ಉಪ್ಪಿಗೆ (Actor Upendra) ಪಬ್ಲಿಸಿಟಿ ತಗೊಳ್ಳೋದು ಹೇಗೆ ಅನ್ನೋದು ಗೊತ್ತು. ತರ್ಲೆ ನನ್ಮಗ (Tharle Nanmaga) ಚಿತ್ರಕ್ಕೆ ಅವರೇನೂ ಪ್ರಚಾರ ಮಾಡಿರಲಿಲ್ಲ. ರಿಲೀಸ್ ಆಗಿದ್ದೇ ಅದ್ಭುತ ಎನ್ನುವ ಪರಿಸ್ಥಿತಿಯಲ್ಲಿ ರಿಲೀಸ್ ಆದ ಚಿತ್ರ ಹಿಟ್ ಆಗಿದ್ದು, ಡಗಾರ್ (dagaar) ಅನ್ನೋ ಸಂಭಾಷಣೆಯಿಂದ. ಪಬ್ಲಿಸಿಟಿ ಕೊಟ್ಟವರು ಪ್ರೇಕ್ಷಕರೇ.
ಶ್ (Shh)ಬಂದಾಗಲೂ ಅಷ್ಟೆ, ಅದೂವರೆಗೆ ಯಾರೂ ಒಂದೇ ಅಕ್ಷರದ ಹೆಸರಿಟ್ಟು ಸಿನಿಮಾ ಮಾಡಿರಲಿಲ್ಲ. ಇನು ಓಂ (OM) ವಿಷಯ ಬಿಡಿ, ರಾಜ್ ಬ್ಯಾನರ್`ನಲ್ಲಿ (Dr. Raj banner) ರೌಡಿಸಂ (Rowdism) ಕಥೆಯಂತೆ ಅನ್ನೋದೇ ದೊಡ್ಡ ಸುದ್ದಿಯಾಗಿ ಸಂಚಲನ ಸೃಷ್ಟಿಯಾಗಿತ್ತು. ಅದಾದ ಮೇಲೆ ಬಂದ ಎ (A) ಚಿತ್ರದ ಚಿತ್ರ ವಿಚಿತ್ರ ಪೋಸ್ಟರುಗಳು, ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಅನ್ನೋ ಟ್ಯಾಗ್`ಲೈನ್ ಚಿತ್ರಕ್ಕೆ ಸಖತ್ ಪ್ರಚಾರ ಕೊಟ್ಟಿತ್ತು.
ಉಪೇಂದ್ರ (Upendra)ಬಂದಾಗ ನಾನೇನಾದ್ರೂ ಪಿಎಂ ಆದರೆ ನಲ್ಲಿಯಲ್ಲಿ ಎಣ್ಣೆ ಬರೋಹಾಗ್ ಮಾಡ್ತೀನಿ ಅನ್ನೋ ಸಂಭಾಷಣೆ, ಉಪೇಂದ್ರ ಅವರದ್ದೇ ಹೆಸರು, ಉಪೇಂದ್ರ ಅವರ ಹೆಸರಿನ ಶರ್ಟ್ ಹಾಕಿಕೊಂಡಿರೋ ಉಪೇಂದ್ರ, ಜುಟ್ಟೂ ಸ್ಟೈಲ್.. ಎಲ್ಲವೂ ದೊಡ್ಡ ಹೈಪ್ ಸೃಷ್ಟಿಸಿದ್ದವು.
ಅದಾದ ಮೇಲೆ ಬಂದ ಸೂಪರ್ (Super) ಚಿತ್ರವಂತೂ, ಅದೇನು ಟೈಟಲ್ಲಾ.. ಚಿಹ್ನೆಯಾ.. ಏನು ಅನ್ನೋ ಹುಳ ಬಿಟ್ಟು ಗೆದ್ದಿದ್ದರು. ಉಪ್ಪಿ2 (Uppi 2) ಬಂದಾಗ ಟೈಟಲ್ ಏನೆಂದೇ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದರು. ಇದೀಗ ಯುಐ. ಈ ಚಿತ್ರದ ಈಗಿನ ಸ್ಟೈಲ್ ಸಖತ್ತಾಗಿಯೇ ಇದೆ.
ಟೀಸರ್ (Teaser) ರಿಲೀಸ್ ಮಾಡಿ ಎಂದರೆ ಫಸ್ಟ್ ಲುಕ್, ಟೀಸರ್ನ ರಿಲೀಸ್ ಮಾಡ್ಲೇಬೇಕಾ…? ಒಂದು ನಿಮಿಷದ ಟೀಸರ್ ಅಲ್ಲಿ ನಮ್ ಸಿನಿಮಾ ಯಾವ ರೇಂಜ್ನಲ್ಲಿದೆ ಎಂಬುದನ್ನು ಹೇಳಬಹುದಾದರೆ, ನಾವೇಕೆ ಎರಡು ಗಂಟೆ ಸಿನಿಮಾ ಮಾಡಬೇಕು? ಸುಳ್ಳಿಗೆ ಹೈಪ್ ನೀಡಬೇಕು, ಸತ್ಯಕ್ಕೆ ತಾನಾಗಿಯೇ ಹೈಪ್ ಸಿಗುತ್ತದೆ…’ ಎಂದೆಲ್ಲ ಹೇಳುತ್ತಿದ್ದ ಉಪೇಂದ್ರ , ಈಗ ಕೊನೆಗೂ ಟೀಸರ್ ರಿಲೀಸ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಉಪೇಂದ್ರ ಅವರ ಮನೆಯ ಎದುರು ಅಭಿಮಾನಿಗಳು ನೆರೆದಿರುತ್ತಾರೆ. ಅವರು ಟೀಸರ್ ಬೇಕೆ ಬೇಕು ಎಂದು ಹಠ ಹಿಡಿದು ಕೂರುತ್ತಾರೆ. ಇದಕ್ಕೆ ಉಪ್ಪಿ ಕೂಡ ಒಪ್ಪುತ್ತಾರೆ. ಟೀಸರ್ನ ಥಿಯೇಟರ್ನಲ್ಲಿ ನೋಡುವ ಅವಕಾಶವನ್ನು ಉಪೇಂದ್ರ ಮಾಡಿಕೊಡುತ್ತಿದ್ದಾರೆ. ಇದು ಟೀಸರ್ಗೇ ಕೊಟ್ಟ ಟೀಸರ್.
ಈ ಹಿಂದೆ ನಿರ್ಮಾಪಕ ನವೀನ್ ಮತ್ತು ಕೆಪಿ ಶ್ರೀಕಾಂತ್ ಜೊತೆಗೆ ಉಪೇಂದ್ರ ಕಾಣಿಸಿಕೊಂಡಿದ್ದ ಪ್ರೋಮೋ ಬಂದಿತ್ತು. ಇದೀಗ ಟೀಸರ್ ರಿಲೀಸ್ ಡೇಟ್ ಅನೌನ್ಸ್ಮೆಂಟ್ಗಾಗಿಯೇ ಮತ್ತೊಂದು ಟೀಸರ್ನ್ನು ಚಿತ್ರತಂಡ ರಿಲೀಸ್ ಮಾಡಿದೆ.
ಟೀಸರ್ನಲ್ಲಿ ಹಠ ಹಿಡಿದು ಬಂದ ಅಭಿಮಾನಿಗಳಿಗೆ ನೀವೆಲ್ಲ ತಲೆ ಎತ್ತಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕು ಎಂಬುದು ನನ್ನಾಸೆ. ತಲೆ ಬಗ್ಗಿಸಿ, ಮೊಬೈಲ್ನಲ್ಲಿ ನೋಡಲಿ ಎಂಬುದಲ್ಲ ಎಂದು ಅವರನ್ನು ಸಮಾಧಾನ ಮಾಡುತ್ತಾರೆ. ಅದಕ್ಕೆ ಫ್ಯಾನ್ಸ್ . ಟೀಸರ್ ಬೇಕೇ ಬೇಕು ಎಂದು ಪ್ರತಿಭಟನೆ ಮಾಡುತ್ತಾರೆ. ಆಗ ಉಪೇಂದ್ರ ಟೀಸರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡುತ್ತಾರೆ.
ಸೆ.18ರ ಉಪೇಂದ್ರ ಅವರ ಹುಟ್ಟುಹಬ್ಬದ ದಿನ ‘ಯುಐ’ ಸಿನಿಮಾದ ಟೀಸರ್ ಊರ್ವಶಿ ಥಿಯೇಟರಿಯನಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್ಟೇನರ್ಸ್ ಬ್ಯಾನರ್ ಅಡಿಯಲ್ಲಿ ಜಿ ಮನೋಹರನ್, ಶ್ರೀಕಾಂತ್ ಕೆಪಿ ನಿರ್ಮಾಣ ಮಾಡುತ್ತಿದ್ದಾರೆ. ನವೀನ್ ಮನೋಹರನ್ ಸಹ ನಿರ್ಮಾಪಕರಾಗಿದ್ದಾರೆ.
ನಿಧಿ ಸುಬ್ಬಯ್ಯ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ, ನಿರ್ಮಾಪಕ ಉಮೇಶ್ ಬಣಕಾರ್, ನಿರ್ದೇಶಕ ಓಂ ಸಾಯಿಪ್ರಕಾಶ್ ಮುಂತಾದವರು ನಟಿಸಿರುವ ಚಿತ್ರವಿದು. ಚಿತ್ರದ ಕಥೆಯ ಬಗ್ಗೆ ಎಂದಿನಂತೆ ಸುತಾರಾಂ ಸುಳಿವು ಕೊಟ್ಟಿಲ್ಲ ಉಪ್ಪಿ.



