ಒಂದು ಸಿನಿಮಾ ಗೆದ್ದರೆ, ಆ ಗೆಲುವಿಗೆ ನಾನೇ ಕಾರಣ ಎನ್ನುವ ಮಾತುಗಳನ್ನು ಕನ್ನಡ ಚಿತ್ರರಂಗ ನೋಡಿದೆ. ಒಂದು ಸಿನಿಮಾ ಗೆದ್ದಾಗ ಗೆಲ್ಲಿಸಿದ್ದೇ ನಾನು, ಸಿನಿಮಾ ಮಾಡಿಸಿದ್ದೇ ನಾನು ಎಂದು ಕ್ರೆಡಿಟ್ ತೆಗೆದುಕೊಳ್ಳೋವ್ರ ಮಧ್ಯೆ ಗಣೇಶ್ ವಿಭಿನ್ನವಾಗಿ ನಿಂತಿದ್ದಾರೆ. ಕೃಷ್ಣಂ ಪ್ರಣಯ ಸಖಿ ಯಶಸ್ವಿ 25ನೇ ದಿನ ಪೂರೈಸಿದೆ. ಕನ್ನಡ ಚಿತ್ರರಂಗಕ್ಕೆ ಅಗತ್ಯವಾಗಿದ್ದ ಶಕ್ತಿ ತುಂಬಿದ ಚಿತ್ರಗಳಲ್ಲಿ ಒಂದು ಕೃಷ್ಣಂ ಪ್ರಣಯ ಸಖಿ. ಆಗಸ್ಟ್ 15ರಂದು ರಿಲೀಸ್ ಆಗಿದ್ದ ಕೃಷ್ಣಂ ಪ್ರಣಯ ಸಖಿ, 25 ದಿನಗಳ ನಂತರವೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಅಷ್ಟೇ ಅಲ್ಲ, ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೂ ದೊಡ್ಡ ಗೆಲುವು ಕೊಟ್ಟಿದೆ.
ಇತ್ತೀಚೆಗೆ ವೀಕೆಂಡ್‌ನಲ್ಲಿಯೂ ಬರೋಬ್ಬರಿ 56 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಇದು ಸಿನಿಮಾಗೆ ನಾಲ್ಕನೇ ವೀಕೆಂಡ್ ಎನ್ನವುದು ವಿಶೇಷ. ಒಂದು ಮೂಲದ ಪ್ರಕಾರ ಸಿನಿಮಾ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಕಾಯ್ದುಕೊಂಡಿದ್ದು, ಒಟ್ಟಾರೆ ಗಳಿಕೆ 35 ಕೋಟಿ ರೂಪಾಯಿ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಹೇಳುತ್ತೇವೆ ಎಂದಿದ್ದ ಚಿತ್ರತಂಡ, ಅದೊಂದು ವಿಷಯವನ್ನು ಮಾತ್ರ ಬಾಯ್ಬಿಟ್ಟಿಲ್ಲ.
ಚಿತ್ರವು 25 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಚಿತ್ರತಂಡದವು ಪ್ರಸನ್ನ ಚಿತ್ರಮಂದಿರದಲ್ಲಿ ಸೋಮವಾರ ರಾತ್ರಿ ವಿಶೇಷ ಸಮಾರಂಭ ಆಯೋಜಿಸಿತ್ತು. ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿತು. ಗಣೇಶ್, ಶರಣ್ಯ ಶೆಟ್ಟಿ, ಶಶಿಕುಮಾರ್, ಗಿರಿ ಶಿವಣ್ಣ, ಹಿರಿಯ ನಟರಾದ ರಾಮಕೃಷ್ಣ ಮತ್ತು ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ನಿರ್ದೇಶಕ ಶ್ರೀನಿವಾಸರಾಜು ಸೇರಿದಂತೆ ಹಲವರು ಹಾಜರಿದ್ದರು.
ಅಲ್ಲಿಯೇ ಚಿತ್ರದ ಗೆಲುವನ್ನು ನಿರ್ದೇಶಕ ಶ್ರೀನಿವಾಸ ರಾಜು ಅವರಿಗೆ ಸಲ್ಲಿಸಿದ್ದು ಗಣೇಶ್. ‘ನಿರ್ದೇಶಕರಿದ್ದರೆ ನಾವು. ಅವರಿಗೆ ದೊಡ್ಡ ಕನಸಿದ್ದರೆ ಒಂದು ಚಿತ್ರ ಆಗೋಕೆ ಸಾಧ್ಯ. ಕಥೆ ಅನ್ನೋದು ನಿರ್ದೇಶಕರ ಕಲ್ಪನೆ. ಅವರು ಬೀಜ ಹಾಕಿ, ಗಿಡ ಮಾಡಿ, ಅದು ಮರವಾಗಿ ಬೆಳೆದ ಮೇಲೆ ನಮ್ಮ ಹತ್ತಿರ ಬಿಡುತ್ತಾರೆ. ನಾವು ಆ ಮರದ ಕೆಳಗೆ ಇರುತ್ತೇವೆ, ಅಷ್ಟೆ. ಅವರು ಕಷ್ಟಪಟ್ಟು ಕಥೆ ಮಾಡಿರುತ್ತಾರೆ. ನಾವು ಅಭಿನಯಿಸುತ್ತೇವೆ ಅಷ್ಟೇ ಎಂದ ಗಣೇಶ್ ಚಿತ್ರದ ಗೆಲುವನ್ನು ನಿರ್ದೇಶಕರಿಗೆ ಅರ್ಪಿಸಿದರು.
ವಿಶೇಷ ಅಂದ್ರೆ ಗಣೇಶ್ ಚಿತ್ರದ ಗೆಲುವನ್ನು ನಿರ್ದೇಶಕರಿಗೆ ಅರ್ಪಿಸಿದರೆ, ನಿರ್ದೇಶಕ ಶ್ರೀನಿವಾಸ ರಾಜು ಗೆಲುವಿಗೆ ಗಣೇಶ್, ಪ್ರೇಕ್ಷಕರು ಹಾಗೂ ಅರ್ಜುನ್ ಜನ್ಯ ಅವರೇ ಕಾರಣ ಎಂದರು. ಗೆಲುವನ್ನು ತಮ್ಮ ಕಿರೀಟಕ್ಕೆ ತೆಗೆದುಕೊಳ್ಳುವವರ ಮಧ್ಯೆ ಇದು ವಿಭಿನ್ನವಾಗಿ ಕಾಣಿಸಿದ್ದು ಮಾತ್ರ ಸತ್ಯ.
ಟ್ರೇಲರ್ ಕೂಡಾ ರಿಲೀಸ್ ಮಾಡದೆ ಚಿತ್ರದ ಹಾಡುಗಳ ಮೂಲಕವೇ ಪ್ರಮೋಟ್ ಮಾಡಿ, ಚಿತ್ರವನ್ನು ಗೆಲ್ಲಿಸಿಕೊಂಡಿದ್ದು ಕೃಷ್ಣಂ ಪ್ರಣಯ ಸಖಿ. ಹೀಗಾಗಿ ಶ್ರೀನಿವಾಸ ರಾಜು ಪ್ರಕಾರ ಚಿತ್ರದ ಇನ್ನೊಬ್ಬ ಹೀರೋ ಅರ್ಜುನ್ ಜನ್ಯ ಎನ್ನಲು ಅಡ್ಡಿ ಇಲ್ಲ. ಏಕೆಂದರೆ ವೈರಲ್ ಆದ ದ್ವಾಪರ ಹಾಗೂ ಚಿನ್ನಮ್ಮ ಹಾಡುಗಳು ಚಿತ್ರವನ್ನು ಎಲ್ಲಿಗೋ ಕೊಂಡೊಯ್ದವು.
ಇದೇ ವೇಳೆ ತಾವು ಹಾಕಿಕೊಂಡಿದ್ದ ಜಾಕೆಟ್ ಹಿಂದಿನ ಕಥೆಯನ್ನೂ ಹೇಳಿದ್ದಾರೆ ಗಣೇಶ್. ದುಬೈನಲ್ಲಿ ಚಿತ್ರ ಬಿಡುಗಡೆಯಾದಾಗ ಗಣೇಶ್ ಕೂಡಾ ಟೀಂ ಜೊತೆ ಹೋಗಿದ್ದರಲ್ಲ. ಆಗ ರಂಗಾಯಣ ರಘು ಮತ್ತು ಶ್ರೀನಿವಾಸರಾಜು ಅವರ ಜೊತೆ ಶಾಪಿಂಗ್‍ಗೆ ಹೋಗಿದ್ದರಂತೆ. ಅಲ್ಲಿ ʻಜಿಎಫ್ʼ ಎಂದು ಬರೆದಿದ್ದ ಜಾಕೆಟ್ ಕಾಣಿಸಿದೆ. ಅದನ್ನು ನೋಡಿ ಥ್ರಿಲ್ ಆದ ರಂಗಾಯಣ ರಘು, ಇದನ್ನು ತೆಗೆದುಕೊಳ್ಳಿ. ಇದರ ಮೇಲೆ ಜಿಎಫ್ ಎಂದಿದೆ. ಜಿಎಫ್ ಎಂದರೆ ಗಣೇಶ್ ಫ್ಯಾನ್ಸ್/ಗೋಲ್ಡನ್ ಫ್ಯಾನ್ಸ್ ಅಂತಾ ಅರ್ಥ. ಚಿತ್ರದ ಯಶಸ್ಸಿನ ಕಾರ್ಯಕ್ರಮದ ದಿನ ಇದೇ ಜಾಕೆಟ್ ಹಾಕ್ಕೊಂಡ್ ಬರ್ಬೇಕು ಎಂದರಂತೆ. ಅದನ್ನು ಹೇಳಿದ ಗಣೇಶ್, ಜಾಕೆಟ್ ಕಥೆ ಬಿಚ್ಚಿಟ್ಟರು.
ಗಣೇಶ್ ಪ್ರಕಾರ ಚಿತ್ರದ ಕಲೆಕ್ಷನ್ ಎಷ್ಟು ಎಂದರೆ ನಿರ್ದೇಶಕರು ಒಂದು ಮೊತ್ತ ಹೇಳಿದ್ದರು. ಈಗ 25 ದಿನ ಆಗಿದೆ. ಅವರು ಹೇಳಿದ ಆ ಕಲೆಕ್ಷನ್ 50 ದಿನಕ್ಕೆ ರೀಚ್ ಆಗುತ್ತೆ ಎಂದಿದ್ದಾರೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಚಿತ್ರ ಈಗಲೂ ತುಂಬಿದ ಗೃಹಗಳಲ್ಲಿ ಪ್ರದರ್ಶನವಾಗುತ್ತಿದೆ.



