ಮೊನ್ನೆ ಮೊನ್ನೆ 60 ಸಾವಿರ ಲೀಡ್ ಕೊಡದಿದ್ರೆ ಕಷ್ಟ. ನಾನು ಬೇಕೋ ಬೇಡ್ವೋ ಎಂದು ಪ್ರಶ್ನೆ ಮಾಡಿದ್ದ ಸಿಎಂ ಸಿದ್ದರಾಮಯ್ಯ.. ಇದೀಗ ಮುಂದಿನ ವಿಧಾನಸಭಾ ಚುನಾವಣೆಗೆ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಜನರು ಪ್ರೀತಿಯಿಂದ ಮತ್ತೆ ಮತ್ತೆ ಸ್ಪರ್ಧೆ ಮಾಡಿ ಎಂದು ಕೇಳುತ್ತಿದ್ದಾರೆ. ಆದರೆ, ನಾನು ನಿವೃತ್ತಿಗೆ ತೀರ್ಮಾನ ಮಾಡಿದ್ದೇನೆ. ಮುಂದಿನ ನಾಲ್ಕು ವರ್ಷಕ್ಕೆ ನನಗೆ 83 ವರ್ಷ ಆಗಿ ಬಿಡುತ್ತದೆ. 83 ವರ್ಷ ಆದ ಮೇಲೆ ಇಷ್ಟೊಂದು ಉತ್ಸಾಹದಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂಬುದು ಗೊತ್ತಿದೆ. ನನ್ನ ದೇಹದ ಸ್ಥಿತಿ ನನಗೆ ಮಾತ್ರ ಗೊತ್ತಿರುತ್ತೆ. ಹೀಗಾಗಿ, ಚುನಾವಣಾ ರಾಜಕಾರಣ ಸಾಕು ಎಂದುಕೊಂಡಿದ್ದೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಅಂದಹಾಗೆ ಇದೇ ಸಿದ್ದರಾಮಯ್ಯ ಕಳೆದ 2018ರ ಎಲೆಕ್ಷನ್ʻನಲ್ಲೂ ಇದೇ ರೀತಿ ಘೋಷಿಸಿದ್ದರು. 2018ರ ಚುನಾವಣೆಯೇ ನನ್ನ ಅಂತಿಮ ಚುನಾವಣೆ ಎಂದು ವಿಧಾನಸಭೆಯಲ್ಲಿ ಘೋಷಿಸಿದ್ದರು. 2018ರಲ್ಲಿ ಸಿದ್ದರಾಮಯ್ಯ ಬಾದಾಮಿ ಹಾಗೂ ಚಾಮುಂಡೇಶ್ವರಿ ಎರಡೂ ಕಡೆ ಸ್ಪರ್ಧಿಸಿದ್ದರು. ಆದರೆ..ಬಾದಾಮಿಯಲ್ಲಿ ಗೆದ್ದು, ಚಾಮುಂಡೇಶ್ವರಿಯಲ್ಲಿ ಸೋತಿದ್ದರು. ಚಾಮುಂಡೇಶ್ವರಿಯಲ್ಲಿ ಇದೇ ನನ್ನ ಕೊನೆಯ ಎಲೆಕ್ಷನ್ ಎಂಬ ಮಾತು ಕೈ ಹಿಡಿಯಲಿಲ್ಲ. ಈ ಬಾರಿಯೂ ಅದೇ ಅಸ್ತ್ರ ಪ್ರಯೋಗಿಸಿದ್ಧಾರಾ..? ಸಿದ್ದರಾಮಯ್ಯಗೆ ಎಲೆಕ್ಷನ್ ಟೆನ್ಷನ್ ಇದೆಯಾ..?
ಆತಂಕ ಇದ್ದರೆ ತಾನೇ ಟೆನ್ಷನ್?. ನನಗೆ ಯಾವ ಆತಂಕವೂ ಇಲ್ಲ. ಹೀಗಾಗಿ, ನಾನು ಕೂಲ್ ಆಗಿ ಇದ್ದೇನೆ. ಅದು ಕೂಡ ನನ್ನ ಆರೋಗ್ಯದ ಗುಟ್ಟು ಎನ್ನುವ ಸಿದ್ದರಾಮಯ್ಯ, ಎಲೆಕ್ಷನ್ ಟೆನ್ಷನ್ ಇಲ್ಲವೇ ಇಲ್ಲ ಎಂದಿದ್ದಾರೆ. ಆದರೆ.. ಖುದ್ದು ಸಿದ್ದರಾಮಯ್ಯ, ಮಗ ಯತೀಂದ್ರ ಸಿದ್ದರಾಮಯ್ಯ, ಸಚಿವ ಕೆ.ಎನ್.ರಾಜಣ್ಣ, ಶಾಸಕ ಇಕ್ಬಾಲ್ ಅನ್ಸಾರಿ.. ಸೇರಿದಂತೆ ಹಲವು ನಾಯಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲೆಕ್ಷನ್ ರಾಜಕೀಯದಿಂದ ದೂರ ಉಳಿಯಲಿದ್ಧಾರೆ ಎಂಬ ಸುಳಿವು ಕೊಟ್ಟಿದ್ಧಾರೆ. ಹಾಗಾದರೆ.. ಸಿದ್ದರಾಮಯ್ಯ ಅವರಿಗೆ ಇದೇ ಕಡೆ ಎಲೆಕ್ಷನ್ನಾ..? ಸದ್ಯದ ಪ್ರಕಾರ.. ಲೀಡ್ ಕೊಟ್ರೆ ಇರ್ತೀನಿ ಅನ್ನೋ ಮಾತು ಸಿದ್ದರಾಮಯ್ಯ ಅವರ ಪ್ರಕಾರ ಸಹಜವಾದ ಮಾತಷ್ಟೇ.
ಲೋಕಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕೇಳಿದ್ದು ಭಾವನಾತ್ಮಕವಲ್ಲ. ಅದು ನನ್ನ ಸಹಜವಾದ ಮಾತುಗಳು ಅಷ್ಟೇ ಎನ್ನುವ ಸಿದ್ದರಾಮಯ್ಯ ನನ್ನ ಕ್ಷೇತ್ರದ ಮತದಾರರಲ್ಲಿ ಲೀಡ್ ಕೇಳಿದ್ದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆ ಮಾಡ್ತಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ವರುಣಾದಲ್ಲಿ ನಮಗೆ ಬರಿ 9 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದನ್ನು 60 ಸಾವಿರಕ್ಕೆ ಮುಟ್ಟಿಸಿ ಎಂದು ಕೇಳಿದ್ದೇನೆ. ಸ್ವಕ್ಷೇತ್ರದ ಮತದಾರರಲ್ಲಿ ಲೀಡ್ ಕೊಡಿ ಎಂದು ಕೇಳಿದ್ದೇನೆ ಎಂದಿದ್ದಾರೆ ಸಿದ್ದರಾಮಯ್ಯ.
ವರುಣಾ ಕ್ಷೇತ್ರದ ಬಿಳಿಗೆರೆಯಲ್ಲಿ ಸೋಮವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ‘ವರುಣಾ, ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಸಿಎಂ ಆದೆ. ನಾನು ಸಿಎಂ ಸ್ಥಾನದಲ್ಲಿ ಇರಬೇಕೋ, ಬೇಡವೋ?. ನಾನು ಸಿಎಂ ಸ್ಥಾನದಲ್ಲಿರಬೇಕು ಅಂದರೇ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲ್ಲ’ ಎಂದಿದ್ದರು.
ಸಿದ್ದರಾಮಯ್ಯ ಮಾತಿಗೆ ಅಮಿತ್ ಶಾ, ಯಡಿಯೂರಪ್ಪ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ತೆರಳಿ ನನ್ನನ್ನು ಉಳಿಸಿ, ನನಗೆ ಹೆಚ್ಚು ವೋಟ್ ಕೊಡಿ ಎಂದು ಕೇಳಿದ್ದಾರೆ. ಅಂದರೆ, ನನ್ನ ಕಾಲ ಮುಗಿತು. ಬಿಜೆಪಿ ಅವರು ಖುರ್ಚಿಯಲ್ಲಿ ಕೂರುತ್ತಾರೆ ಎಂಬುದು ಅವರ ಅನುಭವಕ್ಕೆ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ವರುಣ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ವರುಣ ಕ್ಷೇತ್ರದ ಜನ ಯತೀಂದ್ರ ಸಿದ್ದರಾಮಯ್ಯ ಅವರನ್ನು 59 ಸಾವಿರ ಲೀಡ್ನಿಂದ ಗೆಲ್ಲಿಸಿದ್ದರು. ಆದರೆ 2019ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ಗೆ ಕೊಟ್ಟಿದ್ದು 9 ಸಾವಿರ ಲೀಡ್ ಮಾತ್ರ. ಲೋಕಸಭಾ ಚುನಾವಣೆಯಲ್ಲಿ ವರುಣದಲ್ಲಿ ಕಾಂಗ್ರೆಸ್ಗೆ ಬಂದಿದ್ದು 79,404 ಮತ ಮತ್ತು ಬಿಜೆಪಿಗೆ 70,402 ಸಾವಿರ ಮತಗಳು ಬಂದಿದ್ದವು. ಆದರೆ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ವರುಣ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಬರುತ್ತವೆ ಎಂಬ ನೀರಿಕ್ಷೆ ಹೊಂದಿದ್ದರು, ಆದರೆ ನಿರೀಕ್ಷೆ ಮಟ್ಟದಲ್ಲಿ ಮತಗಳು ಬರಲಿಲ್ಲ. ಜೊತೆಗೆ ಈ ಲೀಡ್ ಮುಖ್ಯಮಂತ್ರಿಗಳಿಗೂ ಕೂಡ ಆಘಾತ ಉಂಟು ಮಾಡಿತ್ತು.
ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ 49 ಸಾವಿರ ಲೀಡ್ ಕೊಟ್ಟಿರುವ ವರುಣ ಮತದಾರರು ಲೋಕಸಭೆಯಲ್ಲಿ ಕೈ ಕೊಡುತ್ತಾರೆ ಎಂಬ ಟೆನ್ಷನ್ ಮುಖ್ಯಮಂತ್ರಿಗಳಿಗೆ ಕಾಡುತ್ತಿದೆ. ಕಳೆದ ಲೋಕಸಭೆ ಚುನಾವಣೆ ಹಾಗೆ ಈ ಬಾರಿಯೂ ವರುಣ ಜನತೆ ಕಡಿಮೆ ಲೀಡ್ ನೀಡಿದರೆ, ತಮ್ಮ ಸಿಎಂ ಕುರ್ಚಿಗೆ ಕಂಟಕ ಎದುರಾಗಲಿದೆ ಎಂಬ ಆತಂಕದಿಂದ ಸಿದ್ದರಾಮಯ್ಯ ಅವರು 60 ಸಾವಿರ ಲೀಡ್ ನೀಡಿ ಅಂತ ಹೇಳಿದ್ರಾ ಎಂಬ ಪ್ರಶ್ನೆಗಳು ಉದ್ಭವವಾಗಿವೆ.



