ಲೋಕಸಭೆ ಎಲೆಕ್ಷನ್ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯ ನಿರ್ಧಾರ ಮಾಡಲಿದೆ ಎಂದು ಇತ್ತೀಚೆಗೆ ಗುಬ್ಬಿ ಶಾಸಕ ಶ್ರೀನಿವಾಸ್ ಹೇಳಿದ್ದು ರಾಜ್ಯಾದ್ಯಂತ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಶ್ರೀನಿವಾಸ್ ಅಷ್ಟೇ ಅಲ್ಲ, ಈ ಹಿಂದೆ ಇದೇ ಅರ್ಥ ಬರುವ ಮಾತುಗಳನ್ನು ಹೆಚ್.ಸಿ.ಮಹದೇವಪ್ಪ ಸೇರಿದಂತೆ ಸಿದ್ದು ಅತ್ಯಾಪ್ತರೇ ಹೇಳಿದ್ದರು. ಎಲೆಕ್ಷನ್ ಪ್ರಚಾರದ ವೇಳೆಯಲ್ಲಿಯೇ ಅರಸೀಕೆರೆಯ ಶಿವಲಿಂಗೇಗೌಡ.. ಕಾಂಗ್ರೆಸ್ ಗೆದ್ದರೆ ನಾನು ಮಂತ್ರಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ.. ಕ್ಯಾಬಿನೆಟ್ ಭರ್ತಿಯಾಗಿದೆ. ಶಿವಲಿಂಗೇ ಗೌಡ ಮಂತ್ರಿಯಾಗಬೇಕು ಎಂದರೆ.. ಯಾರಾದರೊಬ್ಬ ಮಂತ್ರಿ ರಾಜೀನಾಮೆ ಕೊಡಬೇಕು ಇಲ್ಲವೇ ಸಿಎಂ ಬದಲಾಗಬೇಕು. ಅಂತದ್ದರಲ್ಲಿ.. ಸಿಎಂ ಸಿದ್ದರಾಮಯ್ಯ ಕೂಡಾ ಅದೇ ರೀತಿಯ ಮಾತು ಹೇಳಿದ್ಧಾರೆ.
ಮೈಸೂರು ತಾಲೂಕಿನ ಬಿಳಿಗೆರೆ ಬೋರೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವರುಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ.. ವರುಣದಲ್ಲಿ ನಾನು ಮತ್ತು ಸಚಿವ ಮಹದೇವಪ್ಪ ಅವರ ಪರಿಚಯ ಎಲ್ಲರಿಗೂ ಇದೆ. ನಾನು ಇಲ್ಲಿನ ಶಾಸಕ, ಇನ್ನು ಯತೀಂದ್ರ ಇಲ್ಲಿನ ಮಾಜಿ ಶಾಸಕ. ನಾವು ಮೂವರು ಇಲ್ಲಿರುವಾಗ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಗೆ ಕನಿಷ್ಠ 60 ಸಾವಿರ ಲೀಡ್ ಆದರೂ ಸಿಗಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಇಷ್ಟೇ ಹೇಳಿದ್ದರೆ ಯಾವ ಸುದ್ದಿಯೂ ಆಗುತ್ತಿರಲಿಲ್ಲವೇನೋ.. ಆದರೆ.. ಒಂದಿಷ್ಟು ಲೆಕ್ಕಾಚಾರ ಹೇಳಿದ್ಧಾರೆ. ಆ ಲೆಕ್ಕಾಚಾರದ ಕೊನೆಗೆ ಹೇಳಿರುವ ಆ ಒಂದು ಮಾತು ಸಂಚಲನ ಸೃಷ್ಟಿಸಿದೆ.
2019ರ ಲೋಕಸಭಾ ಚುನಾವಣೆತಲ್ಲಿ ನಮ್ಮ ಅಭ್ಯರ್ಥಿ ಧ್ರುವನಾರಾಯಣ ಕೇವಲ 1,817 ಮತಗಳ ಅಂತರದಿಂದ ಸೋತ್ತಿದ್ದರು. ಆದರೆ ಈ ಬಾರಿ ಅಸೆಂಬ್ಲಿಯಲ್ಲಿ ನನ್ನನ್ನು ನೀವು 48 ಸಾವಿರ ಮತಗಳ ಅಂತರದಿಂದ ವರುಣದಿಂದ ಗೆಲ್ಲಿಸಿದ್ದೀರಿ. ಇದೀಗ ಈ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ನನಗೆ ನೀಡಿದಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಅಂದರೆ ಕನಿಷ್ಠ 60 ಸಾವಿರ ಮತಗಳ ಲೀಡ್ ಕೊಡಿಸ್ತೀರಾ.. ಒಂದು ವೇಳೆ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಅಷ್ಟು ಮತಗಳ ಅಂತರದಿಂದ ಗೆಲ್ಲಿಸಿದರೆ ನನಗೆ ಖುಷಿ. ಆಗ ನನ್ನನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದ ಅವರು, ನಾನು ಇರಬೇಕೋ, ಬೇಡ್ವೋ ಎಂದು ಸಭಿಕರನ್ನೇ ಪ್ರಶ್ನಿಸಿದ್ದಾರೆ.
ಚರ್ಚೆಯಾಗುತ್ತಿರುವ ಸಿದ್ದರಾಮಯ್ಯ ಭಾಷಣದ ಅಂಶ ಇಷ್ಟೇ.. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಖುಷಿಯಾಗುತ್ತೆ.. ಮತ್ತು ಆಗ ನನ್ನನ್ನು ಅಂದರೆ ಸಿದ್ದರಾಮಯ್ಯ ಅವರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ನಾನು ಇರಬೇಕೋ, ಬೇಡ್ವೋ ಎಂದು ಕೇಳಿರೋದು.
ಅಂದ್ರೆ ಚುನಾವಣೆಯಲ್ಲಿ ಹಿನ್ನಡೆಯಾದರೆ.. ಸಿದ್ದರಾಮಯ್ಯ ಅವರ ಸಿಎಂ ಪಟ್ಟ ಇರೋದಿಲ್ವಾ..? ಸಿದ್ದರಾಮಯ್ಯ ಅವರ ಅಧಿಕಾರ ತೂಗುಯ್ಯಾಲೆಯಲ್ಲಿದೆಯಾ.. ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಈ ಬಾರಿ ಈ ರೀತಿಯಲ್ಲಿ ಹೇಳಿಕೆ ಕೊಟ್ಟಿರುವುದು ಖುದ್ದು ಸಿದ್ದರಾಮಯ್ಯ.
ಈ ಮೂಲಕ ಇದೇ ರೀತಿ ನಡೆಯುತ್ತಿರುವ ಹಲವು ಚರ್ಚೆಗಳಿರುವಾಗಲೇ ಸಿದ್ದರಾಮಯ್ಯ ಈ ರೀತಿ ಹೇಳಿರುವುದು ಅಚ್ಚರಿಗೆ ದೂಡಿದೆ. ಈ ಹಿಂದೆಂದೂ ಈ ರೀತಿಯ ಪ್ರಚಾರ ಮಾಡದೇ ಇರುವ ಸಿದ್ದರಾಮಯ್ಯ, ಕಳೆದ ವಾರವಷ್ಟೇ 4 ದಿನ ಮೈಸೂರಿನಲ್ಲಿ ಬೀಡು ಬಿಟ್ಟಿದ್ದರು. ಈಗ ಕೂಡಾ ಮೂರು ದಿನ ಬೀಡು ಬಿಟ್ಟಿದ್ದಾರೆ.ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಿರುವ ಸಿದ್ದರಾಮಯ್ಯ ಅವರು ಸೋಮವಾರದಿಂದ ತವರು ಜಿಲ್ಲೆಯಲ್ಲಿ ಮತ್ತೆ ಮೂರು ದಿನದ ಪ್ರವಾಸ ಆರಂಭಿಸಿದ್ದಾರೆ. ಈ ಮೂರೂ ಕ್ಷೇತ್ರಗಳು ಸಿದ್ದರಾಮಯ್ಯ ಅವರ ವ್ಯಾಪ್ತಿಯಲ್ಲಿದ್ದು, ಇಲ್ಲಿ ಗೆದ್ದರಷ್ಟೇ ಸಿದ್ದರಾಮಯ್ಯ ಪವರ್ ಫುಲ್ ಎಂಬ ಸಂದೇಶ ಹೋಗಲಿದೆ.



