ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಕೆಳಗಿಳಿಯುವುದಿಲ್ಲ. ಅಮಿತ್ ಶಾ ಕೊಟ್ಟಿರುವ ಸಂದೇಶ ಯತ್ನಾಳ್ ಬಣ ಹಾಗೂ ವಿಜಯೇಂದ್ರ ವಿರೋಧಿ ಬಣಗಳನ್ನು ತಲ್ಲಣಕ್ಕೆ ದೂಡಿರುವುದಂತೂ ನಿಜ. ಹಾಗಂತ ಅದು ಹತಾಶೆಯಿಂದ ಕುಳಿತಿಲ್ಲ. ದಲಿಗೆ ವಿಜಯೇಂದ್ರ ಅವರನ್ನು ಕೆಳಗಿಳಿಸಲು ಹೊಸ ತಂತ್ರ ರೆಡಿಯಾಗಿದೆ ಎಂಬ ಸಂದೇಶ ಕೊಟ್ಟಿದೆ. ಈ ನಡುವೆ ದಿಢೀರನೆ ಬಸವರಾಜ ಬೊಮ್ಮಾಯಿ, ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.
ಸರ್ವೆ ರಿಪೋರ್ಟ್ ನೋಡಿ ಸೈಲೆಂಟ್ ಆದ ಅಮಿತ್ ಶಾ :
ಬಿಜೆಪಿ ವರಿಷ್ಠರು ವಿಜಯೇಂದ್ರ ಅವರನ್ನು ಬದಲಿಸದಿರಲು ಏನು ಕಾರಣ ಅನ್ನುವುದೇನು ದೊಡ್ಡ ರಹಸ್ಯವಲ್ಲ. ರಾಜ್ಯದಿಂದ ಅಮಿತ್ ಶಾ ತರಿಸಿಕೊಂಡಿರುವ ಸರ್ವೆ ರಿಪೋರ್ಟ್, ವಿಜಯೇಂದ್ರ ಅವರಿಗೆ ಬಹುಪರಾಕ್ ಎಂದಿದೆ. ಇಂತಹ ಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನು ಬದಲಿಸಲು ಸಾಧ್ಯವಿಲ್ಲ ಅಂತ ನಡ್ಡಾ, ಅಮಿತ್ ಶಾ ಹೇಳಿದ ಮೇಲೆ ಆರು ತಿಂಗಳ ಕದನ ವಿರಾಮಕ್ಕೆ ವಿಜಯೇಂದ್ರ ವಿರೋಧಿ ಪಡೆ ಸಜ್ಜಾಗಿದೆ. ಆದರೆ ಈ ಆರು ತಿಂಗಳ ಅವಧಿಯಲ್ಲಿ ಜಿಲಾ ಮಟ್ಟದಲ್ಲಿ ವಿಜಯೇಂದ್ರ ವಿರುದ್ದ ಅಸಹನೆಯ ಗಾಳಿ ಶುರುವಾಗಬೇಕು, ಪಕ್ಷದಲ್ಲಿರುವ ಹಿರಿಯರು, ಮಾಜಿ ಸಚಿವರು ಸೇರಿದಂತೆ ಯಾರನ್ನೂ ವಿಜಯೇಂದ್ರ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಕೂಗು ದಟ್ಟವಾದರೆ ವರಿಷ್ಠರು ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂಬುದು ವಿರೋಧಿ ಪಡೆಯ ಟಾಪ್ ಲೀಡರುಗಳ ಲೆಕ್ಕಾಚಾರ.
ಮುರುಗೇಶ್ ನಿರಾಣಿಗೆ ಗಾಳ :
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರನ್ನು ತಮ್ಮ ಕಡೆ ಸೆಳೆದು ಕೊಂಡಿರುವ ಯತ್ನಾಳ್ ಪಡೆ, ಲೆಕ್ಕಾಚಾರದ ಹೆಜ್ಜೆ ಇಡ್ತಾ ಇದೆ. ನಿರಾಣಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಅವರಿಗೆ ಆಪ್ತ ಹಾಗೂ 2021ರಲ್ಲಿ ಯಡಿಯೂರಪ್ಪ ಅವರು ಕೆಳಗಿಳಿದಾಗ, ಅಮಿತ್ ಶಾ ಅವರ ಆಯ್ಕೆ ನಿರಾಣಿಯೇ ಆಗಿದ್ದರು ಎನ್ನುವುದು ಇದಕ್ಕೆ ಕಾರಣ. ಆದರೆ ಖುದ್ದು ನರೇಂದ್ರ ಮೋದಿಯವರೇ ಬಸವ ರಾಜ ಬೊಮ್ಮಾಯಿ ಹೆಸರಿಗೆ ಗ್ರೀನ್ ಸಿಗ್ನಲ್ ನೀಡಿದ್ದರಿಂದ ನಿರಾಣಿ ನಿರಾಸೆ ಅನುಭವಿಸ ಬೇಕಾಯಿತು. ಹಾಗಂತ ಅಮಿತ್ ಶಾ ಜೊತೆಗಿನ ಬಾಂಧವ್ಯವೇನೂ ಹಳಸಿಲ್ಲ.
ಅಮಿತ್ ಶಾ ಬಯಸಿದ್ದನ್ನು ಮಾಡುತ್ತಾ, ಈಗಲೂ ಅವರ ಅತ್ಯಾಪ್ತ ಬಳಗ ದಲ್ಲಿದ್ದಾರೆ. ಹೀಗಾಗಿ ಅವರ ಮೇಲೆ ಕಣ್ಣಿಟ್ಟಿರುವ ವಿಜಯೇಂದ್ರ ವಿರೋಧಿ ಪಡೆ,ಮೆಲ್ಲಗೆ ನಿರಾಣಿ ಅವರ ಕೈ ಹಿಡಿದು ತನ್ನ ಶಿಬಿರಕ್ಕೆ ಎಳೆದುಕೊಂಡಿದೆ. ಅಲ್ಲಿಗೆ ಕರ್ನಾಟಕ ಬಿಜೆಪಿಯ ವಿಷಯದಲ್ಲಿ ವರಿಷ್ಠರು ಮೌನವಾಗಿರುವುದು ನಿಶ್ಚಿತವಾದರೂ ವಿಜಯೇಂದ್ರ ವಿರೋಧಿ ಪಡೆ ಹೊಸ ಲೆಕ್ಕಾಚಾರದೊಂದಿಗೆ ನಿರ್ಧರಿಸಿದೆ. ಒಟ್ಟಿನಲ್ಲಿ ಈಗಲ್ಲದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯ ಸಾರಥ್ಯ ವಿಜಯೇಂದ್ರ ಅವರ ಕೈಲಿರಬಾರದು ಎಂದು ಶಪಥ ಮಾಡಿದೆ.
ಬೊಮ್ಮಾಯಿ-ಶಾ ಭೇಟಿ ಕಥೆ ಏನು..?
ಬಿಜೆಪಿ ಹೈಕಮಾಂಡ್ ನಾಯಕರಲ್ಲಿ ಪ್ರಮುಖರೂ ಆಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಬಸವರಾಜ ಬೊಮ್ಮಾಯಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಫೋಟೋ ಹಂಚಿಕೊಂಡಿರುವ ಅವರು, ದೆಹಲಿಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ರಾಜ್ಯದ ಹಲವು ವಿಷಯಗಳ ಕುರಿತು ಚರ್ಚಿಸಿದೆ ಎಂದು ಹೇಳಿದ್ದಾರೆ. ಬೊಮ್ಮಾಯಿ ಅವರು ಖುದ್ದು ಅಮಿತ್ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ರಾಜ್ಯಾಧ್ಯಕ್ಷ ಸ್ಥಾನ ತಮಗೆ ನೀಡುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಸಂಘಟಿತವಾಗುತ್ತಿದೆ. ಹೀಗಾಗಿ ಈ ಸಂದರ್ಭದಲ್ಲಿಯೇ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಕುಳಿತರೆ, ಮುಂದೆ ಚುನಾವಣೆಯನ್ನು ತಮ್ಮ ನೇತೃತ್ವದಲ್ಲೇ ಎದುರಿಸಿ, ಗೆದ್ದು ಸಲೀಸಾಗಿ ಸಿಎಂ ಆಗಬಹುದು ಎಂಬ ಲೆಕ್ಕಾಚಾರ ಬೊಮ್ಮಾಯಿ ಅವರದ್ದು ಎನ್ನಲಾಗ್ತಿದೆ. ಆದರೆ.. ಬೊಮ್ಮಾಯಿಯವರಿಗೆ ಜನರ ನಾಡಿಮಿಡಿತ ಸ್ವಲ್ಪವೂ ಅರ್ಥವಾಗಲ್ಲ.. ಅವರು ಯಾಕೆ ಪಟ್ಟಕ್ಕೆ ಬರಬೇಕು ಅನ್ನೋದು ಕೆಲವರ ಪ್ರಶ್ನೆ. ಸದ್ಯಕ್ಕೆ ವಿಜಯೇಂದ್ರ ಬಣ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದೆ.



