ಬೆಂಕಿ ಉಗುಳುತ್ತಿರುವಾಗಲೇ ಪಾನ್ ಬೀಡಾವನ್ನು ಹಾಕಿಕೊಳ್ಳೋ ಜನರನ್ನ ನೋಡಿದ್ದೀರಿ. ವಿಡಿಯೋ ನೋಡಿ ವ್ಹಾವ್ ಎಂದಿರ್ತೀರಿ.. ಅಷ್ಟು ಈಸಿಯಾಗಿ ಹಾಕ್ಕೊಳ್ತಾರೆ.. ಏನೂ ಆಗಲ್ವಾ.. ಅಂತ ಪ್ರಶ್ನೆ ಹಾಕ್ಕೊಳ್ತೀರಿ. ಮುಂದಿನ ಸಲ ಎಲ್ಲಾದರೂ ಸಿಕ್ಕರೆ.. ನಾವೂ ಒಂದ್ಸಲ ಟ್ರೈ ಮಾಡೋಣ ಅಂದ್ಕೊಳ್ತೀರಿ. ವಿಡಿಯೋ ಮಾಡ್ಕೊಳ್ಳೊದನ್ನ ಮರೆಯೋದಿಲ್ಲ. ಅಲ್ವಾ.. ಅಂತಹವರಿಗೆ ಈ ಘಟನೆ ಎಚ್ಚರಿಕೆ ಗಂಟೆ.
ಬೆಂಗಳೂರಿನ ಬಾಲಕಿಯೊಬ್ಬಳ ಹೊಟ್ಟೆಯಲ್ಲಿ ರಂಧ್ರವಾಗಿದೆ. ಮದುವೆ ಆರತಕ್ಷತೆ ಸಮಾರಂಭದಲ್ಲಿ ನೀಡಿದ್ದ ಲಿಕ್ವಿಡ್ ನೈಟ್ರೋಜನ್ (ಬಾಯಲ್ಲಿ ಹಾಕಿದ ಕೂಡಲೇ ಹೊಗೆ ತರಿಸುವ) ತುಂಬಿದ ಪಾನ್ ಸೇವಿಸಿರುವುದೇ ಇದಕ್ಕೆಲ್ಲ ಕಾರಣ. ಸುಮಾರು ಬಟಾಣಿ ಕಾಳಿನಷ್ಟು ಅಗಲದ ರಂಧ್ರವಾಗಿದೆ.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಇತ್ತೀಚೆಗೆ ಮದುವೆ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಸಮಾರಂಭಕ್ಕೆ ತಂದೆ ತಾಯಿಯೊ ಜೊತೆ ಹೋಗಿದ್ದ 12 ವರ್ಷದ ಬಾಲಕಿಯೊಬ್ಬಳು ಬೆಂಕಿಯ ಹಬೆ ಆಡುತ್ತಿದ್ದ ಪಾನ್ ತಿಂದಳು. ಅದು ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ ಬೀಡಾ. ಕೆಲ ಹೊತ್ತಿನಲ್ಲಿಯೇ ಹೊಟ್ಟೆ ನೋವು ಶುರುವಾಯ್ತು. ಆಸ್ಪತ್ರೆ ವೈದ್ಯರು ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಆಗ ಎಂಡೋಸ್ಕೋಪ್ ಪರೀಕ್ಷೆಯಲ್ಲಿ ಅನ್ನನಾಳ, ಹೊಟ್ಟೆಯ ಇತರೆ ಪರೀಕ್ಷಿಸಿದಾಗ ಹೊಟ್ಟೆಯಲ್ಲಿ ಸುಮಾರು 4 – 5 ಸೆಂ.ಮೀ ಅಳತೆಯ ರಂಧ್ರವಾಗಿದೆ ಎಂದು ತಿಳಿದುಬಂದಿದೆ.
ರಂಧ್ರವಾಗಿದ್ದ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು, ಹೊಟ್ಟೆಯ ಒಂದು ಭಾಗವನ್ನು ತೆಗೆದು ಹಾಕಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಎರಡು ದಿನ ಐಸಿಯುನಲ್ಲಿದ್ದ ಬಾಲಕಿಯು 6 ದಿನಗಳ ಆಸ್ಪತ್ರೆ ವಾಸ ಮುಗಿಸಿ ಮನೆ ಸೇರಿದ್ದಾಳೆ.
ಲಿಕ್ವಿಡ್ ನೈಟ್ರೋಜನ್ ತುಂಬಿದ ಪಾನ್ʻನಲ್ಲಿರುವ ದ್ರವ ಸಾರಜನಕ ಕೆಲವರಿಗೆ ಆಘಾತ ಮಾಡುವುದು ಸಾಮಾನ್ಯ. ದೇಹದೊಳಕ್ಕೆ ಹೋದ ನಂತರ ಆ ಲಿಕ್ವಿಡ್ ನೈಟ್ರೋಜನ್ ಕೆಲವರ ದೇಹ ಪ್ರಕ್ರಿಯೆಗೆ ಹೊಂದಿಕೊಂಡು ಬಿಡುತ್ತದೆ. ಆದರೆ.. ಕೆಲವರಿಗೆ ಹೊಟ್ಟೆಯೊಳಗೆ ಚರ್ಮವನ್ನು ಹಾನಿಗೊಳಿಸುತ್ತದೆ. ನೈಟ್ರೋಜನ್ ಆವಿಯನ್ನು ಉಸಿರಾಡುವುದರಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ. ಅಂಗಾಂಗ ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞರು ವಿವರಿಸಿದ್ದಾರೆ.
ಇಂಥಧ್ದೇ ಘಟನೆ 2017 ರಲ್ಲಿ ಒಮ್ಮೆ ನಡೆದಿತ್ತು. ಆಗ ಬಾಲಕನೊಬ್ಬ ಮೃತಪಟ್ಟಿದ್ದೂ ಆಗಿತ್ತು. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ನೈಟ್ರೋಜನ್ ಫೈರ್ ತಡೆದುಕೊಳ್ಳೋ ಶಕ್ತಿ ಇರುವುದಿಲ್ಲ. ಬಾಯಲ್ಲಿ ಹಾಕಿದ ಕೂಡಲೇ ಹೊಗೆ ತರಿಸುವ ಈ ಲಿಕ್ವಿಡ್ ನೈಟ್ರೋಜನ್ ಪಾನ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಆದರೆ, ಟ್ರೆಂಡಿ ಫುಡ್‌ಗಳ ಹಿಂದೆ ಅಡಗಿರುವ ಅಪಾಯಗಳ ಬಗ್ಗೆ ಪ್ರತಿಯೊಬ್ಬರೂ ಅರಿತಿರಬೇಕು.
ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿಯ ಆಪರೇಟಿಂಗ್ ಸರ್ಜನ್ ಡಾ.ವಿಜಯ್ ಎಚ್.ಎಸ್ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ. ಆಹಾರದಲ್ಲಿ ವಿವಿಧ ರೀತಿಯ ಪ್ರಯೋಗಗಳನ್ನು ಮಾಡುವಾಗ ಹಾಗೂ ಅಂತಹ ಪ್ರಯೋಗಗಳಿಂದ ಆಗುವ ಅಪಾಯಗಳ ಬಗ್ಗೆ ಜನರೂ ಎಚ್ಚರಿಕೆಯಿಂದ ಇರಭೇಕು ಎಂದು ಅಭಿಪ್ರಾಯ ಪಟ್ಟಿದ್ಧಾರೆ.



