ಕಲ್ಲು ಬೆಳೆಯುತ್ತದೆಯೇ.. ನೋ.. ಅಂತಾರೆ ಸೈಂಟಿಸ್ಟುಗಳು. ಕಲ್ಲಿಗೆ ಜೀವ ಇದೆಯೇ ಎನ್ನುವುದಕ್ಕೂ ಅಷ್ಟೆ, ಅದೊಂದು ಕಲ್ಲು ಅಂತಾರೆ. ಆದರೆ.. ಇಲ್ಲೊಂದು ನಂದಿ ವಿಗ್ರಹ ಬೆಳೆಯುತ್ತಲೇ ಇದೆ. ಬೆಳೆಯುತ್ತಲೇ ಇದೆ. ದೊಡ್ಡದಾಗುತ್ತಲೇ ಇದೆ. ಮುಂದೊಂದು ದಿನ ಈ ವಿಗ್ರಹಕ್ಕೆ ಜೀವ ಬರುತ್ತೆ. ಆಗ ಈ ಕಲಿಯುಗ ಅಂತ್ಯವಾಗುತ್ತೆ ಅಂತಿದೆ ಕಾಲಜ್ಞಾನ.
ಕಲಿಯುಗದ ಅಂತ್ಯವನ್ನು ಸೂಚಿಸುವ ಒಂದು ನಂದಿ ವಿಗ್ರಹ ಇರುವುದು ಆಂಧ್ರ ಪ್ರದೇಶದ ಯಾಗಂಟಿಯಲ್ಲಿ. ತೊಂಬತ್ತು ವರ್ಷಗಳ ಹಿಂದೆ ಈ ನಂದಿ ಇರುವ ಜಾಗದಲ್ಲಿ ಸುತ್ತಲೂ ನಾಲ್ಕು ಕಂಬಗಳ ಮಧ್ಯೆ ಜನರು ಪ್ರದಕ್ಷಿಣೆ ಹಾಕುವಷ್ಟು ಜಾಗವಿತ್ತಂತೆ. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಈಗ ಆ ನಂದಿ ವಿಗ್ರಹ ಸುತ್ತಲಿನ ನಾಲ್ಕೂ ಕಂಬಗಳಿಗೆ ಅಂಟಿಕೊಂಡಿದೆ. ಹೀಗಾಗಿ ಜನರು ಈಗ ನಂದಿ ವಿಗ್ರಹವನ್ನು ಪ್ರದಕ್ಷಿಣೆ ಹಾಕಲು ಸಾಧ್ಯವಿಲ್ಲ.
ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ಮಾಡಿರುವ ಸಂಶೋಧನೆಯಲ್ಲಿಯೂ ವಿಗ್ರಹ ಬೆಳೆಯುತ್ತಿರುವುದು ದೃಢೀಕರಣಗೊಂಡಿದೆ. ಈ ಕಲ್ಲು 20 ವರ್ಷಕ್ಕೆ ಒಂದು ಇಂಚಿನಷ್ಟು ಬೆಳೆಯುತ್ತಿದೆ ಎಂದು ದಾಖಲೆ ಸಮೇತ ಪ್ರೂವ್ ಆಗಿದೆ. ಒಮ್ಮೆ ಜನರು ಹೇಳುತ್ತಿರುವಂತೆ, ಕಾಲಜ್ಞಾನದಲ್ಲಿ ಉಲ್ಲೇಖವಾಗಿರುವಂತೆ ಈ ನಂದಿ ವಿಗ್ರಹಕ್ಕೆ ಜೀವ ಬಂದರೆ ಕಲಿಯುಗ ಅಂತ್ಯವಾಗುತ್ತದೆ. ಪೋತನೂರು ವೀರಬ್ರಹ್ಮೇಂದ್ರು ತಮ್ಮ ಕಾಲಜ್ಞಾನದಲ್ಲಿ ಹೇಳಿದ್ದಾರೆ ಎನ್ನುವುದು ಜನರ ನಂಬಿಕೆ.
ಕೆಲವರು ಈ ಬಗ್ಗೆ ಆತಂಕಗೊಂಡಿದ್ದರೆ ಹಲವರು ಆ ನಂದಿಗೆ ಆದಷ್ಟು ಬೇಗ ಜೀವ ಬರಲಿ ಎಂದು ಕಾಯುತ್ತಿದ್ದಾರಂತೆ. ಕಾರಣ, ಕಲಿಯುಗವನ್ನು ನೋಡಿ ಅವರಿಗೆ ಸಾಕು ಸಾಕಾಗಿದೆಯಂತೆ. ಎಲ್ಲಿ ನೋಡಿದರೂ ವ್ಯಭಿಚಾರ, ಅವ್ಯವಹಾರ, ಅತ್ಯಾಚಾರ, ಕೊಲೆ ಹಾಗೂ ಸುಲಿಗೆಗಳೇ ತಾಂಡವವಾಡುತ್ತಿವೆ. ಇದು ಕಲಿಯುಗ ಅಂತ್ಯವಾಗುವವರೆಗೂ ಮುಂದುವರಿಯುತ್ತದೆ. ಹಾಗೆ ಹೇಳುವುದಕ್ಕಿಂತ, ಕಲಿಯುಗ ಅಂತ್ಯವಾಗುವುದೇ ಈ ಅನ್ಯಾಯ-ಅತ್ಯಾಚಾರಗಳ ಮೂಲಕ ಎನ್ನಲಾಗುತ್ತಿದೆ.
ಹೀಗಾಗಿ ಯಾಗಂಟಿ ಸ್ಥಳೀಯ ಜನರು ಈ ದೇವಸ್ಥಾನಕ್ಕೆ ಬಂದಾಗ ಈ ನಂದಿ ವಿಗ್ರಹವನ್ನು ತಪ್ಪದೇ ಸ್ವತಃ ತಮ್ಮ ಕಣ್ಣಿಂದ ನೋಡುತ್ತಾರೆ ಎನ್ನಲಾಗಿದೆ. ಕಾರಣ, ಮೊದಲು ತಾವು ನೋಡಬೇಕು ಎನ್ನುವುದು ಒಂದು ಸಂಗತಿಯಾದರೆ, ಮೊದಲು ತಿಳಿದುಕೊಂಡರೆ ಕೆಲವು ಸಂಗತಿಗಳನ್ನು ಬೇರೆಯವರಿಗಿಂತ ಮೊದಲು ಮಾಡಬಹುದು ಎಂಬುದು ಇನ್ನೊಂದು ಸಂಗತಿಯಾಗಿರಬಹುದು. ಇದು ಊಹೆ ಅಷ್ಟೇ, ಕಾರಣ, ಬೇರೆ ಬೇರೆ ಜನರ ಮನಸ್ಸಿನಲ್ಲಿ ಏನಿದೆ ಎಂದು ಯಾರಾದರೂ ತಿಳಿದುಕೊಳ್ಳುವುದು ಕಷ್ಟವೇ ಸರಿ!
ಒಟ್ಟಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಚಿಂತೆ. ಕೆಲವರಿಗೆ ನಾಳೆ ಎಷ್ಟು ದುಡಿಯಬಹುದು, ಏನೆಲ್ಲ ಮಾಡಬಹುದು ಎಂಬ ಕನಸಿದ್ದರೆ, ಇನ್ನೂ ಕೆಲವರಿಗೆ ನಾಳೆಯ ಹೊತ್ತಿಗೆ ಸತ್ತರೆ ಸಾಕಪ್ಪ, ಈ ಎಲ್ಲ ಜಂಜಾಟಗಳಿಂದ ಮುಕ್ತಿ ಎನ್ನುತ್ತಾರೆ. ಆದರೆ ಈ ನಂದಿ ವಿಗ್ರಹವನ್ನು ನಂಬುವ ಜನ ತಾವಷ್ಟೇ ಅಲ್ಲ, ತಮ್ಮೊಂದಿಗೆ ಇಡೀ ಜಗತ್ತು ಸರ್ವನಾಶವಾಗಲಿ ಎಂದು ಬಯಸುತ್ತಾರೆ.
ಯಾಗಂಟಿ ಕ್ಷೇತ್ರದ ಮಹಿಮೆ : ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಂದ್ಯಾಲದ ಬಳಿ ಇದೆ ಯಾಗಂಟಿ ಕ್ಷೇತ್ರ . ಈ ದೇವಸ್ಥಾನವನ್ನು ಪ್ರತಿಷ್ಠಾಪಿಸಿದ್ದು ಅಗಸ್ತ್ಯ ಮುನಿ ಎಂಬುದು ಪ್ರತೀತಿ. ಸುಮಾರು 5 ನೇ ಶತಮಾನದಿಂದಲೂ, ಚೋಳರು, ಪಲ್ಲವರು ಮತ್ತು ಚಾಣಕ್ಯರು ಈ ದೇವಾಲಯದಲ್ಲಿ ನಿಯಮಿತವಾಗಿ ಪೂಜೆ ಸಲ್ಲಿಸುತ್ತಿದ್ದರು. 15 ನೇ ಶತಮಾನದಲ್ಲಿ, ವಿಜಯ ನಗರ ಸಾಮ್ರಾಜ್ಯದ ಸಂಗಮ ಸಾಮ್ರಾಜ್ಯದ ವಂಶಸ್ಥ ಹರಿಹರ ಬುಕ್ಕರಾಯನು ಪಾಳುಬಿದ್ದ ದೇವಾಲಯವನ್ನು ಪುನರ್ನಿರ್ಮಿಸಿದನು.
ಈ ಕ್ಷೇತ್ರದಲ್ಲಿ ಹುಡುಕಿದರೂ ಒಂದು ಕಾಗೆ ಸಿಗುವುದಿಲ್ಲ. ಇಲ್ಲಿ ಒಂದು ಕೊಳವಿದ್ದು, ಆ ಕೊಳದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.



