ನೀವು ಶೃಂಗೇರಿ ನೋಡಿದ್ದೀರಾ.. ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ ಶಕ್ತಿಪೀಠವದು. 

ಶಂಕರಾಚಾರ್ಯರು ಸ್ಥಾಪಿಸಿದ ಗೋವರ್ದನ ಪೀಠ (ಒಡಿಶಾದ ಜಗನ್ನಾಥ ಪುರಿ), ಇದು ಪುರಿ ಪೀಠ ಎಂದೇ ಖ್ಯಾತಿ ಪಡೆದಿದೆ. ಪಶ್ಚಿಮಮ್ನಾಯ ಪೀಠ ಎಂದರೆ ದ್ವಾರಕೆಯ ಶಾರದಾ ಪೀಠ. ಮೂರನೆಯದ್ದು ನಮ್ಮ ಶೃಂಗೇರಿಯ ಶಾರದಾ ಪೀಠ. ಇವೆಲ್ಲವುಗಳ ಮೂಲ ಮಠವೇ ಜೋಶಿಮಠ. 

ಉತ್ತರ ಭಾರತದ ಶೃಂಗೇರಿ ಎಂದೇ ಹೆಸರಾದ ಜೋಶಿಮಠದಲ್ಲಿ 600ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. 20 ಸಾವಿರಕ್ಕೂ ಹೆಚ್ಚು ಜನ ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲಾಗದೆ ಬೀದಿಗೆ ಬಂದಿದ್ದಾರೆ. ಇದು 8ನೇ ಶತಮಾನದಲ್ಲಿ ಶಂಕರಾಚಾರ್ಯರು ಸ್ಥಾಪಿಸಿದ ಪೀಠ. ಇಲ್ಲಿ ಹಲವು ದೇವಸ್ಥಾನಗಳಿವೆ. ಆ ದೇವಸ್ಥಾನಗಳೂ ಬಿರುಕು ಬಿಡುತ್ತಿವೆ. ಕಟ್ಟಡಗಳ ಗೋಡೆಗಳಲ್ಲಿ ನೀರು ಜಿನುಗತೊಡಗಿದೆ. ಅಂತರ್ಜಲ ಉಕ್ಕೇರುತ್ತಿದೆ. ಇಲ್ಲಿನ ಒಂದು ವಿಶೇಷವೆಂದರೆ ಇಲ್ಲಿನ ಬದರಿನಾಥ ದೇಗುಲದ ವಿಷ್ಣು ಮೂರ್ತಿಯನ್ನು ಚಳಿಗಾಲದಲ್ಲಿ ಜೋಶಿಮಠದ ನರಸಿಂಹ ಮಂದಿರದಲ್ಲಿ ಇಟ್ಟು ರಕ್ಷಿಸುತ್ತಾರೆ. ಆ ವಿಗ್ರಹವನ್ನೂ ಸುರಕ್ಷತೆಯ ದೃಷ್ಟಿಯಿಮದ ಬೇರೆಡೆ ಸ್ಥಳಾಂತರಿಸಿ, ದೇವರ ವಿಗ್ರಹ ನಾಶವಾದರೆ ಅದಕ್ಕಿಂತ ದೊಡ್ಡ ದೋಷ ಇನ್ನೊಂದಿಲ್ಲ ಎನ್ನುವುದು ಭಕ್ತರ ಆಗ್ರಹ.

ಶಿವಲಿಂಗದಲ್ಲೇ ಬಿರುಕು : ಶಂಕರಾಚಾರ್ಯರಿದ್ದ ಮೂಲ ಮಠ ಮಾಧವಾಶ್ರಮದಲ್ಲಿ ಒಂದು ಶಿವಲಿಂಗವಿದ್ದು, ಆ ಶಿವಲಿಂಗವೇ ಛಿದ್ರವಾಗಿದೆ. ಭಗ್ನಗೊಂಡಿದೆ. ಹಿಂದೂ ಸಂಪ್ರದಾಯಗಳಲ್ಲಿ ಭಗ್ನವಾದ ಶಿವಲಿಂಗವನ್ನು ಪೂಜೆ ಮಾಡುವಂತಿಲ್ಲ. ಅಲ್ಲದೆ ಶಿವಲಿಂಗ ಭಗ್ನಗೊಳ್ಳೋದು ಎಂದರೆ ಅದೊಂದು ವಿನಾಶದ ಸೂಚನೆ ಎಂದೇ ಜನ ಭಯಪಡುತ್ತಾರೆ. ಸಾಮಾನ್ಯವಾಗಿ ಶಿವಲಿಂಗಗಳು ಭಗ್ನಗೊಳ್ಳುವುದಿಲ್ಲ. ಆದರೆ ಈಗ ಅಗಿರುವ ಅನಾಹುತ ಭಕ್ತರನ್ನು ಭಯಕ್ಕೆ ತಳ್ಳಿದೆ. ಇಲ್ಲಿನ ಭಗವತಿ ದೇಗುಲದ ಒಂದು ಪಾಶ್ರ್ವ ಭೂಕುಸಿತಕ್ಕೆ ಒಳಗಾಗಿದೆ. ಜ್ಯೋತಿರ್ಮಠದ ದ್ವಾರಬಾಗಿಲಲ್ಲೇ ಬಿರುಕು ಕಾಣಿಸಿಕೊಂಡಿದೆ. ಜ್ಯೋತಿರ್ಮಠದ ಆವರಣದಲ್ಲೇ ಇರುವ ಲಕ್ಷ್ಮೀನಾರಾಯಣ ದೇಗುಲ, ಒಂದು ವಸತಿ ಸಂಕೀರ್ಣ, ಆಡಿಟೋರಿಯಂ ಗೋಡೆಗಳಲ್ಲೂ ಬಿರುಕು ಕಾಣಿಸಿಕೊಂಡಿದೆ. ಜ್ಯೋತಿರ್ಮಠದ ಮೊದಲ ಗುರುಗಳಾದ ತೋಟಕಾಚಾರ್ಯ ಗುಹೆ, ತ್ರಿಪುರ ಸುಂದರಿ ರಾಜರಾಜೇಶ್ವರಿ ದೇಗುಲ ಹಾಗೂ ಜ್ಯೋತಿರ್‍ಮಠದಲ್ಲೇ ಇರುವ ಶಂಕರಾಚಾರ್ಯ ಪೀಠಗಳು ಕೂಡಾ ಸುರಕ್ಷಿತವಾಗಿಲ್ಲ.
ಒಡಿಶಾ ಸಿಎಂ ಪುಷ್ಕರ್ ಸಿಂಗ್ ಧಾಮಿ ತಕ್ಷಣಕ್ಕೆ ಇಲ್ಲಿದ್ದ 600 ಕುಟುಂಬಗಳನ್ನೂ ಸ್ಥಳಾಂತರ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ. ಮುಂದಿನ 6 ತಿಂಗಳು ಅವರಿಗೆ ಮನೆ ಬಾಡಿಗೆ ಕಟ್ಟೋಕೆ 4 ಸಾವಿರ ರೂ. ಭತ್ಯೆಯೂ ಸಿಗಲಿದೆ. ಆನಂತರ ಏನು..? ಉತ್ತರ ಗೊತ್ತಿಲ್ಲ. ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ಕೊಡಬೇಕೇ? ಸ್ಥಳಾಂತರ ಮಾಡಿ ವಸತಿ ವ್ಯವಸ್ಥೆ ಕಲ್ಪಿಸಬೇಕೆ.. ಹೀಗೆ ಯಾವುದಕ್ಕೂ ಉತ್ತರ ಸಿಕ್ಕಿಲ್ಲ.





