ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಇತ್ತೀಚೆಗೆ ಒಬ್ಬ ಸ್ವಾಮೀಜಿ ವಿರುದ್ಧ ಗುಡುಗುತ್ತಿದ್ದರು. ಕಳ್ಳ ಸ್ವಾಮಿ, ಕಾಂಗ್ರೆಸ್ʻಗೆ ಮಾರಿಕೊಂಡಿರುವ ಸ್ವಾಮಿ, ಬೋಗಸ್ ಸ್ವಾಮಿ ಎಂದೆಲ್ಲ ಟೀಕಿಸುತ್ತಿದ್ದರು. ಯತ್ನಾಳ್ ಹೇಳುತ್ತಿರುವುದು ಯಾರ ಬಗ್ಗೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತಾದರೂ.. ಸ್ಪಷ್ಟ ಉತ್ತರ ಸಿಕ್ಕಿರಲಿಲ್ಲ. ಯತ್ನಾಳ್ ಅವರೂ ಹೆಸರು ಹೇಳಿರಲಿಲ್ಲ. ಇದೀಗ ಯತ್ನಾಳ್ ಅವರ ಈ ಕಳ್ಳ ಸ್ವಾಮಿ ಹೇಳಿಕೆಗಳಿಗೆ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಯತ್ನಾಳ್ ಎಂದರೆ.. ಕಾಮಿಡಿ ಮುತ್ಯಾ(ಸಿಎಂ), ಹುಚ್ಚು ಮುತ್ಯಾ(ಹೆಚ್‌ಎಂ), ಪಾಗಲ್ ಮುತ್ಯಾ(ಪಿಎಂ) ಆಗಲಿ ಎಂದು ಪಂಚಮಸಾಲಿ ಪೀಠದ ವಚನಾನಂದಶ್ರೀಗಳು ವ್ಯಂಗ್ಯ ಮಾಡಿದ್ದಾರೆ. ದಾವಣಗೆರೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಮಾತನಾಡಿದ ಶ್ರೀಗಳು, ಯತ್ನಾಳ್ ಅವರು ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ಸಿಎಂ, ಪಿಎಂ, ಹೆಚ್‌ಎಂ ಮಾಡಲಿ ಎಂದು ಹಾರೈಸುವೆ. ಲಡ್ಡುಮುತ್ಯಾ ಬೈಯುವುದರಲ್ಲಿ ಬಹಳ ಪ್ರಚಲಿತ. ಯತ್ನಾಳ್ ಯಾರಿಗೆಲ್ಲ ಬೈದಿದ್ದಾರೋ ಅವರಿಗೆಲ್ಲ ಒಳ್ಳೆಯದೇ ಆಗಿದೆ. ಆದ್ದರಿಂದ ನಮಗೆ ಬೈಯುವದನ್ನು ಮುಂದುವರಿಸಲಿ ಅದರಿಂದ ನಮಗೂ ಒಳ್ಳೆದಾಗಲಿದೆ ಎನ್ನುವ ಮೂಲಕ ಬಾಗಲಕೋಟೆ ಭಾಗದ ದೈವೀ ಸ್ವರೂಪ ಲಡ್ಡು ಮುತ್ಯಾರಿಗೆ ಹೋಲಿಕೆ ಮಾಡಿದ್ದಾರೆ ವಚನಾನಂದ ಸ್ವಾಮೀಜಿಗಳು.
ವಿಶೇಷ ಎಂದರೆ.. ವಚನಾನಂದ ಶ್ರೀಗಳಿಗೆ ಯತ್ನಾಳ್ ಬಯ್ಯುತ್ತಿರುವುದು ತಮಗೇ ಎಂದು ಗೊತ್ತಾಗಿದ್ದು ಹೇಗೆ ಎನ್ನುವುದು. ಪಂಚಮಸಾಲಿ ಸಮಾಜ ಕೂಡಲ ಸಂಗಮ ಶ್ರೀಗಳಿಗೆ ಋಣಿಯಾಗಿರಬೇಕು. ಬಿಜೆಪಿಗೆ ವೋಟ್ ಹಾಕಬೇಡ ಎಂದು ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ. ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಬಿಜೆಪಿ ಸರ್ಕಾರವಿದ್ದಾಗ ಹಣ ಪಡೆದು ಈಗ ಕಾಂಗ್ರೆಸ್‌ಗೆ ಓಟು ಹಾಕುವಂತೆ ಪ್ರಚಾರ ಮಾಡುತ್ತಿದ್ದಾನೆ. ನಕಲಿ ಸ್ವಾಮಿ, ಬುಕ್ಕಿಂಗ್ ಸ್ವಾಮಿ ಎಂದು ಕಿಡಿಕಾರಿದ್ದರು.
ಒಟ್ಟಿನಲ್ಲಿ ಪಂಚಮಸಾಲಿ ಸ್ವಾಮೀಜಿಗಳ ಈ ಹೋರಾಟದಿಂದಾಗಿ ಲಿಂಗಾಯತ ಸಮುದಾಯದ ಒಗ್ಗಟ್ಟಿಗೆ ಪೆಟ್ಟು ಬಿದ್ದಿರುವುದಂತೂ ನಿಜ. ವೀರಶೈವ ಲಿಂಗಾಯತ ಸಮುದಾಯ ಈಗ ಬಣ ಬಣಗಳಾಗಿ ಒಡೆದು ಹೋಗಿದೆ. ವೀರಶೈವ ಲಿಂಗಾಯತ ಹೋರಾಟದ ಮೂಲಕ ಲಿಂಗಾಯತರು ಬೇರೆ.. ವೀರಶೈವರು ಬೇರೆ ಎಂಬಂತೆ ವಾತಾವರಣ ಸೃಷ್ಟಿಯಾಗಿತ್ತು. ಅದು ವಿಫಲವಾಯಿತಾದರೂ.. ಸಂಪೂರ್ಣ ಸೋಲಲಿಲ್ಲ. ಅದಾದ ಮೇಲೆ ಪಂಚಮಸಾಲಿಗಳ ಹೋರಾಟ ಶುರುವಾಗಿ.. ಈಗ ಲಿಂಗಾಯತ ಸಮುದಾಯದ ಒಂದೊಂದು ಪಂಗಡವೂ.. ಪ್ರತ್ಯೇಕವಾಗುತ್ತಿದೆ.
ಈಗ ಲಿಂಗಾಯತರಲ್ಲಿ ಸಾದರು ಬೇರೆ.. ನೊಳಂಬರು ಬೇರೆ.. ಜಂಗಮರೇ ಬೇರೆ.. ಪಂಚಮಸಾಲಿಗಳು ಬೇರೆ.. ಬಣಜಿಗರು ಬೇರೆ.. ಆ ಮಠಕ್ಕೆ ನಡೆದುಕೊಳ್ಳುವವರೇ ಬೇರೆ.. ಹೀಗೆ.. ಒಗ್ಗಟ್ಟಿನ ಸಮುದಾಯ ಒಡೆದು ಹೋಳಾಗಿರುವುದಂತೂ ನಿಜ. ರಾಜಕೀಯ ಪ್ರವೇಶ ಇಡೀ ಸಮುದಾಯವನ್ನು ದಿಕ್ಕು ತಪ್ಪಿಸಿದೆ.
ಲಿಂಗಾಯತ ಸ್ವಾಮೀಜಿಗಳು ಅತ್ತ ಸ್ವಾಮಿಗಳೂ ಆಗದೆ.. ಇತ್ತ ರಾಜಕೀಯ ನಾಯಕರೂ ಆಗದೆ ಪರದಾಡುತ್ತಿದ್ದರೆ.. ರಾಜಕೀಯ ನಾಯಕರು ಇವರು ಒಗ್ಗಟ್ಟಾಗಿದ್ದರೆ ತಮಗೇ ಡೇಂಜರ್ ಎಂದು ಅರಿತು ಒಡೆಯುತ್ತಲೇ ಇದ್ದಾರೆ. ಎಲ್ಲವೂ ರಾಜಕೀಯಕ್ಕಾಗಿ.



