ಒಂದು ಸರಳ ಪ್ರೇಮಕಥೆ. ಹೆಸರು ಕೇಳಿದಾಕ್ಷಣ ಸಿಂಪಲ್ಲಾಗೊಂದ್ ಲವ್ ಸ್ಟೋರಿಯ ಟೈಟಲ್ ನೆನಪಾಗುತ್ತಾದರೂ.. ಕಥೆ ಆ ರೀತಿ ಇಲ್ಲ. ಸಿಂಪಲ್ ಸುನಿ ಈ ಚಿತ್ರದಲ್ಲಿ ಬೇರೆಯದೇ ರೀತಿಯ ಲವ್ ಸ್ಟೋರಿ ಹೇಳಿದ್ದಾರೆ. ಟೈಟಲ್ ಸರಳ ಪ್ರೇಮ ಕಥೆ ಎಂದಿದ್ದರೂ.. ಸಿನಿಮಾ ಕಥೆ ನೋಡಿದರೆ ಇದು ವಿರಳ ಪ್ರೇಮಕಥೆ ಎನ್ನಿಸುತ್ತದೆ ಎನ್ನುವುದರಲ್ಲೇ ಸಿನಿಮಾದ ಶಕ್ತಿ ಇದೆ. ವಿನಯ್ ರಾಜಕುಮಾರ್ ಈ ಬಾರಿಯಾದರೂ ಗೆಲ್ಲಲಿ ಎಂದು ಹಾರೈಸುತ್ತದೆ ದೊಡ್ಮನೆ ಅಭಿಮಾನಿಗಳ ಮನಸ್ಸು. ಸಿನಿಮಾಗೆ ಹಿಟ್ ಆಗುವ ಎಲ್ಲ ಲಕ್ಷಣಗಳೂ ಇವೆ.
ವಿನಯ್ ರಾಜಕುಮಾರ್ ಅತಿಶಯ್ ಅನ್ನೋ ಸಂಗೀತಗಾರನ ಪಾತ್ರ. ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗಬೇಕು ಎಂದು ಪ್ರತಿಕ್ಷಣವೂ ಕನಸು ಕಾಣುವ ಅತಿಶಯ್ʻಗೆ ತಾನು ಮದುವೆಯಾಗುವ ಹುಡುಗಿಗೆ ಸಂಗೀತದ ಬಗ್ಗೆ ಪ್ರೀತಿ ಇರಬೇಕು ಹಾಗೂ ಅವಳ ಧ್ವನಿ ಚೆನ್ನಾಗಿರಬೇಕು ಎಂದು ಕನಸು ಕಾಣುತ್ತಾನೆ. ಅಂತಹ ಸಿರಿಕಂಠದ ಕನಸು ಕಾಣುವ ಹುಡುಗ ಅತಿಶಯ್ ಒಂದು ಚೆಂದದ ಧ್ವನಿಯ ಬೆನ್ನು ಬೀಳ್ತಾನೆ. ಆಕೆಯ ಮುಖ ಕಾಣಿಸುವುದಿಲ್ಲ. ಧ್ವನಿಯನ್ನೇ ಪ್ರೀತಿಸುವ ಅವನಿಗೆ ಹಲವು ಅಚ್ಚರಿಗಳು ಎದುರಾಗುತ್ತವೆ. ಆತ ಪ್ರೀತಿಸಿದ ಧ್ವನಿ ಯಾವ ಹುಡುಗಿಯದ್ದು ಎಂಬುದು ತಿಳಿಯಬೇಕಿದ್ದರೆ ಕ್ಲೈಮ್ಯಾಕ್ಸ್ ತನಕ ಕಾಯಬೇಕು.
ರಾಧಾಕೃಷ್ಣ ಧಾರಾವಾಹಿಯಲ್ಲಿ ರಾಧೆಯಾಗಿದ್ದ ಮಲ್ಲಿಕಾ ಸಿಂಗ್ ಇಲ್ಲಿ ಮಧುರಾ ಅನ್ನೋ ಗಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಲವಲವಿಕೆಯಿಂದಲೇ ನಟಿಸಿದ್ದಾರೆ. ಮತ್ತೊಬ್ಬ ಸುಂದರಿ ಸ್ವಾತಿಷ್ಠ ಕೂಡಾ ಗಮನ ಸೆಳೆಯುತ್ತಾರೆ. ಅತಿಶಯ್ ಫ್ರೆಂಡ್ ಆಗೋ ಸ್ವಾತಿಷ್ಠ ಕೂಡಾ ಚೆಂದವಾಗಿ ನಟಿಸಿದ್ಧಾರೆ. ಇಬ್ಬರು ಫ್ರೆಂಡ್ಸ್ ಟಾಮ್ & ಜೆರ್ರಿ ಆಟ ನಗು ತರಿಸುತ್ತದೆ.
ಸಿಂಪಲ್ ಸುನಿ ಒಂದೊಳ್ಳೆ ಲವ್ ಸ್ಟೋರಿಯನ್ನು ಅಷ್ಟೇ ಚೆಂದವಾಗಿ ಹೇಳಿದ್ಧಾರೆ. ಮೂಕನಾಗಿರಬೇಕು.. ಅನ್ನೋ ಹಾಡು ಕೇವಲ ಹಾಡಲ್ಲ, ಚಿತ್ರದ ಕಥೆಗೆ ಟ್ವಿಸ್ಟ್ ಕೂಡಾ ಕೊಡುತ್ತೆ. ಇಷ್ಟಕ್ಕೂ ಕ್ಲೈಮಾಕ್ಸ್ʻನಲ್ಲಿ ಏನಾಗುತ್ತೆ? ಅತಿಶಯ್ʻಗೆ ಆತ ಪ್ರೀತಿಸುವ ಸಿರಿಕಂಠದ ಹುಡುಗಿ ಸಿಗ್ತಾಳಾ.. ಸಿನಿಮಾ ನೋಡಿಯೇ ಹೇಳಬೇಕು. ಇಲ್ಲೇ ಹೇಳ್ಬಿಟ್ರೆ.. ಹೇಗೆ..?
ಇದು ಮ್ಯೂಸಿಕಲ್ ಲವ್ಸ್ಟೋರಿ ಇರುವಂತಹ ಸಿನಿಮಾ. ಇಂಥ ಚಿತ್ರದ ಸಂಗೀತ ನಿರ್ದೇಶಕರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅದನ್ನು ವೀರ್ ಸಮರ್ಥ್ ಅವರು ಚೆನ್ನಾಗಿ ನಿಭಾಯಿಸಿದ್ದಾರೆ. ಎಲ್ಲ ಹಾಡುಗಳಲ್ಲೂ ಕಾಡುವ ಗುಣ ಇದೆ. ಪ್ರೀತಿ, ಎಮೋಷನಲ್ ಸಂದರ್ಭಗಳಿಗೆ ಅವರು ಸಂಗೀತದ ಮೂಲಕ ಜೀವ ತುಂಬಿದ್ದಾರೆ.
ಸ್ಟಾರ್ ನಟನ ಕುಟುಂಬದಿಂದ ಬಂದ ಹೀರೋ ಎಂಬ ಇಮೇಜ್ ಬದಿಗಿಟ್ಟು ವಿನಯ್ ರಾಜ್ಕುಮಾರ್ ಅವರು ಮಧ್ಯಮವರ್ಗದ ಸಾಮಾನ್ಯ ಹುಡುಗನಾಗಿ ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ನಟಿಸಿದ್ದಾರೆ. ನಮ್ಮ ನಡುವಿನ ಒಬ್ಬ ಹುಡುಗ ಎಂಬಂತಹ ಫೀಲ್ ಕೊಡುವ ರೀತಿಯಲ್ಲಿ ಅವರ ಪಾತ್ರ ಮೂಡಿಬಂದಿದೆ. ಅನಗತ್ಯ ಹೀರೋಯಿಸಂ ಈ ಸಿನಿಮಾದಲ್ಲಿ ಇಲ್ಲ. ಅಷ್ಟರಮಟ್ಟಿಗೆ, ಪಾತ್ರಕ್ಕೆ, ಕಥೆಗೆ ನಿರ್ದೇಶಕರು ಮಹತ್ವ ನೀಡಿದ್ದಾರೆ. ಸಾಧು ಕೋಕಿಲ ಅವರು ಈ ಸಿನಿಮಾದಲ್ಲಿ ಕಾಮಿಡಿಯ ಜವಾಬ್ದಾರಿ ಹೊತ್ತಿಲ್ಲ. ಬದಲಿಗೆ, ಓರ್ವ ಸಂಗೀತ ನಿರ್ದೇಶಕನ ಪಾತ್ರವನ್ನು ಅವರು ಮಾಡಿದ್ದಾರೆ. ಕಥೆಯಲ್ಲಿ ರಿಯಾಲಿಟಿ ಶೋ ಜಡ್ಜ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಹಾಗಂತ ಇದು ಸೀರಿಯಸ್ ಆದ ಪಾತ್ರ ಕೂಡ ಅಲ್ಲ. ಅವರು ತೆರೆಮೇಲೆ ಬಂದಾಗಲೆಲ್ಲ ಪ್ರೇಕ್ಷಕರ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. ಕಥಾನಾಯಕನ ತಂದೆಯ ಪಾತ್ರದಲ್ಲಿ ರಾಜೇಶ್ ನಟರಂಗ ಅವರು ಎಂದಿನಂತೆ ಪ್ರಬುದ್ಧ ಅಭಿನಯ ನೀಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿರುವ ಕಾರ್ತಿಕ್ ಮಹೇಶ್ ಅವರು ಕೆಲವೇ ಹೊತ್ತು ಕಾಣಿಸಿಕೊಂಡರೂ ಕೂಡ ಸಿನಿಮಾದ ಸಸ್ಪೆನ್ಸ್ ಹೆಚ್ಚಿಸುತ್ತಾರೆ.



