ್ಟುಕೊಂಡಿರೋದು ಕೆಎಂಎಫ್, ಸೃಷ್ಟಿಸಿರುವುದು ಹೊಸ ಹೆಜ್ಜೆ. ತಾಂತ್ರಿಕವಾಗಿ ಅಮುಲ್, ಕೆಎಂಎಫ್‍ಗಿಂತ ಒಂದು ಹೆಜ್ಜೆ ಮುಂದಿದೆ. ಹೆಚ್.ಡಿ.ರೇವಣ್ಣ ಕೆಎಂಎಫ್‍ನಿಂದ ದೂರವಾದ ನಂತರ ಕೆಎಂಎಫ್‍ಗೆ ಹೊಸತನಗಳೂ ನಿಂತು ಹೋಗಿದೆ ಎನ್ನುವುದನ್ನು ಖುದ್ದು ಕೆಎಂಎಫ್‍ನವರೂ ಅಂತರಂಗದಲ್ಲಿ ಒಪ್ಪುತ್ತಾರೆ. ಕರ್ನಾಟಕದಲ್ಲಿ ಕೆಎಂಎಫ್‍ನ್ನು ಯಶಸ್ವಿ ಉದ್ಯಮವಾಗಿಸಿ, ರೈತರಿಗೂ ಲಾಭವಾಗುವಂತೆ ರೂಪಿಸುವಲ್ಲಿ ಹೆಚ್.ಡಿ.ರೇವಣ್ಣನವರ ಕೊಡುಗೆ ದೊಡ್ಡದು.


ಅಮಿತ್ ಶಾ ಹೇಳಿದ್ದು ಪಂಚಾಯ್ತಿಗೊಂದು ಡೈರಿ ಸ್ಥಾಪಿಸಬೇಕು ಎಂಬ ವಿಚಾರ. ಕೆಎಂಎಫ್ ಹಾಗೂ ಅಮುಲ್ ಪರಸ್ಪರ ಸಹಕಾರ ನೀಡಿದರೆ ದೇಶದ ಕೋಟ್ಯಾನುಕೋಟಿ ರೈತರ ಬದುಕು ಬದಲಿಸಬಹುದು ಎಂಬ ವಿಚಾರ. ಅದರಲ್ಲಿ ತಪ್ಪೇನಿದೆ? ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಸುಳ್ಳು ಸುಳ್ಳೇ ಹೇಳಿ ಜನರನ್ನು ಕೆಣಕುವ ತಂತ್ರ ಮಾಡುತ್ತಿದ್ದಾರೆ. ದಾರಿ ತಪ್ಪಿಸುವ ಸಂಚು ಮಾಡುತ್ತಿದ್ದಾರೆ. ಇಂತಹವನ್ನೆಲ್ಲ ನಂಬಬೇಡಿ ಎಂದರು ಬೊಮ್ಮಾಯಿ.

ಎಸ್.ಟಿ.ಸೋಮಶೇಖರ್ ಅವರಂತೂ 26 ಲಕ್ಷ ಜನ ಇರುವ ಸಂಸ್ಥೆಯ ವಿಲೀನ ಮಾಡುವ ಯೋಚನೆಯಾದರೂ ಸಾಧ್ಯವೇ? ವಿಲೀನದ ಚರ್ಚೆಯೂ ಆಗಿಲ್ಲ. ಕಲ್ಪನೆ ಮಾಡಿಕೊಂಡು ಹೇಳಿದ್ದಕ್ಕೆಲ್ಲ ಸ್ಪಷ್ಟನೆ ಕೊಡಬೇಕಾಗಿದೆ ಎಂದು ಸಿಡಿದರು. ಮಾರ್ಕೆಟಿಂಗ್‍ನಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಅಮಿತ್ ಶಾ ಹೇಳಿದರೆ, ತಪ್ಪಾಗಿ ಅರ್ಥ ಮಾಡಿಕೊಂಡು ಮಾತನಾಡಿ ಗೊಂದಲ ಸೃಷ್ಟಿಸುತ್ತಿದ್ಧಾರೆ ಎಂದವರು ಪ್ರಲ್ಹಾದ್ ಜೋಷಿ. ಆದರೆ, ಎಲ್ಲಿಯೂ ಹೆಚ್.ಡಿ.ರೇವಣ್ಣ ಈ ಬಗ್ಗೆ ಮಾತನಾಡಲಿಲ್ಲ ಎಂಬುದೂ ವಿಶೇಷ.



