ಸಿದ್ದರಾಮಯ್ಯ ಅವರಿಗೆ ಪ್ರತಿ ಚುನಾವಣೆಯಲ್ಲಿಯೂ ಇದೊಂದು ಸಮಸ್ಯೆ ಕಾಡುತ್ತಲೇ ಇರುತ್ತೆ. ಇಡೀ ರಾಜ್ಯವನ್ನು ಗೆಲ್ಲುವ ಹುಮ್ಮಸ್ಸಿನಲ್ಲಿ ಉತ್ಸಾಹದಲ್ಲಿ ಹೊರಡುವ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಯಾವುದು ಎನ್ನುವುದನ್ನು ಕೊನೆಯವರೆಗೂ ಗೊಂದಲದಲ್ಲಿಟ್ಟು ಬಿಡುತ್ತಾರೆ. ಈ ಬಾರಿಯೂ ಅಷ್ಟೆ, ನಾನು ಬಾದಾಮಿಗೆ ಬೇಕು ಬೇಕೆಂದಾಗ ಬರೋಕಾಗಲ್ಲ. ಒಬ್ಬ ಶಾಸಕನಾಗಿ 15 ದಿನಕ್ಕೊಮ್ಮೆಯಾದರೂ ಬರೋಕೆ ಆಗದೆ ಇದ್ರೆ ಹೇಗೆ? ಬಾದಾಮಿ, ಬೆಂಗಳೂರಿಗೆ ದೂರವಾಯಿತು ಎಂದು ಹೇಳುತ್ತಿರೋ ಸಿದ್ದರಾಮಯ್ಯ, ಬಾದಾಮಿಯಿಂದ ಸ್ಪರ್ಧಿಸಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ ಸಿದ್ದು ಆಪ್ತರಾದ ಜಮೀರ್ ಅಹ್ಮದ್ ಮಾತ್ರ ಬಾದಾಮಿಯಲ್ಲಿ ರೌಂಡ್ ಹೊಡೆಯುತ್ತಲೇ ಇದ್ದಾರೆ. ಸಿದ್ದರಾಮಯ್ಯ ಪರ ಬ್ಯಾಟ್ ಬೀಸುತ್ತಿದ್ದಾರೆ.

ಈ ಮಧ್ಯೆ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲೇ ಇರುವ ಬನಶಂಕರಿ ದೇವಿಯ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದು ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಬನಶಂಕರಿ ಜಾತ್ರೆಯಲ್ಲಿ ಮಹಾರಥೋತ್ಸವಕ್ಕೆ ಚಾಲನೆ ನೀಡಿ ದೇವಿಗೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಅವರಿಗಾಗಿ ಅರ್ಚಕರು ವಿಶೇಷ ಪೂಜೆ ಮಾಡಿದರು. ಈ ಬಾರಿ ಬಾದಾಮಿಯಲ್ಲೇ ಎಲೆಕ್ಷನ್ನಿಗೆ ನಿಂತರೆ ಒಳ್ಳೆಯದಾಗುತ್ತೆ ಎಂದರು ಅರ್ಚಕರು. ಈ ಮಾತಿಗೆ ಸಿದ್ದರಾಮಯ್ಯ ಎಲ್ಲರಿಗೂ ಒಳ್ಳೆಯದಾಗಲಿ ಎಂದಷ್ಟೇ ಹೇಳಿದರು. ಆದರೆ ಕ್ಷೇತ್ರದ ಗುಟ್ಟು ಮಾತ್ರ ಬಿಟ್ಟುಕೊಡಲಿಲ್ಲ.
ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿತ್ತಾದರೂ, ಕ್ಷೇತ್ರದಲ್ಲೊಂದು ರೌಂಡ್ ಹಾಕಿದ ಸಿದ್ದರಾಮಯ್ಯಗೆ ಅಲ್ಲಿಂದ ವಾಪಸ್ ಬಂದ ಮೇಲೆ ಹುಳುಕುಗಳೆಲ್ಲ ಕಂಡಿದ್ದವು. ಮುನಿಯಪ್ಪ-ರಮೇಶ್ ಕುಮಾರ್ ಬಣ ಜಗಳ, ಜೆಡಿಎಸ್ ಪ್ರಾಬಲ್ಯ, ಬಲವಾಗಿಯೇ ಚಿಗುರೊಡೆಯುತ್ತಿರುವ ಬಿಜೆಪಿ ಆತಂಕ ಮೂಡಿಸಿತ್ತು. ಜಮೀರ್ ಅಹ್ಮದ್ ಅವರೇನೋ ಚಾಮರಾಜನಗರ ಕ್ಷೇತ್ರ ಬಿಟ್ಟು ಕೊಡುವುದಕ್ಕೆ ಸಿದ್ಧ. ಆದರೆ ಅದು ಕೊಡುವ ಸಂದೇಶ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯನವರದ್ದು.
ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹಲವು ಬಾರಿ ಘೋಷಿಸಿರೋದ್ರಿಂದ ಮತ್ತೆ ನಿಲ್ಲೋಕೆ ಸ್ವಾಭಿಮಾನದ ಅಡ್ಡಿ. ಕೊಪ್ಪಳ, ಸಪ್ಪಳವೇ ಇಲ್ಲದೆ ಮುಗಿದಿದೆ. 




