ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಮಾಡಲಾಗುತ್ತದೆ ಎಂದು ನಾನು ಎಂದು ಹೇಳುವುದಿಲ್ಲ. ಆದರೆ, ಪ್ರಜಾಪ್ರಭುತ್ವ ನೆಲೆಯಲ್ಲಿ ನಮ್ಮ ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆ ದೇಶದಾದ್ಯಂತ ಜಾರಿಯಲ್ಲಿದೆ. ಇಂಥಾದ್ದೊಂದು ಹೇಳಿಕೆ ನೀಡುವ ಮೂಲಕ ಬಿಜೆಪಿಯ ಪ್ರಮುಖ ನಾಯಕ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಬೇರೆಯದ್ದೇ ಸಂದೇಶ ರವಾನಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಪಕ್ಷದ ವಿವಿಧ ಹಂತಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುತ್ತಿದೆ. ಅಂತೆಯೇ ಕರ್ನಾಟಕದಲ್ಲಿಯೂ ಚುನಾವಣೆ ನಡೆಯಲಿದೆ. ಅನುಮಾನವೇ ಇಲ್ಲ, ಯತ್ನಾಳ್ & ಟೀಂ, ವಿಜಯೇಂದ್ರ ವಿರುದ್ಧ ನಿರಂತರ ಸಮರ ನಡೆಸುತ್ತಿರುವುದು, ಹಾವೂ ಸಾಯಲ್ಲ.. ಕೋಲೂ ಮುರಿಯಲ್ಲ ಎಂಬ ಪರಿಸ್ಥಿತಿ ತಲೆದೋರಿದ್ದು, ಇದಕ್ಕೊಂದು ಇತಿಶ್ರೀ ಹಾಡುವುದಕ್ಕೆಂದೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದು ಅನಿವಾರ್ಯವೂ ಆಗಿತ್ತು ಎಂಬ ಮಾತುಗಳಿವೆ.
ಹಿಂದಿನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಳಿಕ ಹೈಕಮಾಂಡ್ ತೀರ್ಮಾನದಂತೆ ಬಿವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿತ್ತು. ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಒಂದು ತಿಂಗಳು ಮಾತ್ರ ಪೂರ್ಣವಾಗಿದೆ. ಇಷ್ಟಕ್ಕೂ ಯತ್ನಾಳ್ ಟೀಂನ ಅತಿದೊಡ್ಡ ವಿರೋಧ ಏನು ಅಂದರೆ ʻವಿಜಯೇಂದ್ರ ನೇಮಕಗೊಂಡ ಅಧ್ಯಕ್ಷʼ ಎನ್ನುವುದೇ ಆಗಿದೆ. ಹೀಗಿರುವಾಗ ಅವರನ್ನು ಆಯ್ಕೆ ಮಾಡಿದರೆ ವಿವಾದ ಮುಗಿದಂತೆ ಎನ್ನುವ ಆಲೋಚನೆ ಹೈಕಮಾಂಡಿನದ್ದು.
ಏಕೆಂದರೆ ಬಿಜೆಪಿ ಹೈಕಮಾಂಡಿಗೆ ಹಿಂದುತ್ವದ ಮುಖವಾಡ ಕಳಚಿಕೊಳ್ಳುವುದೂ ಇಷ್ಟವಿಲ್ಲ. ಹಾಗಂತ ಪಕ್ಷಕ್ಕೆ ಅಗತ್ಯ ಇರುವ ನಾಯಕನನ್ನು ಕಳೆದುಕೊಳ್ಳುವುದೂ ಇಷ್ಟವಿಲ್ಲ. ಎರಡೂ ಆಗಬೇಕು ಎಂದರೆ ಚುನಾವಣೆ ಆಗಿಬಿಡಲಿ ಎಂಬ ಆಲೋಚನೆ ಇದ್ದಂತಿದೆ. ಮೇಲ್ನೋಟಕ್ಕೆ ಹೈಕಮಾಂಡ್ ಭಿನ್ನಮತೀಯರಿಗೆ ಶರಣಾದಂತೆ ಕಂಡು ಬಂದರೂ, ದೀರ್ಘಕಾಲದ ಆಲೋಚನೆ ಬೇರೆಯದೇ ಇದ್ದಂತಿದೆ.
ಹೈಕಮಾಂಡ್ ನಾಯಕರ ಪ್ರಕಾರ ಚುನಾವಣೆ ನಡೆದರೂ ವಿಜಯೇಂದ್ರ ಅವರೇ ಮೇಲುಗೈ ಸಾಧಿಸುತ್ತಾರೆ. ಏಕೆಂದರೆ ಯತ್ನಾಳ್ ಹಿಂದುತ್ವದ ಬಗ್ಗೆ ಪ್ರಖರ ಭಾಷಣ ಮಾಡುತ್ತಾರಾದರೂ, ಅವರ ಬಗ್ಗೆ ಯಾರಿಗೂ ಒಲವಿಲ್ಲ. ಅತ್ತ ಏಕಕಾಲಕ್ಕೆ ಮೋದಿಯನ್ನೂ, ಯಡಿಯೂರಪ್ಪರನ್ನೂ, ಸ್ವಾಮೀಜಿಗಳನ್ನೂ, ಮುಸ್ಲಿಮರನ್ನೂ.. ಯಾರನ್ನೂ ಬಿಡದೆ ಟೀಕೆ ಮಾಡುವ ಯತ್ನಾಳ್ ಅವರಿಗೆ ಒಬ್ಬ ರಾಜಕೀಯ ನಾಯಕನಿಗೆ ಇರಬೇಕಾದ ಪ್ರಬುದ್ಧತೆ ಇಲ್ಲ ಎನ್ನುವ ಅನಿಸಿಕೆ ಹೈಕಮಾಂಡ್ ನಾಯಕರದ್ದು. ಅಲ್ಲದೆ ಮಾತಿನಲ್ಲಿ ನಾಲಗೆ ಮೇಲೆ ಹತೋಟಿ ಇಲ್ಲದವರಿಗೆ ನಾಯಕತ್ವ ಕೊಟ್ಟರೆ ನಮಗೇ ಕಷ್ಟ ಎಂದು ಅರಿವಾಗಿರುವ ದೆಹಲಿ ನಾಯಕರಿಗೆ ಯತ್ನಾಳ್ ಅವರ ಕೈ ಮೇಲಾಗುವುದನ್ನು ಇಷ್ಟಪಡುತ್ತಿಲ್ಲ. ಹಾಗಂತ ವಿಜಯೇಂದ್ರ ಅವರಿಗೆ ಫುಲ್ ಸಪೋರ್ಟ್ ಕೊಡುವುದಕ್ಕೂ ಇಷ್ಟವಿಲ್ಲ. ಹೀಗಾಗಿಯೇ ಹೈಕಮಾಂಡ್ ಎಲೆಕ್ಷನ್ ಸೂತ್ರ ಮುಂದಿಟ್ಟಿದೆ.
ವಿಜಯೇಂದ್ರ ಅವರೇನೋ ಎಲೆಕ್ಷನ್ ಗೆದ್ದೇ ಬಿಡ್ತಾರೆ ಎಂದುಕೊಳ್ಳಿ. ಅದಾದ ಮೇಲಾದರೂ ಹೈಕಮಾಂಡ್ ಯತ್ನಾಳ್ ಬಾಯಿಗೆ ಬೀಗ ಹಾಕುತ್ತದಾ.. ಇದು ವಿಜಯೇಂದ್ರ ಬಣದ ಕುತೂಹಲ. ಅಲ್ಲದೆ ದೆಹಲಿ ಹೈಕಮಾಂಡ್ ಯಾರ ಪರ ನಿಲ್ಲಲಿಲದೆ ಎಂಬ ಸೂಚನೆ ಸಿಗಲಿದೆಯೋ.. ಅವರೇ ಮೇಲುಗೈ ಸಾಧಿಸಬಹುದು ಎಂಬ ಆತಂಕವೂ ಇದೆ. ಒಟ್ಟಿನಲ್ಲಿ ಬಿಜೆಪಿಯೊಳಗಿನ ಸಮರ ಮುಗಿಯುತ್ತಿಲ್ಲ.



