ನಟ ಪುನೀತ್ ರಾಜ್ ಕುಮಾರ್, ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಪುನೀತ್ ಅವರಿದ್ದ ಕಾರಣಕ್ಕಾಗಿಯೇ ಯಶಸ್ವಿಯಾಗಿದ್ದ ರಿಯಾಲಿಟಿ ಶೋ ಅದು. ಅದೊಂದು ಕಾರ್ಯಕ್ರಮ ಬಿಟ್ಟರೆ, ಬೇರಾವ ಕಾರ್ಯಕ್ರಮವನ್ನೂ ಪುನೀತ್ ನಡೆಸಿಕೊಡಲಿಲ್ಲ. ಈಗ ಅವರ ಸ್ಥಾನಕ್ಕೆ ಕಿಚ್ಚ ಸುದೀಪ್ ಬರಲಿದ್ದಾರೆ ಅನ್ನೋ ಸುದ್ದಿ ಇದೆ.
ಕನ್ನಡದ ಕೋಟ್ಯಧಿಪತಿ. ಕನ್ನಡದ ಯಶಸ್ವಿ ರಿಯಾಲಿಟಿ ಶೋಗಳಲ್ಲಿ ಒಂದು. ಹಿಂದಿಯ ಕೌನ್ ಬನೇಗಾ ಕರೋಡ್ ಪತಿಯ ಕನ್ನಡ ಅವತರಣಿಕೆ. ಶೋ ಯಶಸ್ವಿಯಾಯಿತಾದರೂ, ನಿರಂತರವಾಗಿ ನಡೆಯಲಿಲ್ಲ. ಮೊದಲೆರಡು ಸೀಸನ್‌ಗಳನ್ನ ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಟ್ಟರೆ, ಮೂರನೇ ಸೀಸನ್ನಿಗೆ ಪುನೀತ್ ಬದಲಿಗೆ ರಮೇಶ್ ಅರವಿಂದ್ ಬಂದರು. ಚಾನೆಲ್ಲು ಬದಲಾಗಿದ್ದೂ ಅದಕ್ಕೆ ಕಾರಣ ಇರಬಹುದು. ಆದ್ರೆ 4ನೇ ಸೀಸನ್ ವೇಳೆಗೆ ಕನ್ನಡದ ಕೋಟ್ಯಧಿಪತಿ ಮತ್ತೆ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯಲ್ಲೇ ಶುರುವಾಗಿತ್ತು. ರಮೇಶ್ ಅರವಿಂದ್ ಯಶಸ್ವಿ ನಿರೂಪಕರಾಗಿದ್ದರೂ, ಕನ್ನಡದ ಕೋಟ್ಯಧಿಪತಿ ನಿರೂಪಣೆಯಲ್ಲಿ ಸೋತಿದ್ದರು. ಬಹುಶಃ ಪುನೀತ್ ಅವರ ಜಾಗದಲ್ಲಿ ಬೇರೊಬ್ಬರನ್ನು ಕಲ್ಪಿಸಿಕೊಳ್ಳೋದಕ್ಕೆ ಕನ್ನಡಿಗರು ವಿಫಲರಾದರೇನೋ..
ಈ ನಡುವೆ ಪುನೀತ್ ಅವರ ಅಕಾಲಿಕ ನಿಧನದಿಂದಾಗಿ ʻಕನ್ನಡದ ಕೋಟ್ಯಧಿಪತಿʼ ಕಾರ್ಯಕ್ರಮ ಸ್ತಬ್ಧವಾಗಿತ್ತು. ಇದೀಗ ಆ ಶೋ ಕಲರ್ಸ್, ಸ್ಟಾರ್ ಸುವರ್ಣದಿಂದ ಜೀ ಕನ್ನಡಕ್ಕೆ ಹೋಗಿದೆಯಂತೆ. ಪುನೀತ್ ಸ್ಥಾನಕ್ಕೆ ಕಿಚ್ಚ ಸುದೀಪ್ ಬರುತ್ತಿದ್ದಾರಂತೆ.
ಕೌನ್ ಬನೇಗಾ ಕರೋಡ್ಪತಿ.. ಬಾಲಿವುಡ್ ಅಂಗಳದಲ್ಲಿ ಈ ಶೋ, ಬರೋಬ್ಬರಿ 16 ಸೀಸನ್ ಗಳನ್ನ ಯಶಸ್ವಿಯಾಗಿ ಪೂರೈಸಿ 17ನೇ ಸೀಸನ್ ಗೆ ಸಜ್ಜಾಗುತ್ತಿದ್ದರೆ, ಕನ್ನಡದಲ್ಲಿ ಶುರುವಾದರೆ ಇದು 5ನೇ ಸೀಸನ್ ಆಗಲಿದೆ.
ಈ ಅವಧಿಯಲ್ಲಿ ಕನ್ನಡದ ಕೋಟ್ಯಧಿಪತಿ ಎರಡು ಚಾನೆಲ್ ಬದಲಿಸಿದೆ. 3ನೇ ಚಾನೆಲ್ ಆಗಿ ಜೀ ಕನ್ನಡ ಎಂಟ್ರಿ ಕೊಟ್ಟಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳುತ್ತಿರುವುದಾಗಿ ಘೋಷಿಸಿದ್ದರು. ಈಗ ನಡೆಯುತ್ತಿರುವ ಸೀಸನ್ ನಂತರ ಮತ್ತೆ ಸುದೀಪ್ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲ್ಲ. ಇದರ ನಡುವೆ ಮ್ಯಾಕ್ಸ್ ಚಿತ್ರವನ್ನು ಜೀ ಕನ್ನಡದಲ್ಲಿ ದೊಡ್ಡದಾಗಿಯೇ ಪ್ರಮೋಟ್ ಮಾಡಿದ್ದ ಸುದೀಪ್ ʻಜೀ ಕನ್ನಡಕ್ಕೂ ಆಗಾಗ್ಗೆ ಬನ್ನಿ ಸರ್ʼ ಎಂದು ಅನುಶ್ರೀ ಹೇಳಿದಾಗ.. ನೀವು ಕರೆಯೋದೇ ಇಲ್ಲ ಎಂದಿದ್ದರು ಸುದೀಪ್. ಆದರೆ ಒಟ್ಟಾರೆ ಮಾತಿನ ಸಾರಾಂಶದ ಅರ್ಥ ಸುದೀಪ್ ಈಗಾಗಲೇ ಓಕೆ ಎಂದಿದ್ದಾರೆ ಎನ್ನುವಂತಿತ್ತು.
ಸದ್ಯಕ್ಕೆ ಸುದೀಪ್ ಕಲರ್ಸ್ ಜೊತೆ ಒಪ್ಪಂದದಲ್ಲಿದ್ದಾರೆ. ಹೀಗಾಗಿ ಬಿಗ್ ಬಾಸ್ ಅಧಿಕೃತವಾಗಿ ಮುಗಿದ ನಂತರ ಜೀ ಕನ್ನಡದವರು ಶೋ ಮತ್ತು ಸುದೀಪ್ ನಿರೂಪಣೆಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂಬ ಸುದ್ದಿ ಇದೆ.
ತೆಲುಗಿನಲ್ಲಿ ಇದೇ ಮಾದರಿಯ ಶೋಗಳ ನಿರೂಪಕರು ಬದಲಾಗಿದ್ದಾರೆ. ಜೂ.ಎನ್‌ಟಿಆರ್, ನಾಗಾರ್ಜು ನಡೆಸಿಕೊಟ್ಟು ಇಬ್ಬರೂ ಯಶಸ್ವಿಯಾಗಿದ್ದಾರೆ. ತಮಿಳಿನಲ್ಲಿ ಪ್ರಕಾಶ್ ರೈ, ಕಮಲ್ ಹಾಸನ್ ಕೂಡಾ ಮಾಡಿದ್ದಾರೆ. ಆದರೆ ಹಿಂದಿ ಬಿಟ್ಟರೆ ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು ಕನ್ನಡದಲ್ಲಿ ಮಾತ್ರ. ಈಗ ಆ ಜಾಗಕ್ಕೆ ಕಿಚ್ಚ ಬರ್ತಾರಂತೆ. ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆಯೇ ಅಧಿಕೃತ ಮಾಹಿತಿ ಹೊರಬೀಳಲಿದೆ.



