ಪುಟ್ಟಸ್ವಾಮಿ ಯಾರು ಎಂದು ಕೇಳಿದರೆ.. ಡಾ.ರಾಜ್ ಅಭಿಮಾನಿಗಳೇ ಜಗಳಕ್ಕೆ ಬರಬಹುದು. ಪುಟ್ಟಸ್ವಾಮಿ ಎಂದರೆ ಶಿವಣ್ಣ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ ಶಿವಣ್ಣ ಈಗ ಡಾ.ರಾಜ್-ಪಾರ್ವತಮ್ಮನವರ ಮಗನಾಗಿ ಅಷ್ಟೇ ಉಳಿದಿಲ್ಲ. ಕರುನಾಡಿನ ಮನೆ ಮಗನಾಗಿದ್ದಾರೆ. ಅಂತಹ ಪುಟ್ಟಸ್ವಾಮಿ ಜನಿಸಿದಾಗ.. ಡಾ.ರಾಜ್ ಎಷ್ಟು ಸಂತಸ ಪಟ್ಟಿದ್ದರು ಎಂದರೆ.. ಇಡೀ ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಸ್ವೀಟು ಹಂಚುತ್ತಲೇ ಇದ್ದರಂತೆ.
ಏಕೆಂದರೆ ಮದುವೆ ಆದ 9 ವರ್ಷಗಳ ಬಳಿಕ ಶಿವಣ್ಣ ಹುಟ್ಟಿದ್ದರು. 9 ವರ್ಷ ಎಂದರೆ ಕಡಿಮೆ ಅವಧಿಯಲ್ಲ. ಇನ್ನು ಆಗಿನ ದಿನಗಳಲ್ಲಿ ಅಷ್ಟು ವರ್ಷ ಮದುವೆಯಾಗಿ ಮಕ್ಕಳಾಗಲಿಲ್ಲ ಎಂದರೆ ಅಪವಾದ ಬರುವುದು ಪತ್ನಿಯ ಮೇಲೆಯೇ. ಅದೆಲ್ಲವನ್ನೂ ಮೀರಿ ಕಾದಿದ್ದರು ಡಾ.ರಾಜ್ ಮತ್ತು ಪಾರ್ವತಮ್ಮ. ಮದುವೆಯಾಗಿ 9 ವರ್ಷಗಳ ನಂತರ ಹುಟ್ಟಿದ ಮಗುವಿನಲ್ಲಿ ತಮ್ಮ ತಂದೆಯನ್ನು ಕಂಡಿದ್ದ ರಾಜ್, ಮಗನಿಗೆ ತಮ್ಮ ತಂದೆಯ ಹೆಸರನ್ನೇ ಇಟ್ಟಿದ್ದರು. ಪುಟ್ಟಸ್ವಾಮಿ ಅಂತಾ.
ರಾಜ್ಕುಮಾರ್ ಹಾಗೂ ಪಾರ್ವತಮ್ಮ ವಿವಾಹ ಆಗಿದ್ದು 1953ರ ಜೂನ್ 25ರಂದು. ಎಷ್ಟೇ ಪ್ರಯತ್ನಿಸದರೂ ದಂಪತಿಗೆ ಮಗು ಹುಟ್ಟಿರಲೇ ಇಲ್ಲ. ಶಿವರಾಜ್ಕುಮಾರ್ ಅವರು 1962ರ ಜುಲೈ12ರಂದು ಜನಿಸಿದರು. ಮಗ ಹುಟ್ಟಿದಾಗ ಕುಣಿದು ಕುಪ್ಪಳಿಸಿದ್ದ ರಾಜ್, ಬೆಳಗ್ಗೆ ಎಲ್ಲ ಸಿಹಿ ಹಂಚಿದ್ದರಂತೆ. ಶಿವರಾಜ್ ಕುಮಾರ್ ಹುಟ್ಟಿದ್ದು ಸಂಜೆಯ ವೇಳೆಗೆ. ಡಾ.ರಾಜ್ ಸಿಹಿ ಹಂಚಿದ್ದಿದು ಬೆಳಗ್ಗೆ ಐದಾರು ಗಂಟೆಯವರೆಗೆ. ಸೂರ್ಯ ಹುಟ್ಟಿದರೂ ರಾಜ್ ಅವರ ಸಿಹಿ ಹಂಚುವ ಸಂಭ್ರಮ ಮುಗಿದಿರಲಿಲ್ಲ.
ಇನ್ನು ತಮ್ಮ ಜನನ, ತಾಯಂದಿರ ಬಗ್ಗೆ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ 20-25 ಜನರು ಇರುತ್ತಿದ್ದರು. ನಂಗೆ ಹಲವು ತಾಯಂದಿರು. ಅದರಲ್ಲಿ ನಾಗಮ್ಮ ಕೂಡ ಒಬ್ಬರು. ಅವರು ನನ್ನನ್ನು ಚಿಕ್ಕವಯಸ್ಸಲ್ಲಿ ಸಾಕಿ ಬೆಳೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿಯೇ ಶಿವಣ್ಣ ಅವರು ನಾಗಮ್ಮ ಅವರಲ್ಲಿ ಈಗ ತಾಯಿಯನ್ನು ಕಾಣುತ್ತಿದ್ದಾರೆ. ಶಿವಣ್ಣಗೆ ಈಗ 63 ವರ್ಷ ವಯಸ್ಸು. ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾರೆ. ಹೀಗಾಗಿ, ಈ ವರ್ಷದ ಬರ್ತ್ಡೇ ಅವರಿಗೆ ವಿಶೇಷ ಎನಿಸಿಕೊಂಡಿದೆ.
ಅಂದಹಾಗೆ ಶಿವರಾಜ್ ಕುಮಾರ್ ಅವರ ಮೊದಲ ಚಿತ್ರ ಆನಂದ್ ರಿಲೀಸ್ ಆದಾಗ.. ಪಾರ್ವತಮ್ಮ ಅವರನ್ನು ಶಿವರಾಜ್ ಕುಮಾರ್ ತಾಯಿ ಎಂದು ಕರೆಯುತ್ತಿದ್ದರಂತೆ. ಇನ್ನೂ ಕೆಲವರು ಶಿವರಾಜ್ಕುಮಾರ್ ತಾಯಿ ಅಂತೀರಲ್ಲೋ, ಅವರು ಮೊದಲು ರಾಜ್ಕುಮಾರ್ ಪತ್ನಿ ಎಂದರಂತೆ. ಅದಕ್ಕೆ ರಿಯಾಕ್ಟ್ ಮಾಡಿದ್ದ ಪಾರ್ವತಮ್ಮ ನನಗೆ ಶಿವರಾಜ್ಕುಮಾರ್ ತಾಯಿ ಎಂದರೂ ಖುಷಿ ಆಗುತ್ತದೆ, ರಾಜ್ಕುಮಾರ್ ಪತ್ನಿ ಎಂದರೂ ಖುಷಿ ಆಗುತ್ತದೆ. ಯಾವುದು ಹೆಚ್ಚು, ಯಾವುದು ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದರಂತೆ.
ಇನ್ನು ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಟಗರು-2 ಸಿನಿಮಾ ಅನೌನ್ಸ್ ಆಗುತ್ತಿದೆ. ಟಗರು ಚಿತ್ರವನ್ನು ಅಪಾರವಾಗಿ ಮೆಚ್ಚಿಕೊಂಡಿದ್ದ ಪುನೀತ್ ರಾಜ್ ಕುಮಾರ್, ಶಿವಣ್ಣನಿಗಾಗಿ ಟಗರು-02 ಮಾಡಿ ದುನಿಯಾ ಸೂರಿ ಬೆನ್ನು ಹತ್ತಿದ್ದರಂತೆ. ಅದು ನಿಜವಾಗುವ ಸಮಯ ಈಗ ಬಂದಿದೆ.



