ಹಸ್ತಮೈಥುನವೂ ಕಾಮೋದ್ರೇಕ ತಣಿಸುವ ಉಪಾಯಗಳಲ್ಲಿ ಒಂದು. ಅದಕ್ಕೆ ಹುಡುಗ/ಹುಡುಗಿಯರು ತಮ್ಮ ತಮ್ಮದೇ ಕೋಡ್ ವರ್ಡುಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ. ಅದೊಂಥರಾ ಸ್ವಾವಲಂಬಿ ಸುಖ. ಮದುವೆ ಆಗದವರು, ಪ್ರೇಯಸಿ ಸಿಗದವರು.. ಅವರವರ ಕಷ್ಟ ಅವರವರಿಗೆ. ಹೆಚ್ಚಿನ ಯುವ ಜನತೆ ಹಸ್ತಮೈಥುನಕ್ಕೆ ದಾಸರಾಗಿದ್ದಾರೆ ಎನ್ನುತ್ತಿವೆ ಅಧ್ಯಯನ.
ಬಾರೇ ಹೋಗೋಣ
ಪ್ರೀತಿ ಮಾಡೋಣ..
ಎಂದು ಇವನು ಕರೆದಾಗ..
ಬಾರೋ ಹೋಗೋಣ
ಪ್ರೀತಿ ಮಾಡೋಣ..
ಎನ್ನುವ ಅವಳೇ ಇಲ್ಲದಿದ್ದರೆ ಇನ್ನೇನು ಮಾಡಬೇಕು. ಉಪವಾಸವೇ ಗತಿ ಅಂತೀರಾ. ಹಾಗೆ ಉಪವಾಸದ ಭಯಕ್ಕೆ ಬಿದ್ದವರಿಗೆ ಹಸ್ತಮೈಥುನ ಬಿಟ್ಟು ಬೇರೆ ದಾರಿ ಯಾವುದಿದೆ..
ಆದರೆ ಹಸ್ತಮೈಥುನದ ಬಗ್ಗೆ ಒಳ್ಳೆಯ ಮಾತುಗಳಿಗಿಂತ ತಪ್ಪು ಕಲ್ಪನೆಗಳೇ ಹೆಚ್ಚು. ಹಸ್ತಮೈಥುನದಿಂದ ದೇಹದ ಶಕ್ತಿಯೆಲ್ಲ ಸೋರಿ ಹೋಗುತ್ತೆ. ವೀಕ್ ಆಗ್ತಾರೆ ಅನ್ನೋದ್ರಿಂದ ಹಿಡಿದು ಪುರುಷತ್ವವೇ ಸರ್ವನಾಶವಾಗಿ ಹೋಗುತ್ತೆ ಎನ್ನುವವರೆಗೆ..
ಯಮ್ಮೋ.. ಯಾಕೋ ಮೈಗೆ ಹುಷಾರಿಲ್ಲ.. ಡಿಶ್ಶುಂ..
ಯಮ್ಮೋ.. ಯಾಕೋ ಮನ್ಸೇ ಸರಿಯಾಗಿಲ್ಲ.. ಡಿಶ್ಶುಂ..
ಎಂದು ಒಬ್ಬರೇ ಹಾಡಿಕೊಳ್ಳೋ ಬದಲು ಸುಮ್ಮನೆ ಈ ಎಲ್ಲ ತಪ್ಪು ಕಲ್ಪನೆಗಳಿಗೆ ಉತ್ತರ ಇಲ್ಲಿದೆ ತಿಳಿದುಕೊಳ್ಳಿ. ಮದನ ಕಾಮರಾಜ ಕೊಟ್ಟಾ ಒಂದು ವರವ ಎಂದುಕೊಂಡು ಆ ವರವನ್ನು ಸದುಪಯೋಗ ಪಡಿಸಿಕೊಳ್ಳಿ.
ಈ ವದಂತಿಗಳೆಲ್ಲ ನಿಜವಾಗಿದ್ದರೆ ಪ್ರತಿದಿನ ಮೈಥುನ ಮಾಡುವವರು ತಿಂಗಳಾಗೋ ಹೊತ್ತಿಗೆ ಸತ್ತೇ ಹೋಗಬೇಕಿತ್ತು.
ಹಾಗಾಗುವುದಿಲ್ಲ. ವೀರ್ಯ ಗಂಡಸಿನ ವೃಷಣಗಳಲ್ಲಿ ಉತ್ಪತ್ತಿಯಾಗುತ್ತಲೇ ಇರುತ್ತದೆ. ದಿನಕ್ಕೊಮ್ಮೆ ವೀರ್ಯ ಸ್ಖಲನ ಉಂಟಾದರೆ ಸಮಸ್ಯೆಯೇನಿಲ್ಲ.
ಶಿಶ್ನ ಡೊಂಕಾಗುತ್ತದೆ ಅನ್ನೋ ಭಯ
ಶಿಶ್ನದ ಡೊಂಕಿಗೂ ಹಸ್ತಮೈಥುನಕ್ಕೂ ಸಂಬಂಧ ಇಲ್ಲ. ಹಾಗೆ ನೋಡಿದರೆ ಎಲ್ಲರ ಶಿಶ್ನವೂ ನೇರವಾಗಿರುವುದಿಲ್ಲ. ಶೇ.50 ಮಂದಿಯ ಶಿಶ್ನ ಸ್ವಲ್ಪವಾದರೂ ಬಾಗಿದಂತಿರುತ್ತದೆ. ಇದು ವೈದ್ಯರೇ ಹೇಳಿರುವ ಸತ್ಯ. ಹಸ್ತಮೈಥುನದಿಂದ ಬಾಗುವಿಕೆ ಹೆಚ್ಚಾಗುವುದೂ ಇಲ್ಲ, ಕಡಿಮೆಯಾಗುವುದೂ ಇಲ್ಲ. ಮಿಲನ ಮಹೋತ್ಸವಕ್ಕೆ ಅದೊಂದು ಸಮಸ್ಯೆಯೂ ಅಲ್ಲ.
ಹಸ್ತಮೈಥುನ ಸಂಗಾತಿಗೆ ಮಾಡುವ ಮೋಸವಲ್ಲ
ಸಂಗಾತಿ ಬಳಿ ಇಲ್ಲದಾಗ ಏನು ಮಾಡಬೇಕು. ಹಸ್ತಮೈಥುನವೇ ಆಪ್ತರಕ್ಷಕ. ಅಡ್ಡದಾರಿ ತುಳಿಯೋದು ತಪ್ಪು. ಅಷ್ಟೆಲ್ಲ ಆಗಿ ಸಂಗಾತಿಗೆ ಆಗ ಮೂಡ್ ಇರದೇ ಹೋದರೆ.. ಆಗ ಹಸ್ತವೇ ಗತಿ.
ಅದು ತಾತ್ಕಾಲಿಕ ಸಮಾಧಾನ ಸಂತೋಷ ಹಾಗೂ ಮಾನಸಿಕ ನೆಮ್ಮದಿ ನೀಡುತ್ತದೆ.
ಸ್ತ್ರೀಯರು ಹಸ್ತಮೈಥುನ ಮಾಡಿಕೊಳ್ಳಲ್ಲ
ಇದೊಂದು ತಪ್ಪು ಕಲ್ಪನೆ. ಮಿಲನದ ಆಸೆ ಗಂಡಿಗಷ್ಟೇ ಸೀಮಿತ ಅಲ್ಲ. ಹೆಂಗಸರಿಗೂ ಇರುತ್ತೆ. ಜಗತ್ತಿನ ಎಲ್ಲ ಕಡೆ ಎಲ್ಲ ಮಹಿಳೆಯರೂ ಹಸ್ತ ಮೈಥುನದ ಸುಖ ಅನುಭವಿಸಿರುತ್ತಾರೆ. ಗಂಡಸರಂತೆಯೇ ಅವರೂ ಮುಕ್ತವಾಗಿ ಹೇಳಿಕೊಳ್ಳಲ್ಲ. ಹಸ್ತಮೈಥುನದಿಂದ ಪುರುಷತ್ವಕ್ಕೆ ಯಾವ ಸಮಸ್ಯೆಯೂ ಇಲ್ಲ. ಸ್ವಲ್ಪ ವೀರ್ಯ ಹೊರಗೆ ಹೋಗುತ್ತದೆ. ಸುಖ ಸಿಗುತ್ತದೆ. ಆದರೆ ಪುರುಷತ್ವವೇ ನಾಶವಾಗುತ್ತದೆ ಅನ್ನೋದು ತಪ್ಪು ಕಲ್ಪನೆ. ಆದರೆ ವಿಪರೀತದ ಹಸ್ತಮೈಥುನ ನಿಜವಾದ ಮಿಲನ ಮಹೋತ್ಸವದ ವೇಗೋತ್ಕರ್ಷವನ್ನು ಕಡಿಮೆ ಮಾಡುತ್ತದೆ.
ಗರ್ಭಿಣಿಯಾಗಿರುವಾಗ ಮಿಲನ ಮಹೋತ್ಸವವನ್ನೇ ಆಚರಿಸಬಹುದು. ಹಸ್ತಮೈಥುನವನ್ನೂ ಮಾಡಬಹುದು.
ಗರ್ಭಿಣಿಯಾದ ಮಾತ್ರಕ್ಕೆ ಲೈಂಗಿಕ ಬಯಕೆ ಇರಬಾರದೆಂದೇನೂ ಅಲ್ಲ.
ವೃದ್ಧರಾದವರೀ ಹಸ್ತಮೈಥುನ ತಪ್ಪಲ್ಲ. ಅವರೂ ಮಾಡಿಕೊಳ್ತಾರೆ. ಅದು ತಪ್ಪೂ ಅಲ್ಲ. ಅಸಾಧ್ಯವೂ ಅಲ್ಲ. ಹಾಗೆ ಮಾಡಿಕೊಳ್ಳುವವರನ್ನು ಕ್ರಿಮಿನಲ್ ಗಳ ರೀತಿ ನೋಡುವುದು ಅಪರಾಧ.
ಆಗಲೇ ಹೇಳಿದಂತೆ ಹಸ್ತಮೈಥುನಕ್ಕೇ ಒಗ್ಗಿ ಹೋದರೆ ನಿಜವಾದ ಸುಖ ರುಚಿಸದೇ ಹೋಗಬಹುದು. ಹಾಗಾಗಿ ಹಸ್ತಮೈಥುನ ಇರಲಿ. ನಿಯಂತ್ರಣದಲ್ಲಿರಲಿ.



