ನಟ ಕಿಚ್ಚ ಸುದೀಪ್ ವಿರುದ್ಧ ಇತ್ತೀಚೆಗೆ ಕೇಳಿ ಬಂದ ಆರೋಪಗಳಿಗೆ ಕೋರ್ಟ್ ಮೂಲಕವೇ ಉತ್ತರ ಕೊಡುವ ಪ್ರಯತ್ನ ಮಾಡಿದ್ದರು. ಮೊದಲು ಬಹಿರಂಗವಾಗಿ ಹೇಳಿಕೆ ಕೊಟ್ಟವರು ನಿರ್ಮಾಪಕರು. ಅದಕ್ಕೆ ಕೋರ್ಟ್ ಮೂಲಕವೇ ಉತ್ತರ ಹೇಳೋಕೆ ಹೊರಟವರು ಸುದೀಪ್. ಈ ಮಧ್ಯೆ ರವಿಚಂದ್ರನ್ ಅವರಿಂದ ಸಂಧಾನ ನಡೆಯುವ ಕೆಲಸ ನಡೆಯಿತಾದರೂ.. ಸಂಧಾನಕ್ಕೆ ಸುದೀಪ್ ಒಪ್ಪಲಿಲ್ಲ. ರವಿಚಂದ್ರನ್ ಅವರನ್ನು ಅಣ್ಣನ ಸ್ಥಾನದಲ್ಲಿಟ್ಟು ಗೌರವಿಸುವ ಸುದೀಪ್, ನಿರ್ಮಾಪಕರ ಜೊತೆಗಿನ ಜಗಳದ ವಿಷಯದಲ್ಲಿ ಹಠಕ್ಕೆ ಬಿದ್ದರು. ಈಗ ಕೋರ್ಟ್ ಮೂಲಕ ಮತ್ತೊಂದು ಉತ್ತರ ಬಂದಿದೆ.
ನಟ ಕಿಚ್ಚ ಸುದೀಪ್ ವಿರುದ್ಧ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್ ಎಂ ಸುರೇಶ್ ಹಾಗೂ ನಿರ್ಮಾಪಕ ಎನ್. ಎಂ. ಕುಮಾರ್ ವಂಚನೆ ಆರೋಪ ಮಾಡಿದ್ದರು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಸುದೀಪ್, ಸುರೇಶ್ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
9 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದುಕೊಂಡು ಸಿನಿಮಾಗೆ ಡೇಟ್ಸ್ ಕೊಡದೇ ವಂಚನೆ ಮಾಡಿದ್ದಾರೆಂದು ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಎಂ ಎನ್ ಸುರೇಶ್ ಆರೋಪ ಮಾಡಿದ್ದರು. ಈ ಪ್ರಕರಣ ಸಂಬಂಧ ಸುದೀಪ್ ಕೋರ್ಟ್ ಮೆಟ್ಟಿಲೇರಿ ಮಾನನಷ್ಟ ಮೊಕದ್ದೊಮೆ ದಾಖಲಿಸಿದ್ದರು. ಎಮ್ ಎನ್ ಕುಮಾರ್ ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆ ನೀಡಬೇಕು, ಇಲ್ಲವೇ ಸುಳ್ಳು ಆರೋಪ ಮಾಡಿದ್ದಕ್ಕೆ ಬಹಿರಂಗ ಕ್ಷಮೆ ಕೇಳಬೇಕು ಎಂದು ಸುದೀಪ್ 10 ದಿನ ಗಡುವು ನೀಡಿದ್ದರು. ಆದರೆ ಅದಕ್ಕೆ ಯಾವುದೇ ಉತ್ತರ ನೀಡದ ಹಿನ್ನೆಲೆ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರಿದ್ದರು.
ದೂರಿನ ವಿಚಾರಣೆ ನಡೆಸಿದ್ದ ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್, ಮೇಲ್ನೋಟಕ್ಕೆ ದೂರಿನಲ್ಲಿಸತ್ಯಾಂಶ ಇದೆ ಎಂದು ಅಭಿಪ್ರಾಯ ಪಟ್ಟು ಎನ್. ಎಂ. ಸುರೇಶ್ ಮತ್ತು ಎಂ ಎನ್ ಕುಮಾರ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ನಂತರ ಆರೋಪಿಗಳಿಬ್ಬರು ವಿಚಾರಣಾ ಕೋರ್ಟ್‌ನಲ್ಲಿಹಾಜರಾಗಿ ಜಾಮೀನು ಪಡೆದುಕೊಂಡಿದ್ದರರು.
ಅದಾದ ನಂತರ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸುವಂತೆ ಕೋರಿ ಸುರೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ವಜಾ ಮಾಡಿದೆ.
ಸಮನ್ಸ್ ಜಾರಿ ಮಾಡುವ ಕ್ರಮದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಹಾಗೂ ದೂರು ಮತ್ತು ಅವರು ನೀಡಿರುವ ಸ್ವಯಂ ಹೇಳಿಕೆಯಲ್ಲಿ ಅಂಶಗಳನ್ನು ಗಮನಿಸಿದರೆ ಅರ್ಜಿದಾರರ ಹೇಳಿಕೆ ಅವಹೇಳನಕಾರಿಯಾಗಿದೆ ಮತ್ತು ಅದರಿಂದ ಸಮಾಜದಲ್ಲಿಅವರ ವರ್ಚಸ್ಸಿಗೆ ಧಕ್ಕೆ ಆಗಲಿದೆ. ಮೇಲ್ನೋಟಕ್ಕೆ ದೂರುದಾರರ ಅನಿಸಿಕೆ ಸರಿಯಾಗಿದೆ. ಹಾಗಾಗಿ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿರುವುದರಲ್ಲಿ ಯಾವುದೇ ಲೋಪವಿಲ್ಲ, ಸರಿಯಾಗಿಯೇ ಇದೆ ಎಂದು ಹೇಳಿದೆ.



