ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಟೆನ್ಷನ್ ತಂದಿಟ್ಟಿರುವವರು ಯಾರು ಎಂದರೆ.. ಎಲ್ಲರೂ ಹೇಳುವ ಹೆಸರು ಉಚ್ಚಾಟನೆಯಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಮತ್ತವರ ಟೀಂನಲ್ಲಿರುವ ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿಯವರ ಹೆಸರು. ಆದರೆ.. ವಿಜಯೇಂದ್ರಗೆ ನಿಜಕ್ಕೂ ಟೆನ್ಷನ್ ತಂದಿಟ್ಟಿರುವ ನಾಯಕರು ಅವರಲ್ಲ. ತಟಸ್ಥ ಬಣದ ನಾಯಕರು.
ಏಕೆಂದರೆ ಬಿಜೆಪಿ ಹೈಕಮಾಂಡ್ ನಾಯಕರಿಗೆ ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿಯವರ ತಾಕತ್ತು ಗೊತ್ತು. ವಾಸ್ತವವಾಗಿ ರಮೇಶ್ ಜಾರಕಿಹೊಳಿ ಬಿಟ್ಟರೆ ಉಳಿದವರಿಗೆ ಕ್ಷೇತ್ರದ ಹೊರಗೆ ಪರಿಚಯವೂ ಇಲ್ಲ. ರಮೇಶ್ ಜಾರಕಿಹೊಳಿಯವರ ಶಕ್ತಿ, ಬೆಳಗಾವಿ ಆಚೆಗೆ ಹೋಗಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅವರದ್ದು ಫ್ಯಾಮಿಲಿ ಪಾಲಿಟಿಕ್ಸ್. ಯಾರು ಯಾರಿಗೆ ಸಪೋರ್ಟ್ ಮಾಡಬೇಕು ಎನ್ನುವುದು ಅವರ ಕುಟುಂಬದಲ್ಲಿ ನಿರ್ಧಾರವಾಗುತ್ತದೆಯೇ ಹೊರತು, ಪಕ್ಷದ ಸಭೆಗಳಲ್ಲಿ ಅಲ್ಲ. ಇದೆಲ್ಲವೂ ಹೈಕಮಾಂಡ್ ನಾಯಕರಿಗೆ ಗೊತ್ತು.
ಆದರೆ ವಿಜಯೇಂದ್ರ ಅವರಿಗೆ ಚಿಂತೆ ಹೆಚ್ಚಿಸಿರುವುದು ಇವರಲ್ಲ. ತಟಸ್ಥ ಬಣದಲ್ಲಿರುವ ಸಿಟಿ ರವಿ, ವಿ ಸೋಮಣ್ಣ, ಬಸವರಾಜ ಬೊಮ್ಮಾಯಿ, ಡಾ.ಕೆ ಸುಧಾಕರ್ ಅವರಂತಹ ನಾಯಕರು. ಇವರನ್ನು ಒಲಿಸಿಕೊಳ್ಳುವುದೇ ವಿಜಯೇಂದ್ರ ಅವರ ಮುಂದಿರುವ ಸವಾಲು.
ಸದ್ಯ, ರಾಜ್ಯ ಬಿಜೆಪಿಯಲ್ಲೀಗ ನೂತನ ಸಾರಥಿಯ ಆಯ್ಕೆಗಾಗಿ ಕಸರತ್ತು ನಡೆಯುತ್ತಿದ್ದು, ವಿಜಯೇಂದ್ರ ವಿರೋಧಿ ಬಣ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಅಧ್ಯಕ್ಷರ ಆಯ್ಕೆ ಚುನಾವಣೆ ಮೂಲಕ ನಡೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾಗುತ್ತೆ, 6 ತಿಂಗಳ ಹಿಂದೆ ಯಾರೇ ಆಯ್ಕೆಯಾಗಿದ್ದರೂ, ಮತ್ತೆ ಚುನಾವಣೆ ನಡೆಸುತ್ತೇವೆ. ಚುನಾವಣೆ ಪ್ರಕ್ರಿಯೆ ವಿಳಂವಾಗಿದೆ ಅಷ್ಟೇ. ಚುನಾವಣೆ ಮೂಲಕವೇ ರಾಜ್ಯಗಳ ಅಧ್ಯಕ್ಷರ ಆಯ್ಕೆ ನಡೆಯಲಿದೆ. ವಿಜಯೇಂದ್ರ ತಾವೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.
ಈ ಮಧ್ಯೆ ವಿಜಯೇಂದ್ರ ಯಡಿಯೂರಪ್ಪ ಸೂಚನೆ ಮೇರೆಗೆ ತಟಸ್ಥ ಬಣದಲ್ಲಿರುವ ನಾಯಕರ ಜೊತೆ ಮಾತುಕತೆಗೆ ಮುಂದಾಗಿದ್ದಾರಂತೆ. ಈ ಬಾರಿಯ ದೆಹಲಿ ಸಂಸತ್ ಅಧಿವೇಶನಕ್ಕೂ ಮುಂಚೆ ಬಿಜೆಪಿ ನೂತನ ರಾಜ್ಯಾಧ್ಯಕ್ಷರ ಅಯ್ಕೆ ಪ್ರಕ್ರಿಯೆ ಘೋಷಣೆ, ಕಂಪ್ಲೀಟ್ ಆಗಲಿದೆ. ಅದಕ್ಕೆ ಮುನ್ನ ವಿಜಯೇಂದ್ರ ಅವರಿಗೆ ದೊಡ್ಡವರಿಗೆ ಗೌರವ ಕೊಡುವ ಬಗ್ಗೆ, ಹಿರಿಯರನ್ನು ಸಮಾಧಾನದಿಂದ ಮಾತನಾಡಿಸುವ ಬಗ್ಗೆ ಬುದ್ದಿ ಮಾತು ಹೇಳಿದ್ದಾರೆ. ಯಡಿಯೂರಪ್ಪ ಅವರು ವಿಜಯೇಂದ್ರ ಅವರ ತಂದೆ. ವಿಜಯೇಂದ್ರ, ಯಡಿಯೂರಪ್ಪ ಅವರಂತೆಯೇ ವರ್ತಿಸಿದರೆ ಹೇಗೆ..? ಯಡಿಯೂರಪ್ಪ ಅವರಿಗೆ ಪಕ್ಷದ ನಾಯಕರನ್ನು ಬೈದು ಬುದ್ದಿ ಹೇಳುವ ಅಧಿಕಾರ ಸಹಜವಾಗಿಯೇ ಬಂದಿದೆ. ಹಾಗಂತ ಅವರ ಮಗನೂ ಹಾಗೆಯೇ ಆಡಿದರೆ ತಡೆದುಕೊಳ್ಳುವುದು ಹೇಗೆ.. ಪಕ್ಷದ ಹಿರಿಯ ನಾಯಕರ ಅಸಮಾಧಾನ ಇದು.
ಪರಿಹಾರ ಇದ್ದೇ ಇದೆ. ಗೌರವ ಕೊಟ್ಟು ಮಾತನಾಡಿಸುವುದನ್ನು ವಿಜಯೇಂದ್ರ ರೂಡಿಸಿಕೊಳ್ಳಬೇಕು. ಅಷ್ಟೇ.



