ಗುಜರಾತ್ ಚುನಾವಣೆ ಬಳಿಕ ಎಲ್ಲ ಟಿವಿ ಚಾನೆಲ್‍ಗಳಲ್ಲಿ ಚರ್ಚೆಗಳು ಜೋರಾಗಿವೆ. ಬಿಜೆಪಿ ಏನು ಮಾಡ್ತಿದೆ. ಕಾಂಗ್ರೆಸ್ ಏನು ತಂತ್ರಗಾರಿಕೆ ಮಾಡ್ತಿದೆ ಅನ್ನೋ ಚರ್ಚೆಗಳು ನಡೆಯುತ್ತಿವೆ. ಎರಡು ಮೂರು ದಿನಗಳಿಂದ ನೋಡುತ್ತಿದ್ದೇನೆ. ಟಿವಿಗಳವರು ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವಿದೆ ಅನ್ನೋದನ್ನೇ ಮರೆತಿದ್ದಾರೆ. ಆ ಬಗ್ಗೆ ನನಗೆ ಬೇಸರ ಇಲ್ಲ. ಆದರೆ ಪಂಚರತ್ನ ಯಾತ್ರೆಯ ಬಳಿಕೆ ನಮ್ಮ ಪಕ್ಷದ ಗ್ರಾಫ್ ಏರುತ್ತಲೆ ಇದೆ ಎಂದು ಹೇಳಿಕೊಂಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ.

ಪಂಚರತ್ನ ಯಾತ್ರೆಯ ದೃಶ್ಯ ವೈಭವ, ಎಲ್ಲೇ ಹೋದರೂ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವ ಅಭಿಮಾನಿ ಬಳಗ, ತಾನು ರೈತಪರ ಎಂದು ಬಿಂಬಿಸಿಕೊಳ್ಳೋ ಕುಮಾರಸ್ವಾಮಿ ಅವರ ಪ್ರಯತ್ನ, ಕೊತ್ತಂಬಿರಿ ಸೊಪ್ಪನಿಂದ ಹಿಡಿದು ಮೆಣಸಿನಕಾಯಿ, ಕ್ಯಾಪ್ಸಿಕಂ, ಮಲ್ಲಿಗೆ, ಸೇಬು, ಚಕ್ಕೋತ, ಚೆಂಡು ಹೂವು, ಕೊಬ್ಬರಿ.. ಹೀಗೆ ಯಾವ್ಯಾವ ರೈತರ ಪ್ರದೇಶದಲ್ಲಿ ಏನೇನು ಪ್ರಮುಖ ಬೆಳೆಗಳಿವೆಯೋ.. ಅವುಗಳನ್ನೇ ಹಾರಗಳನ್ನಾಗಿ ಅರ್ಪಿಸಲಾಗುತ್ತಿದೆ. ಅದರೂ.. ಪ್ರಚಾರದ ಕೊರತೆ ಇದೆ ಎನ್ನುವುದು ನಿಜ. ಟಿವಿಯವರ ಮೇಲೆ ಕುಮಾರಸ್ವಾಮಿ ಈ ಮಾತು ಹೇಳಿದ್ದು ಚಾಮರಾಜಪೇಟೆಯ ಜೆ.ಪಿ.ಭವನದಲ್ಲಿ. 50ಕ್ಕೂ ಹೆಚ್ಚು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರನ್ನು ಜೆಡಿಎಸ್‍ಗೆ ಸೇರ್ಪಡೆ ಮಾಡಿಕೊಂಡು ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಚಾಮರಾಜ ಪೇಟೆಯಿಂದಲೇ ನಮ್ಮ ಗೆಲುವಿನ ಯಾತ್ರೆ ಆರಂಭವಾಗಲಿ ಎಂದರು.

ಚಾಮರಾಜ ಪೇಟೆ ಜಮೀರ್ ಅಹ್ಮದ್ ಕ್ಷೇತ್ರ. ಆದರೆ ಎಲ್ಲಿಯೂ ಜಮೀರ್ ಹೆಸರು ಹೇಳದ ಕುಮಾರಸ್ವಾಮಿ, ಕ್ಷೇತ್ರದ ಅಭಿವೃದ್ಧಿಗೆ ಶ್ರೀಕಾರ ಹಾಕಿದ್ದು ದೇವೇಗೌಡರು ಎಂಬ ಇತಿಹಾಸವನ್ನೂ ನೆನಪಿಸಿದರು. ಮೊದಲ ಬಾರಿ ಜಮೀರ್ ಶಾಸಕರಾಗಲು ದೇವೇಗೌಡರೇ ಚಾಮರಾಜಪೇಟೆಯ ಬೀದಿ ಬೀದಿ ಸುತ್ತಿದ್ದನ್ನು ಹೇಳದೆಯೇ ನೆನಪು ಮಾಡಿಸಿದರು. ಅಲ್ಲದೆ ಈ ಬಾರಿ ನಮ್ಮ ಗ್ರಾಫ್ ಏರುತ್ತಿದೆ. ಖಂಡಿತಾ 123 ಸೀಟು ಗೆಲ್ಲುತ್ತೇವೆ ಎಂದರು ಕುಮಾರಸ್ವಾಮಿ. ವೇದಿಕೆಯಲ್ಲಿ ಆರ್.ಟಿ.ಐ. ಕಾರ್ಯಕರ್ತ ಲಿಂಗರಾಜು ಕೊಲೆ ಆರೋಪದಲ್ಲಿ ಜೈಲು ಸೇರಿ ಇತ್ತೀಚೆಗೆ ದೋಷಮುಕ್ತರಾಗಿ ಬಿಡುಗಡೆಯಾಗಿದ್ದ ಮಾಜಿ ಕಾರ್ಪೊರೇಟರ್ ಗೌರಮ್ಮ ಮತ್ತು ಗೋವಿಂದರಾಜು ಕೂಡಾ ಜೆಡಿಎಸ್ ಸೇರಿದರು. ಜಮೀರ್ ಎದುರು ಗೋವಿಂದರಾಜು ಜೆಡಿಎಸ್ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ.
ಅಂದಹಾಗೆ ಕುಮಾರಸ್ವಾಮಿಯವರಿಗೆ 123 ಸೀಟು ಗಳಿಸುವ ಗುರಿ ಇಟ್ಟುಕೊಳ್ಳೋದು ತಪ್ಪಲ್ಲ. ಆಸೆ ಕಾಣುವುದು ಕೂಡಾ ತಪ್ಪಲ್ಲ. ಆದರೆ.. ಎಲೆಕ್ಷನ್ ಹೊತ್ತಿನಲ್ಲಿ ಮಾತ್ರ ಆಕ್ಟಿವ್ ಆಗುವ ರಾಜಕಾರಣಿಯಾದರೆ ಆ ಗುರಿ ಈಡೇರುವ ಸಾಧ್ಯತೆ ಕಡಿಮೆ.



