ಉಮಾಪತಿ ವರ್ಸಸ್ ದರ್ಶನ್ ವಾರ್ ಈಗ ಇನ್ನೊಂದು ಲೆವೆಲ್ಲಿಗೆ ಹೋಗ್ತಾ ಇದೆ. ಈ ಬಾರಿ ಟೈಟಲ್ಲಿನ ವಿಷಯಕ್ಕೆ ಶುರುವಾದ ಗಲಾಟೆ ಇದು.
ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ನಟ ದರ್ಶನ್ ನಡುವಿನ ಸಮರ ಮತ್ತೊಂದು ಹಂತಕ್ಕೆ ಹೋಗುತ್ತಿದೆ. ಇಂದು ಫೆಬ್ರವರಿ 26ರಂದು ಸಂಜೆ 6ಕ್ಕೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ನಡೆಯಲಿದೆ. ಟೈಟಲ್ ಕದನದ ಬೆನ್ನಲ್ಲೇ ರಾಬರ್ಟ್ ನಿರ್ಮಾಪಕನಿಗೆ ಠಕ್ಕರ್ ಕೊಡಲು ಡಿಬಾಸ್ ಫ್ಯಾನ್ಸ್ ಮುಂದಾಗಿದ್ದಾರೆ. ದರ್ಶನ್ ಅಭಿಮಾನಿಗಳು ಈ ಬೈಕ್ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಬೊಮ್ಮನಹಳ್ಳಿ. ಉಮಾಪತಿ ಶ್ರೀನಿವಾಸ್ ಗೌಡ ಅವರ ಕ್ಷೇತ್ರ. ದರ್ಶನ್ ವಿರುದ್ಧ ಎರಡು ಕೇಸ್ ದಾಖಲಾಗಿದ್ದು, ಪ್ರತಿಭಟನೆ ನಡೆದಿದ್ದು ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ. 2023ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಉಮಾಪತಿ, 89,359 ಮತ ಪಡೆದಿದ್ದರು. ಆದರೆ, ಬಿಜೆಪಿಯ ಸತೀಶ್ ರೆಡ್ಡಿ 113,574 ಮತ ಪಡೆದು 24,215 ಮತಗಳ ಅಂತರದಲ್ಲಿ ಗೆದ್ದಿದ್ದರು. ಉಮಾಪತಿ ಅವರಿಗೆ ಇದು ಮೊದಲ ಎಲೆಕ್ಷನ್ ಎನ್ನುವುದು ಕೂಡಾ ವಿಶೇಷ.
ಈಗ ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಬೈಕ್ ರ್ಯಾಲಿ ನಡೆಸಲಿದ್ಧಾರೆ. ಅಯ್ಯೋ ತಗಡೇ.. ಗುಮ್ಮಿಸ್ಕೊಳ್ತಿಯಾ ಎಂದೆಲ್ಲ ಆರ್ಭಟಿಸಿದ್ದರು ದರ್ಶನ್. ಅದಾದ ನಂತರ ಉಮಾಪತಿ ಪರ ಗೌಡತಿಯರ ಸೇನೆ, ಒಕ್ಕಲಿಗರ ಸಂಘ, ಕೆಲವು ಮಹಿಳಾ ಸಂಘಟನೆಗಳು ಧ್ವನಿ ಎತ್ತಿದ್ದವು. ಇವುಗಳಿಗೆಲ್ಲ ಒಂದೇ ಮಾತಿನಲ್ಲಿ ಉತ್ತರ ಕೊಡುವುದಕ್ಕೆ ಹೊರಟಿರುವ ದರ್ಶನ್ ಫ್ಯಾನ್ಸ್, ಅವರದ್ದೇ ಕ್ಷೇತ್ರದಲ್ಲಿ ದರ್ಶನ್ ಪರ ರ್ಯಾಲಿ ನಡೆಸಲಿದ್ದಾರೆ.



