ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಚಿತ್ರದುರ್ಗ ಮುರುಘರಾಜೇಂದ್ರ ಶರಣರ ಜಾಮೀನು ರದ್ಧಾಗಿದೆ. ಪ್ರಕರಣ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸಿ ಪುನಃ ಜೈಲಿಗೆ ಕಳುಹಿಸುವಂತೆ ಆದೇಶ ಹೊರಡಿಸಿದೆ. ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಪುನಃ 4 ತಿಂಗಳ ಕಾಲಾವಧಿಗೆ ಜೈಲಿಗೆ ಕಳುಹಿಸುವಂತೆ ಸೂಚನೆ ನೀಡಿದೆ. 2022ರ ಸೆಪ್ಟೆಂಬರ್ 1ರಂದು ಅರೆಸ್ಟ್ ಆಗಿದ್ದ ಮುರುಘಾ ಶ್ರೀ ಕಳೆದ ನವೆಂಬರ್ 16ರಂದು ಜೈಲಿನಿಂದ ಹೊರಗೆ ಬಂದಿದ್ದರು. ಇದಾದ ನಂತರ ಚಿತ್ರದುರ್ಗ ಮಠದ ಅಧಿಕಾರವನ್ನು ಹಿಡಿಯಲೂ ಮುಂದಾಗಿದ್ದರು.
ಹೈಕೋರ್ಟ್ ಜಾಮೀನು ರದ್ದು ಮಾಡಿದ್ಯಾಕೆ ಸುಪ್ರೀಂಕೋರ್ಟ್..?
ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಮಠಾಧೀಶ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾದ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ 14 ತಿಂಗಳು ಜೈಲು ವಾಸ ಅನುಭವಿಸಿದ್ರು. ಪೋಕ್ಸೋ ಕೇಸ್ ಇದ್ದರೂ ಹೈಕೋರ್ಟ್‌ನಿಂದ ಜಾಮೀನಿನ ಮೇಲೆ ಹೊರಗೆ ಬಂದು ಸಾಕ್ಷಿ ನಾಶ ಮಾಡುತ್ತಿದ್ದಾರೆ ಎಂದು ಪೋಕ್ಸೋ ಕೇಸ್ ದಾಖಲಿಸಿದ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಕಾರಣ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿ, ಮುರುಘಾ ಶರಣರನ್ನು ಮತ್ತೆ ಜೈಲಿಗೆ ಹಾಕಲು ಸೂಚನೆ ಕೊಟ್ಟಿದೆ.
ಮುರುಘಾ ಶರಣರನ್ನು 4 ತಿಂಗಳ ಕಾಲಾವಧಿಗೆ ಜೈಲಿಗೆ ಕಳುಹಿಸಬೇಕು. ಈ ಅವಧಿಯೊಳಗೆ ಸಂತ್ರಸ್ಥೆಯರು ಹಾಗೂ ಪೋಷಕರ ವಿಚಾರಣೆ ಮುಗಿಸಬೇಕು. ಒಂದು ವೇಳೆ ಪ್ರಕರಣದ ವಿಚಾರಣೆಯು ಮುಗಿಯದ್ದಿದ್ದ ಪಕ್ಷದಲ್ಲಿ ಜೈಲು ಶಿಕ್ಷೆ ಅವಧಿಯನ್ನು ವಿಸ್ತರಣೆ ಮಾಡುವ ಕುರಿತು ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು ಎಂದು ಆದೇಶಿಸಲಾಗಿದೆ. ಆದೇಶಕ್ಕೆ ಸಂಬಂಧಿಸಿದಂತೆ ಮುರುಘಾ ಶ್ರೀ ಒಂದು ವಾರದೊಳಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುರುಘಾ ಶ್ರೀಗಳು ಜೈಲಿನಿಂದ ಹೊರಗೆ ಬರುತ್ತಿದ್ದಂತೆಯೇ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು. ಪೋಕ್ಸೋ ಪ್ರಕರಣಗಳ ವಿಶೇಷ ನ್ಯಾಯಾಲಯ ಪ್ರಾಸಿಕ್ಯೂಷನ್‌ನ ‘ಪೋಸ್ಟ್ ಆಫೀಸ್’ ಆಗಿ ಕಾರ್ಯ ನಿರ್ವಹಿಸಬಾರದು ಎಂದ ಹೈಕೋರ್ಟ್, ಧಾರ್ಮಿಕ ಸಂಸ್ಥೆಗಳ (ದುರುಪಯೋಗ ತಡೆ) ಕಾಯ್ದೆಯ ನಿಬಂಧನೆಗಳಿಗೆ ಸಂಬಂಧಿಸಿದಂತೆ ಶ್ರೀಗಳ ವಿರುದ್ಧದ ಆರೋಪಗಳನ್ನು ಮರುಪರಿಶೀಲಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿತ್ತು. ಶ್ರೀಗಳ ವಿರುದ್ಧದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಗೆ ಸಂಬಂಧಿಸಿದಂತೆ ಕಾನೂನಿನ ಪ್ರಕಾರ ಮುಂದುವರಿಯುವಂತೆ ಆದೇಶಿಸಿತ್ತು. ಈಗ ಮತ್ತೆ ಜೈಲಿಗೆ ತಳ್ಳುವಂತೆ ಸುಪ್ರೀಂಕೋರ್ಟ್ ಹೇಳಿದೆ.
ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಮುರುಘಾ ಶರಣರನ್ನು ಪೋಕ್ಸೋ ಕೇಸ್‌ನಲ್ಲಿ ಪುನಃ ಜೈಲಿಗೆ ಕಳಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಸಂತಸದಿಂದ ಸ್ವಾಗತಿಸುತ್ತೇವೆ ಎಂದಿರುವ ಒಡನಾಡಿ ಸಂಸ್ಥೆಯ ಸ್ಟಾನ್ಲಿ ಸಾಕ್ಷಿಗಳ ಪೂರ್ಣ ವಿಚಾರಣೆ ಮುಕ್ತಾಯ ಆಗುವವರೆಗೂ ಮುರುಘಾ ಶರಣರನ್ನು ಬೇರೆ ರಾಜ್ಯದಲ್ಲಿ ಇರಿಸಬೇಕು. ಇಲ್ಲವಾದಲ್ಲಿ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಿದ್ದಾರೆ.
ಮುರುಘಾ ಶ್ರೀಗಳಿಗೆ ಜಾಮೀನು ಸಿಕ್ಕಿದ್ದಷ್ಟೆ ಅಲ್ಲದೆ ಅವರೇ ಸ್ವತಃ ಈಗ ಮಠದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಚಿತ್ರದುರ್ಗದಿಂದ ಹೊರಗಿದ್ದರೂ, ಅವರ ಪರವಾಗಿರುವವರು ಮಠದಲ್ಲೇ ಇದ್ದು ಕೆಲಸ ನೋಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಆರೋಪಿಯನ್ನ ಬೇರೆ ರಾಜ್ಯದಲ್ಲಿ ಇರಿಸಿ ವಿಚಾರಣೆಗೊಳಪಡಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.



