ಕಚ್ಚತೀವು. ಭಾರತ ಮತ್ತು ಶ್ರೀಲಂಕಾ ದೇಶಗಳ ನಡುವೆ ಇರುವ ದ್ವೀಪ. ಪಾಕ್ ಜಲಸಂಧಿಯಲ್ಲಿರುವ ಈ ದ್ವೀಪ 1974ರ ವರೆಗೂ ಭಾರತದ ವಶದಲ್ಲೇ ಇತ್ತು. ಈಗ ಅದು ಶ್ರೀಲಂಕಾ ವಶದಲ್ಲಿದೆ. ಅದನ್ನು ಶ್ರೀಲಂಕಾಗೆ ಕೊಟ್ಟವರು ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹರ ಲಾಲ್ ನೆಹರು. ಕಚ್ಚತೀವು ಒಂದು ಸಣ್ಣ ದ್ವೀಪ. ಆ ದ್ವೀಪದ ಬಗ್ಗೆ ಭಾರತಕ್ಕೆ ಆಸಕ್ತಿಯೇನೂ ಇಲ್ಲ ಎಂದು ನೆಹರು ಅಧಿಕೃತವಾಗಿಯೇ ಹೇಳಿದ್ದರು. ಅದೆಲ್ಲವನ್ನೂ ಬಿಜೆಪಿ ತಮಿಳುನಾಡು ಘಟಕದ ರಾಜ್ಯಾಧ್ಯಕ್ಷ ಅಣ್ಣಾಮಲೈ ಬಹಿರಂಗಪಡಿಸಿದ್ಧಾರೆ. ಅದಕ್ಕೆ ಅವರು ತಮಿಳುನಾಡು ಸರ್ಕಾರವೇ ಕೊಟ್ಟಿರುವ ಆರ್ʻಟಿಐ ದಾಖಲೆಯನ್ನು ಉಲ್ಲೇಖಿಸಿದ್ಧಾರೆ.
ಕಚತೀವು ದ್ವೀಪದ ಹಿಂದಿನ ಇತಿಹಾಸ ಲಭ್ಯವಿಲ್ಲವಾದರೂ.. 1875ರ ನಂತರದ ದಾಖಲೆಗಳು ಅಧಿಕೃತವಾಗಿ ಸಿಕ್ಕಿವೆ. ಅವುಗಳ ಪ್ರಕಾರ ಈ ದ್ವೀಪವನ್ನು ಬ್ರಿಟಿಷರು ರಾಮನಾಥಪುರದ ರಾಜನಿಗೆ 1875ರಲ್ಲಿ ಜಮೀನ್ದಾರಿ ಕಾಯ್ದೆಯಡಿ ಬರೆದು ಕೊಟ್ಟಿದ್ದರು. ದಾಖಲೆಗಳ ಪ್ರಕಾರ ಸಿಲೋನ್ ವಶದಲ್ಲಿದ್ದ ಕಚ್ಚತೀವು ದ್ವೀಪ, ಸಿಲೋನ್ʻಗೆ (ಈಗಿನ ಶ್ರೀಲಂಕಾವನ್ನು ಆಗ ಸಿಲೋನ್ ಎಂದು ಕರೆಯಲಾಗುತ್ತಿತ್ತು)
ಯಾವುದೇ ಕಪ್ಪಕಾಣಿಕೆಯನ್ನು ಕೊಡುತ್ತಿರಲಿಲ್ಲ. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಭಾರತೀಯ ನೌಕಾಪಡೆಯು, ಕಚ್ಚತೀವುನಲ್ಲಿ ಸಮರಾಭ್ಯಾಸ ಮಾಡುವುದಕ್ಕೆ ಮುಂದಾಯ್ತು. ಅದಕ್ಕೆ ಶ್ರೀಲಂಕಾ ಆಕ್ಷೇಪ ವ್ಯಕ್ತಪಡಿಸಿತು.
ಬ್ರಿಟಿಷರು ಮತ್ತು ಚೀನೀಯರು ರಚಿಸಿದ ಭೂಪಟದಲ್ಲಿ ಕಚ್ಚತೀವು ದ್ವೀಪ ಶ್ರೀಲಂಕಾದಲ್ಲೇ ಇದೆ. ಹೀಗಾಗಿ ಅದು ನಮಗೇ ಸೇರಿದ್ದು ಎಂದು ವಾದಿಸಿದ್ದ ಶ್ರೀಲಂಕಾ, 1955ರ ಅಕ್ಟೋಬರ್‌ನಲ್ಲಿ ಅಲ್ಲಿ ಸಮರಾಭ್ಯಾಸವನ್ನೂ ನಡೆಸಿತು. ಬಳಿಕ ಪಂ. ನೆಹರು ಸಹ 1960ರಲ್ಲಿ ಲೋಕಸಭೆಯಲ್ಲಿ ಉತ್ತರ ನೀಡಿ, ‘ಕಚ್ಚತೀವು ಎಂಬಂತಹ ಸಣ್ಣ ದ್ವೀಪದ ಕುರಿತು ತಕರಾರು ತೆಗೆಯಲು ನಮಗೆ ಆಸಕ್ತಿ ಇಲ್ಲ. ಭಾರತವು ಆ ಪ್ರದೇಶದ ಮೇಲೆ ಹಕ್ಕು ಸಾಧಿಸುವುದನ್ನು ಕೈಬಿಡುತ್ತದೆ’ ಎಂದು ಘೋಷಿಸಿದರು. ಕಚ್ಚತೀವು ಭಾರತದ ಕೈಬಿಟ್ಟಿದ್ದು ಹಾಗೆ.
ಬಳಿಕ ಇಂದಿರಾ ಗಾಂಧಿ 1968ರಲ್ಲಿ ಪ್ರಧಾನಿಯಾಗಿದ್ದಾಗ ಅದನ್ನು ಶ್ರೀಲಂಕೆಗೆ ಹಸ್ತಾಂತರಿಸಲು ಕಾನೂನು ಪ್ರಕ್ರಿಯೆ ಆರಂಭಿಸಿ ಮದ್ರಾಸ್ ಸರ್ಕಾರದ (ಈಗಿನ ತಮಿಳುನಾಡು ರಾಜ್ಯ) ಅಭಿಪ್ರಾಯ ಕೇಳಿದರು. ಆಗ ತಮಿಳುನಾಡು ಸರ್ಕಾರ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಕೊಡುವುದು ಬೇಡ ಎಂಬ ಅಭಿಪ್ರಾಯ ನೀಡಿತಾದರೂ.. ಕೇಂದ್ರ ಸರ್ಕಾರ ‘ಸಾಕ್ಷ್ಯಾಧಾರ ಕೊರತೆ’ ಎಂದು ಪರಿಗಣಿಸಿ 1974ರಲ್ಲಿ ಆ ಪ್ರದೇಶವನ್ನು ಶ್ರೀಲಂಕೆಗೆ ಅಧಿಕೃತವಾಗಿ ಹಸ್ತಾಂತರಿಸಿತು. ಇದಿಷ್ಟೂ ಆರ್ʻಟಿಐನಲ್ಲಿರುವ ಸತ್ಯವಾದ ದಾಖಲೆ.
ಸಹಜವಾಗಿಯೇ ಈ ಪ್ರಕರಣ ಬಿಜೆಪಿ ವರ್ಸಸ್ ಕಾಂಗ್ರೆಸ್ ಹೋರಾಟಕ್ಕೆ ನಾಂದಿ ಹಾಡಿದೆ.
ನರೇಂದ್ರ ಮೋದಿ : ಕಚತೀವು ದ್ವೀಪ ಸತ್ಯಾಂಶ ಹೊರಬಂದಿದ್ದು, ಕಾಂಗ್ರೆಸ್ ಎಷ್ಟು ಕಠೋರ ಮನಸ್ಸಿನಿಂದ ಭಾರತದ ಭೂಭಾಗವನ್ನು ಮತ್ತೊಂದು ದೇಶಕ್ಕೆ ಬಿಟ್ಟುಕೊಟ್ಟಿತ್ತು ಎಂಬುದನ್ನು ಬಯಲು ಮಾಡಿದೆ. ಈ ಮೂಲಕ ಭಾರತದ ಏಕತೆ, ಕುಂಠಿತಗೊಳಿಸುವುದೇ ತನ್ನ ಮೂಲ ಮಂತ್ರವಾಗಿತ್ತು ಎಂದು ಕಾಂಗ್ರೆಸ್ ಸಾಬೀತು ಮಾಡಿದೆ.
ಮಲ್ಲಿಕಾರ್ಜು ಖರ್ಗೆ : ಬಿಜೆಪಿಯು 2015ರಲ್ಲಿ ಬಾಂಗ್ಲಾದೇಶದ ಜೊತೆ ಸೌಹಾರ್ದ ಗಡಿ ಒಪ್ಪಂದ ಮಾಡಿಕೊಂಡಂತೆ ನಾವು 1974ರಲ್ಲಿ ಶ್ರೀಲಂಕೆಗೆ ನಮ್ಮ ಭೂಭಾಗವನ್ನು ಸ್ನೇಹದ ಸಂಕೇತವಾಗಿ ಬಿಟ್ಟುಕೊಟ್ಟಿದ್ದೇವೆ. ಈ ವಿಷಯವನ್ನು 10 ವರ್ಷಗಳ ಕಾಲ ಮುಚ್ಚಿಟ್ಟು ಈಗ ಬಯಲು ಮಾಡಿರುವುದು ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಎಂಬುದನ್ನು ಸಾಬೀತು ಮಾಡಿದೆ.



