ಈಗ ರಾಜ್ಯದಲ್ಲಿ ಮರಾಠಿಗರ ಆಕ್ರೋಶ ಮುಗಿಲು ಮುಟ್ಟಿದೆ. ಸಹಜವೇ.. ಮಹಾರಾಷ್ಟ್ರದಲ್ಲಿ ರಾಜಕೀಯ ಸಮಸ್ಯೆ ಎದುರಾದಾಗಲೆಲ್ಲ, ಅಸ್ಥಿತ್ವದ ಪ್ರಶ್ನೆ ಎದುರಾದಾಗಲೆಲ್ಲ ಎಲ್ಲ ರಾಜಕೀಯ ಪಕ್ಷಗಳೂ ಮಾಡುವ ಕೆಲಸವೇ ಅದು. ಅದರಲ್ಲೂ ಮಹಾರಾಷ್ಟ್ರದಲ್ಲಿ. ಏಕೆಂದರೆ ಶಿವಸೇನೆ, ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಅಸ್ಥಿತ್ವ ನಿಂತಿರುವುದೇ ಮರಾಠಿಗರನ್ನು ಒಂದು ಗೂಡಿಸುವುದರಲ್ಲಿ. ಮರಾಠಿಗರ ಭಾವನೆಗಳನ್ನು ಕೆಣಕುವುದರಲ್ಲಿ. ಆದರೆ ಅವರು ಕೆಣಕುತ್ತಾರೆ. ನಮ್ಮವರೇನು ಮಾಡ್ತಾರೆ. ಇವರೂ ಉತ್ತರ ಕೊಡ್ತಾರೆ. ಸೇಮ್ ಟು ಸೇಮ್. ನಾನು ಹೊಡೆದಂತೆ ಮಾಡುತ್ತೇನೆ.. ನೀನು ಅತ್ತಂಗೆ ಮಾಡು.. ನೀವು ಹೊಡೆದಂಗೆ ಮಾಡಿದಾಗ.. ನಾನೂ ಅತ್ತಂತೆ ಆಡುತ್ತೇನೆ ಎನ್ನುವ ಒಪ್ಪಂದ ಅಲಿಖಿತವಾಗಿ ಆಗಿ ಹೋಗಿರುತ್ತದೆ.


ಹೀಗಾಗಿಯೇ ಶಿವಸೇನೆಯ ಮುಖ್ಯಮಂತ್ರಿ ಏಕನಾಥ್ ಶಿಂದೆ ಕರ್ನಾಟಕ ಗಡಿಯಲ್ಲಿನ ಮರಾಠಿ ಸಂಘಟನೆಗಳಿಗೆ ತಲಾ 10 ಲಕ್ಷ ರೂ. ನೆರವು ನೀಡುತ್ತಾರಂತೆ. ಅದೇ ಕೆಲಸವನ್ನು ಕಾಳಜಿಯಿಂದ ಮಾಡಿದ್ದರೆ ಅದೇ ಮಹಾರಾಷ್ಟ್ರದ 150ಕ್ಕೂ ಹೆಚ್ಚು ಹಳ್ಳಿಗಳ ಜನ ನಮಗೆ ಮಹಾರಾಷ್ಟ್ರ ಬೇಡ, ಕರ್ನಾಟಕ್ಕೆ ಸೇರಿಸಿ, ಗುಜರಾತಿಗೆ ಸೇರಿಸಿ ಅವಲತ್ತುಕೊಳ್ಳುತ್ತಿರಲಿಲ್ಲ. ಈ ಶಿಂಧೆ ಸಿಎಂ ಆಗಿರುವುದು ಮಹಾರಾಷ್ಟ್ರದಲ್ಲಿನ ಬಿಜೆಪಿಯ ಸಹಾಯದಿಂದ ಎಂಬುದನ್ನು ಮರೆಯುವಂತಿಲ್ಲ. ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಹಾಮೇಳಾವಕ್ಕೆ ಅನುಮತಿ ನಿರಾಕರಿಸಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಆತ ಬಿಜೆಪಿಯ ನಾಯಕ ಎಂಬುದು ಗೊತ್ತಿರಲಿ. ಇಲ್ಲಿ ಇರೋದು ಕೂಡಾ ಬಿಜೆಪಿ ನೇತೃತ್ವದ ಸರ್ಕಾರವೇ. ಅಲ್ಲಿರೋದು ಕೂಡಾ ಬಿಜೆಪಿ ಸರ್ಕಾರವೇ. ಆದರೆ.. ಇಬ್ಬರೂ ಹೊರಗೆ ವೇದಿಕೆಗಳಲ್ಲಿ, ಸದನಗಳಲ್ಲಿ ಬಹಿರಂಗವಾಗಿ ವೀರಾವೇಶದ ಮಾತುಗಳನ್ನಾಡುತ್ತಾರೆ. ಬೊಮ್ಮಾಯಿಯವರಿಗಂತೂ ರಕ್ತದ ಕಣಕಣದಲ್ಲೂ ಕನ್ನಡವೇ ಇದೆಯೇನೋ ಎಂಬಂತೆ.. ಇಂಚು ಭೂಮಿಯನ್ನೂ ಬಿಟ್ಟುಕೊಡಲ್ಲ ಎಂದು ಗುಡುಗುತ್ತಾರೆ. ಉಳಿದಂತೆ.. ಜನರ ಜೈಕಾರ ನೋಡಿ ಒಳಗೊಳಗೇ ನಕ್ಕು ಮಾತನಾಡಿದ್ದರೂ ಅಚ್ಚರಿಯಿಲ್ಲ.


ಹಾಗಂತ ಇದು ಬಿಜೆಪಿಯವರಷ್ಟೆ ಮಾಡುತ್ತಿರೋ ಪ್ರಾಬ್ಲಂ ಎಂದುಕೊಳ್ಳಬೇಡಿ. ವಿರೋಧ ಪಕ್ಷದಲ್ಲಿರೋ ಕಾಂಗ್ರೆಸ್ ಮಾಡ್ತಾ ಬಂದಿರೋದೂ ಕೂಡಾ ಅದನ್ನೇ. ಇಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗುಡುಗೋದೇನೂ.. ಘರ್ಜಿಸೋದೇನೂ.. ವ್ಹಾರೆವ್ಹಾ.. ನಾಟಕದಲ್ಲಿ ಯಾರು ಶ್ರೇಷ್ಟ ನಟ ಎಂದು ಪ್ರಶಸ್ತಿ ಕೊಡೋಕೆ ಹೋದರೆ ಬಿಜೆಪಿಯವರಿಗಿಂತಾ ಒಂದು ಹೆಜ್ಜೆ ನಾನೇ ಗ್ರೇಟು ಎನ್ನಿಸಿಬಿಡುತ್ತಾರೆ. ಬಿಜೆಪಿ ಸರ್ಕಾರ ಬರುವುದಕ್ಕೆ ಮುನ್ನ ಕಾಂಗ್ರೆಸ್ಸಿನ ಸರ್ಕಾರವಿದ್ದಾಗಲೂ ಇದು ನಿಂತಿರಲಿಲ್ಲ. ಇಲ್ಲಿ ಬೊಮ್ಮಾಯಿಗೆ ಬುದ್ದಿ ಹೇಳುತ್ತಿರುವ ಕಾಂಗ್ರೆಸ್ಸಿಗರು, ಅಲ್ಲಿ ತಮ್ಮದೇ ಪಕ್ಷದ ನಾಯಕರು, ತಮ್ಮ ಮಿತ್ರ ಉದ್ಧವ್ ಠಾಕೆ, ಶರದ್ ಪವಾರ್ ಅವರಿಗೆ ಬುದ್ದಿ ಹೇಳೋ ಕೆಲಸ ಮಾಡುವುದಿಲ್ಲ. ಅವರು ಅಲ್ಲಿ ಕೂಗಾಡಲಿ.. ನಾವು ಇಲ್ಲಿ ಹಾರಾಡೋಣ.. ಸದ್ಯಕ್ಕೆ ಮುಗಿಯಲಿ.. ಆಮೇಲಿಂದು ಆಮೇಲೆ ನೋಡಿದರಾಯಿತು.. ಎಂಬ ಮನೋಭಾವ. ಎರಡೂ ಪಕ್ಷಗಳ ಕಾರ್ಯಕರ್ತರೂ ಅಷ್ಟೆ..ನಾಯಕರಿಗೆ ತಕ್ಕಂತೆ ನಾಟಕವಾಡುತ್ತಾರೆ.


ದೇವೇಗೌಡರಾಗಲೀ..ಕುಮಾರಸ್ವಾಮಿಯವರಾಗಲೀ.. ಮರಾಠಿ ವಿಷಯದಲ್ಲಿ ಟೀಕಿಸುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಆದರೆ ಆ ಹೇಳಿಕೆಗಳೆಲ್ಲ ಸುದ್ದಿಗೋಷ್ಠಿಗಳು, ಸೋಷಿಯಲ್ ಮೀಡಿಯಾಗಳಿಗಷ್ಟೇ ಸೀಮಿತ. ಏಕೆಂದರೆ ಜೆಡಿಎಸ್‍ನವರಿಗೆ ಗೊತ್ತಿದೆ. ಮರಾಠಿಗರ ಬೆಲ್ಟಿನಲ್ಲಿ ನಮ್ಮ ವೋಟುಗಳಿಲ್ಲ ಎನ್ನುವ ಸತ್ಯ. ಹೀಗಾಗಿಯೇ ಅವರೂ ಸೀರಿಯಸ್ ಆಗಿ ತೆಗೆದುಕೊಳ್ಳೋದಿಲ್ಲ. ಸಿಕ್ಕಿದ್ದೇ ಟೈಮು ಎಂದುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್‍ನ್ನು ಹಿಗ್ಗಾಮುಗ್ಗಾ ಜಾಡಿಸಿಬಿಡುತ್ತಾರೆ. ಅಬ್ಬಾ.. ನನ್ ಕೆಲ್ಸ ಆಯ್ತು ಎಂಬ ಸಮಾಧಾನ ಅವರದ್ದು.
ಮೋದಿ-ಶಾ-ಖರ್ಗೆ-ರಾಹುಲ್-ಸೋನಿಯಾ.. ಅವರಿಗೇನು ಪ್ರಾಬ್ಲಮ್ಮು ಅಂತೀರಾ. ಮುಲಾಜೇ ಇಲ್ಲ. ಇವರು ಅವರಿಗೆ ಬೈತಾರೆ. ಅವರು ಇವರಿಗೆ ಬೈತಾರೆ. ಕನಾಟಕಕ್ಕೆ ಬಂದಾಗ ಕನ್ನಡಕ್ಕೆ ಜೈ. ಆರಂಭದಲ್ಲಿ ಎಲ್ಲರಿಗೂ ನಮಸ್ಕಾರ.. ಎಂದು ಹೇಳಿದರೆ ಕನ್ನಡಿಗರು ಖುಷ್. ಮಹಾರಾಷ್ಟ್ರಕ್ಕೆ ಹೋದಾಗ ಮರಾಠಿಯಲ್ಲಿ ಕೂಡಾ ಇದನ್ನೇ ಹೇಳಿ ಬರ್ತಾರೆ ಅನ್ನೋದು ಗೊತ್ತಿರಲಿ. ಇಂತಹ ನಾಟಕಕಾರಿಂದಲೇ ನೌಟಂಕಿಗಳಿಂದಲೇ ಕನ್ನಡ ನಡೆಯುತ್ತಿದೆ. ನಾಟಕಗಳು ಮುಗಿಯೋದ್ಯಾವಾಗ..?



