ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೋಲಾರದಿಂದಲೇ ತಮ್ಮ ಸ್ಪರ್ಧೆ ಎಂದು ಸಾರಿ ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ಶಾಸಕ ಸ್ಥಾನ ಬಿಟ್ಟುಕೊಟ್ಟಿರುವುದು ಶಾಸಕ ಶ್ರೀನಿವಾಸ ಗೌಡ.

ಶ್ರೀನಿವಾಸ ಗೌಡರಿಗೆ ಸಿದ್ದರಾಮಯ್ಯ ಕೆಲವು ಭರವಸೆ ನೀಡಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜಕೀಯ ಅಧಿಕಾರ ಎಂದರೆ ಸಚಿವ ಸ್ಥಾನ ಅಥವಾ ಸಚಿವ ಸ್ಥಾನದ ಮಟ್ಟದ ಸ್ಥಾನ ನೀಡುವ ಭರವಸೆ ನೀಡಿದ್ದಾರಂತೆ. ಚುನಾವಣೆ ಉಸ್ತುವಾರಿಯನ್ನೂ ತಮಗೇ ವಹಿಸಬೇಕು ಎನ್ನುವುದು ಶ್ರೀನಿವಾಸ ಗೌಡ ಅವರ ಇನ್ನೊಂದು ಷರತ್ತು. ಇದಕ್ಕೂ ಸಿದ್ದು ಯೆಸ್ ಎಂದಿದ್ದಾರಂತೆ.


ಅಷ್ಟೇ ಅಲ್ಲ, ರಮೇಶ್ ಕುಮಾರ್ ಮತ್ತು ಮುನಿಯಪ್ಪ ಅವರ ಮಧ್ಯೆ ಸಂಧಾನ ಮಾಡಿಸಬೇಕು ಎನ್ನುವುದು ಹೈಕಮಾಂಡ್ ಸೂಚನೆ. ಆದರೆ ದಶಕಗಳ ಕಾಲ ಒಂದೇ ಪಕ್ಷದಲ್ಲಿದ್ದು ಗುದ್ದಾಡಿಕೊಂಡಿದ್ದ ಇಬ್ಬರೂ ನಾಯಕರು ಸಿದ್ದರಾಮಯ್ಯ ಅವರಿಗಾಗಿ ಒಂದಾಗಬಹುದು ಎಂದು ನಿರೀಕ್ಷೆಯೂ ಇದೆ. ಇದರ ನಡುವೆ ವರ್ತೂರು ಪ್ರಕಾಶ್ ಅವರ ಬೆಂಬಲಿಗರ ಜೊತೆಯೂ ಸಭೆ ನಡೆಸಿ ಮನವೊಲಿಸುವ ಕೆಲಸ ಚಾಲ್ತಿಯಲ್ಲಿದೆ.
ಅಂದಹಾಗೆ ಸಿದ್ದರಾಮಯ್ಯ ಅವರಿಗಾಗಿ ಮೊದಲ ಬಾರಿಗೆ ಕ್ಷೇತ್ರ ಬಿಟ್ಟುಕೊಟ್ಟವರು ರೇವಣಸಿದ್ದಯ್ಯ. 2004ರಲ್ಲಿ ಸಿದ್ದರಾಮಯ್ಯ ಎದುರೇ ನಿಂತು ಸೋತಿದ್ದ ರೇವಣಸಿದ್ದಯ್ಯ, ಸಿದ್ದು ಕಾಂಗ್ರೆಸ್ ಸೇರಿದಾಗ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಸಿದ್ದರಾಮಯ್ಯ ಗೆಲುವಿಗೆ ಶ್ರಮಿಸಿದ್ದರು. ಹೀಗಿದ್ದರೂ ಸಿದ್ದರಾಮಯ್ಯಗೆ ಸಿಕ್ಕಿದ್ದದ್ದು 257 ಮತಗಳ ಗೆಲುವು ಮಾತ್ರ.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗ ಹುಟ್ಟಿಕೊಂಡ ವರುಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಹೊಸ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರೇ ಎಂಎಲ್‍ಎ ಆಗಿದ್ದರು. 2018ರಲ್ಲಿ ಆ ಕ್ಷೇತ್ರವನ್ನು ಮಗ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಮತ್ತೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೋಗಿ ನಿಂತಿದ್ದರು. ಆಗ ಕಾಂಗ್ರೆಸ್‍ನಿಂದಲೇ ಒಮ್ಮೆ ಗೆದ್ದು ಮತ್ತೊಮ್ಮೆ ಸೋತಿದ್ದ ಎಂ.ಸತ್ಯನಾರಾಯಣ ಕ್ಷೇತ್ರ ಬಿಟ್ಟುಕೊಡಬೇಕಾಗಿತ್ತು. ಆದರೆ ಸಿದ್ದರಾಮಯ್ಯ, 2018ರಲ್ಲಿ ಜಿ.ಟಿ.ದೇವೇಗೌಡ ವಿರುದ್ಧ ಸೋತಿದ್ದರು.


ಈಗ ಶ್ರೀನಿವಾಸ ಗೌಡ ಅವರಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಆ ಭರವಸೆ ಈಡೇರುತ್ತಾ..? ಗೊತ್ತಿಲ್ಲ. ಆದರೆ ಭರವಸೆ ಈಡೇರಿಸುವ ಶಕ್ತಿ ಸಿದ್ದರಾಮಯ್ಯ ಅವರಿಗೆ ಬರಬೇಕು ಎಂದರೆ ಮೊದಲು ಸಿದ್ದರಾಮಯ್ಯ ಗೆಲ್ಲಬೇಕು. ಕಾಂಗ್ರೆಸ್ ಸರಳ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕು. ಮುಂದಿನದ್ದು ಕಾಲ ನಿರ್ಧಾರ ಮಾಡುತ್ತೆ.



