ರಾಜ್ಯದಲ್ಲಿ ಚುನಾವಣೆ ಬಿಸಿ ಯೇರುತ್ತಿದ್ದಂತೆಯೇ ಬಿರುಗಾಳಿ ಎಬ್ಬಿಸಿದ್ದು ಸಿದ್ದರಾಮೋತ್ಸವವಾದರೂ ಅದು ಒಂದು ದಿನದ ಹಬ್ಬವಾಯ್ತು. ಮೋದಿ ಬಂದಾಗ ಬಿಜೆಪಿ ಗ್ರಾಫ್ ಏರುತ್ತದಾದರೂ ಅಷ್ಟು ಹೊತ್ತಿಗೆ ಇನ್ನೇನೋ ಎಡವಟ್ಟಾಗಿ ಏರಿದ್ದ ಗ್ರಾಫ್ ಎಲ್ಲ ಢಮಾರ್ ಆಗುತ್ತದೆ. ಆದರೆ ಇದುವರೆಗೆ ಅಚ್ಚರಿ ನೀಡಿರುವುದು ಕುಮಾರಸ್ವಾಮಿ. ರಾಜಕೀಯ ಪಂಡಿತರ ಲೆಕ್ಕಾಚಾರವನ್ನೆಲ್ಲ ತಲೆಕೆಳಗು ಮಾಡಿ ಪಂಚರತ್ನ ಯಾತ್ರೆ ಸಂಘಟಿಸಿದರು. ಈ ಬಾರಿ ಕುಮಾರಸ್ವಾಮಿಗೆ, ಜೆಡಿಎಸ್‍ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದವರೆಲ್ಲ ಬೆಚ್ಚಿ ಬಿದ್ದು ಕುಳಿತುಕೊಳ್ಳುವಂತೆ ಮಾಡಿದ್ದು ಪಂಚರತ್ನ ಯಾತ್ರೆಯ ಯಶಸ್ಸು. ಸೇರುತ್ತಿದ್ದ ಜನ, ತೋರಿಸುತ್ತಿರುವ ಪ್ರೀತಿ ದಾಖಲೆ ಬರೆದಿದ್ದಷ್ಟೇ ಅಲ್ಲ, ಬಿಜೆಪಿ ಹಾಗೂ ಕಾಂಗ್ರೆಸ್ ಚಿಂತೆಗೀಡಾಗುವಂತೆ ಮಾಡಿತು. ಅದೇ ಹುಮ್ಮಸ್ಸಿನಲ್ಲಿ ಅಭ್ಯರ್ಥಿಗಳ ಹೆಸರನ್ನೂ ಘೋಷಣೆ ಮಾಡಿದ ಕುಮಾರಸ್ವಾಮಿ, ಶಾಕ್ ಮೇಲೆ ಶಾಕ್ ಕೊಡುತ್ತಲೇ ಹೋದರು. ಈಗ ಪ್ರಜಾಧ್ವನಿ ಯಾತ್ರೆಯ ಮೊರೆ ಹೋಗಿದೆ ಕಾಂಗ್ರೆಸ್.


ವೇದಿಕೆಯ ಮೇಲೆ ಭಾಷಣ ಮಾಡುವ ಸಿದ್ದರಾಮಯ್ಯನವರು ಇಂತಹವುಗಳಿಗೆಲ್ಲ ತಲೆಕೆಡಿಸಿಕೊಳ್ಳಲ್ಲ. ಸಂಘಟನೆಗಿಂತ ಹೆಚ್ಚು ನಾಯಕರ ಜೊತೆಯಲ್ಲೇ ತಂತ್ರಗಾರಿಕೆ ರೂಪಿಸುವ ಸಿದ್ದರಾಮಯ್ಯ ಕೂಡಾ ಪಂಚರತ್ನ ಯಾತ್ರೆಗೆ ಸಿಕ್ಕ ಯಶಸ್ಸು ನೋಡಿ ಅಲರ್ಟ್ ಆಗಿದ್ದಾರೆ.

ಆದರೆ ಕುಮಾರಸ್ವಾಮಿ ಪಂಚರತ್ನ ಯಾತ್ರೆಯಲ್ಲಿ ಕುಮಾರಸ್ವಾಮಿಯವರಿಗೆ ಹಾಕಿದ ಹಾರಗಳು ಕೇವಲ ಹಾರಗಳಾಗಿರಲಿಲ್ಲ. ಅವುಗಳ ಮೂಲಕ ತಾವು ಹಾಗೂ ತಮ್ಮದು ರೈತರ ಪಕ್ಷ ಎಂಬ ಸಂದೇಶವೂ ಇತ್ತು. ಅವರಿಗಿಂತ ನಾವು ಡಿಫರೆಂಟ್ ಆಗಿ ಹಾರ ಮಾಡಿಸಬೇಕು ಎಂಬ ಒಂದು ಆಲೋಚನೆಯೇ ಕಾರ್ಯಕರ್ತರನ್ನೆಲ್ಲ ವಿಭಿನ್ನವಾಗಿ ಆಲೋಚಿಸುವಂತೆ ಮಾಡಿತ್ತು. ಆಲೋಚನೆ ನೀಡುವ ಉತ್ಸಾಹ ಚುನಾವಣೆವರೆಗೂ ಇದ್ದರೆ ಆಟವೇ ಬೇರೆ. ರೋಚಕತೆಯೇ ಬೇರೆ.



