ಎಲೆಕ್ಷನ್ ಹತ್ತಿರವಾಗುತ್ತಿದೆ. ಇನ್ನೇನು ಕೆಲವೇ ತಿಂಗಳು. ಚುನಾವಣೆಯೂ ಘೋಷಣೆಯಾಗಲಿದೆ. ಇವುಗಳ ಮಧ್ಯೆಯೇ ಆಟ..ಜೂಟಾಟಗಳೂ ಶುರುವಾಗಿವೆ. ತಂತ್ರ ಪ್ರತಿತಂತ್ರಗಳೂ ಜೋರಾಗಿವೆ. ಇವುಗಳಲ್ಲಿ ಎರಡು ವಿವಾದಗಳನ್ನು ಬಿಜೆಪಿ ಸ್ವತಃ ಮೈಮೇಲೆ ಎಳೆದುಕೊಂಡಿತ್ತು. ಆ ಎರಡನ್ನೂ ಒಂದು ಹಂತಕ್ಕೆ ತರುವ ಮೂಲಕ ಕಾಂಗ್ರೆಸ್‍ನ ಅಸ್ತ್ರಕ್ಕೆ ಪ್ರತ್ಯಸ್ತ್ರ ಪ್ರಯೋಗ ಮಾಡಿದೆ.
ಮೊದಲನೆಯದ್ದು ಮೀಸಲಾತಿ ಅಸ್ತ್ರ ಪ್ರಯೋಗ. ಇದ್ದಕ್ಕಿದ್ದಂತೆ ಮೀಸಲಾತಿ ಸ್ವರೂಪವನ್ನೇ ಏರುಪೇರು ಮಾಡಿಬಿಟ್ಟಿದೆ. ಪಂಚಮಸಾಲಿ ಸಮುದಾಯದವರು ತಮ್ಮ ಜಾತಿಯನ್ನು 2ಎಗೆ ಸೇರಿಸಬೇಕು ಎಂದು ಬೀದಿಗಿಳಿದಿದ್ದರು. ಒಕ್ಕಲಿಗರು ತಮ್ಮ ಮೀಸಲಾತಿಯನ್ನು ಶೇ.4ರಿಂದ ಶೇ.12ಕ್ಕೆ ಹೆಚ್ಚಿಸುವಂತೆ ಹೋರಾಟಕ್ಕೆ ಇಳಿದಿದ್ದರು. ಯಾವುದಕ್ಕೆ ಕೈ ಇಟ್ಟರೂ ಹಾವುಗಳೇ ಇರುವ ಹುತ್ತಕ್ಕೆ ಕೈಇಟ್ಟಂತೆಯೇ ಎಂದು ಬಿಜೆಪಿಗೆ ಗೊತ್ತಿತ್ತು. ಇದನ್ನು ತನ್ನ ಅಸ್ತ್ರ ಮಾಡಿಕೊಳ್ಳುವ ಸೂಚನೆಯನ್ನು ಕಾಂಗ್ರೆಸ್ ಕೂಡಾ ನೀಡಿತ್ತು.
ಈಗ ಒಕ್ಕಲಿಗರು ಹಾಗೂ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸುವ 2ಎ ಮತ್ತು 3ಬಿ ಪ್ರವರ್ಗಗಳನ್ನೇ ರದ್ದು ಮಾಡಿ, 2ಸಿ ಹಾಗೂ 2ಡಿ ವರ್ಗ ಸೃಷ್ಟಿಸಲು ಹೊರಟಿದ್ದಾರೆ ಬಸವರಾಜ ಬೊಮ್ಮಾಯಿ.

3ಎನಲ್ಲಿದ್ದ ಒಕ್ಕಲಿಗರು ಹಾಗೂ 12 ಜಾತಿಗಳು 2ಸಿಗೆ, ವೀರಶೈವ ಲಿಂಗಾಯತರು 2ಡಿಗೆ ವರ್ಗವಾಗಲಿವೆ. ಆದರೆ ಯಾವ ಯಾವ ಜಾತಿ, ಉಪಜಾತಿ, ಅವುಗಳಿಗೆ ಎಷ್ಟು ಶೇಕಡಾ ಮೀಸಲಾತಿ? ಇದರಿಂದ ಬೇರೆ ವರ್ಗಗಳಿಗೆ ತಾರತಮ್ಯವಾಗುತ್ತದೆಯೇ? ಹಾಗುವುದಾದರೆ ಯಾರಿಗೆ ಲಾಭ.. ಇಂತಹ ಪ್ರಶ್ನೆಗಳು ನೂರು ಹಾಕಿದರೆ ನೂರು. ಸಾವಿರ ಹಾಕಿದರೆ ಸಾವಿರ.. ಎನ್ನುವಂತೆ ಮುಂದುವರೆಯುತ್ತವೆ. ಸದ್ಯಕ್ಕೆ ಅವುಗಳಿಗೆ ಉತ್ತರವಿಲ್ಲ.
ಎಲ್ಲಿಂದ ಕೊಡ್ತೀರಿ? ಮೀಸಲಾತಿ ಶೇ.50 ಮೀರುವಂತಿಲ್ಲ. ಇದೊಂದು ಗಿಮಿಕ್ ಅಷ್ಟೆ, ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಕೊಡುವುದಕ್ಕೆ ವಿರೋಧವಿಲ್ಲ. ಆದರೆ ಎಲ್ಲಿಂದ ತರ್ತೀರಿ ಹೇಳಿ, ಅವರು ಕೇಳಿದ್ದದ್ದು ಏನು? ನೀವು ಕೊಡ್ತಾ ಇರೋ ಭರವಸೆ ಏನು.. ಗಿಮಿಕ್ ಮಾಡಬೇಡಿ ಎಂದು ತಿರುಗೇಟು ಕೊಟ್ಟಿರುವುದು ಸಿದ್ದರಾಮಯ್ಯ. ಇದೊಂದು ಎಲೆಕ್ಷನ್ ಗಿಮಿಕ್ ಅಲ್ಲದೆ ಬೇರೇನೂ ಅಲ್ಲ. ರಂಗ ಎಂದು ಇದ್ದಿದ್ದನ್ನ ಮಂಗ ಎಂದು ಹೇಳೋಕೆ ಹೊರಟಿದ್ದಾರೆ ಅಷ್ಟೆ ಎಂದು ಲೇವಡಿ ಮಾಡಿದ್ದಾರೆ.
ಈ ವಿಚಾರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಬಹುದು. ಏಕೆಂದರೆ ಬಿಜೆಪಿಯಲ್ಲಿರುವ ಬಹುತೇಕರಿಗೆ ಈ ಹೊಸ ಮೀಸಲಾತಿ ಫಾರ್ಮುಲಾ ಅರ್ಥವಾಗಿಲ್ಲ.

ಇನ್ನೊಂದು ಅಸ್ತ್ರ ಕಳಸಾ ಬಂಡೂರಿ ಯೋಜನೆಯ ಡಿಪಿಆರ್‍ನದ್ದು. ಅದು ಇವತ್ತಿನ.. ಒಂದೆರಡು ವರ್ಷಗಳ ಬೇಡಿಕೆಯಲ್ಲ. ದಶಕಗಳ ಬೇಡಿಕೆಯದ್ದು. ಬೆಳಗಾವಿ, ಗದಗ, ಧಾರವಾಡ ಜಿಲ್ಲೆಯ 11 ತಾಲೂಕುಗಳು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಸುತ್ತಮುತ್ತಲ 36 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಅದು. ಯುಪಿಎ ಸರ್ಕಾರ ಇದ್ದ ಕಾಲದಲ್ಲೂ ಆಗದೇ ಇದ್ದ ಕೆಲಸ ಅದು. ಕಾಂಗ್ರೆಸ್ ಈ ವಿಚಾರದಲ್ಲಿ ಹೇಳಿಕೆ ಕೊಟ್ಟಿತ್ತೇ ಹೊರತು, ಮತ್ತೇನೂ ಆಗಿರಲಿಲ್ಲ ಎನ್ನುವುದೂ ಸತ್ಯ. ಆದರೆ ವಿವಾದಗಳೇನೇ ಇರಲಿ, ಪಾಸಿಟಿವ್ ಹೆಜ್ಜೆಯಿಟ್ಟ ಬಿಜೆಪಿ ಈಗ ಡಿಪಿಆರ್‍ಗೆ ಒಪ್ಪಿಗೆ ಪಡೆದಿದೆ.
ಜನವರಿ 2ರಂದು ಹುಬ್ಬಳ್ಳಿಯಲ್ಲಿಯೇ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧವಾಗಿದ್ದ ಕಾಂಗ್ರೆಸ್‍ಗೆ ಇದು ಬಲವಾದ ಪ್ರತ್ಯಸ್ತ್ರವೇ ಸರಿ. ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಮೊದಲಾದವರು ಸಂಭ್ರಮಿಸುತ್ತಿದ್ದಾರೆ. ಇದು ನಮ್ಮ ಹೋರಾಟಕ್ಕೆ ಹೆದರಿ ಬಿಜೆಪಿಯವರು ಮಾಡಿರುವ ಕೆಲಸ ಎನ್ನುತ್ತಿದ್ದಾರೆ ಸಿದ್ದರಾಮಯ್ಯ, ಡಿಕೆ ಮೊದಲಾದವರು. ಆದರೆ ಎರಡೂ ಪಕ್ಷಗಳ ಹೋರಾಟದ ಹಾದಿ, ನಿಲುವುಗಳನ್ನು ನೋಡಿರುವ ಜನ, ಯಾರಿಗೆ ಕ್ರೆಡಿಟ್ ಕೊಡಬೇಕೋ ಅವರಿಗೆ ನೀಡುತ್ತಾರೆ.
ಆದರೆ ಒಂದು ಮಾತಂತೂ ಸತ್ಯ. ಎರಡು ಮಾಸ್ಟರ್ ಸ್ಟ್ರೋಕ್ ಕೊಟ್ಟಿರೋ ಬಿಜೆಪಿಗೆ, ಮೀಸಲಾತಿ ಸ್ಟ್ರೋಕ್ ಸದಾ ಚುಚ್ಚುವ ಮುಳ್ಳು. ವಾಸ್ತವ ಪರಿಸ್ಥಿಯ ಅರಿವಿಲ್ಲದೆ, ಸಮಸ್ಯೆಗಳು ಯಾವ ರೀತಿ ಕವಲೊಡೆಯಲಿವೆ ಎಂಬ ಅರಿವಿಲ್ಲದೆ ಮಾಡಿಕೊಂಡು ತಾವೇ ಸೃಷ್ಟಿಸಿಕೊಂಡಿರುವ ಆಪತ್ತು. ಬಿಜೆಪಿ ಏನೇ ಸಮರ್ಥನೆ ಕೊಟ್ಟರೂ ಇದು ಶುರುವಾಗಿದ್ದು ಎಲ್ಲಿಂದ. ಯಾರಿಂದ, ಯಾಕಾಗಿ ಎನ್ನುವುದು ಜನರಿಗೆ ಗೊತ್ತಿದೆ. ಅದಕ್ಕೆ ಬಿಜೆಪಿ ತಲೆ ಕೊಡಲೇಬೇಕು.
ಆದರೆ ಕಳಸಾ ಬಂಡೂರಿ ಹಾಗಲ್ಲ. ಏನೇ ಗಿಮಿಕ್ ಎಂದುಕೊಂಡರೂ ಬಿಜೆಪಿ ಈ ವಿಚಾರದಲ್ಲಿ ಕಾಂಗ್ರೆಸ್ಸಿಗಿಂತ ಒಂದು ಹೆಜ್ಜೆ ಮುಂದೆ. ಏಕೆಂದರೆ ಈ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರ ನಿರಂತರ ಶ್ರಮವನ್ನು ಮೆಚ್ಚಲೇಬೇಕು. 10 ವರ್ಷ ಅಧಿಕಾರದಲ್ಲಿಯೇ ಇದ್ದರೂ ಕಳಸಾ ಬಂಡೂರಿ ವಿಚಾರದಲ್ಲಿ ಹೇಳಿಕೆ ಕೊಡುವುದು ಬಿಟ್ಟು ಬೇರೇನೂ ಮಾಡದ ಕಾಂಗ್ರೆಸ್, ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸಿದರೆ ಅದು ಜನರಿಗೆ ಅರ್ಥವಾಗದೆ ಇರುವುದಿಲ್ಲ.



