ಚಟಗಳು ಮನುಷ್ಯರನ್ನು ಹಾಳು ಮಾಡ್ತವೆ. ಅದರಲ್ಲೂ ಕುಡಿತ. ಮನುಷ್ಯರ ದೈಹಿಕ ಶಕ್ತಿಯನ್ನ ಹಿಂಡಿ ಹಿಪ್ಪೆ ಮಾಡಿಬಿಡ್ತವೆ. ಸ್ಟಾಮಿನಾ ಕಿತ್ತುಕೊಳ್ತವೆ. ಮನಸ್ಸಿನ ಏಕಾಗ್ರತೆ ಹಾಳು ಮಾಡ್ತವೆ. ಅದರಲ್ಲೂ ಕ್ರೀಡಾಪಟುಗಳ ವಿಷಯಕ್ಕೆ ಬಂದರೆ ಇದು ಇನ್ನೂ ಇನ್ನೂ ಜಾಸ್ತಿ ಎಫೆಕ್ಟ್ ಮಾಡುತ್ತೆ. ಕ್ರಿಕೆಟ್ ವಿಷಯಕ್ಕೆ ಬಂದರೂ ಹಾಗೆ. ಕ್ರಿಕೆಟ್ ಈಗ ಸೋಮಾರಿಗಳ ಆಟವಲ್ಲ. ನೋಡುವವರು ಸೋಮಾರಿಗಳಂತೆ ಕೂರಬಹುದು. ಆದರೆ ಆಟಗಾರರು ಸೋಮಾರಿಗಳಂತೆ ಇರೋಕೆ ಸಾಧ್ಯವಿಲ್ಲ. ಫಿಟ್ & ಫೈನ್ ಆಗಿರಬೇಕು. ಆಗಿರಲೇಬೇಕು. ಇಲ್ಲದೇ ಹೋದರೆ ಕ್ರಿಕೆಟ್‍ನ್ನೇ ಮರೆಯಬೇಕು. ದಟ್ಸಾಲ್. ಇಂತಹ ಪ್ರಾಬ್ಲಂ ಮಧ್ಯೆ ಕುಡಿತದ ದಾಸರಾಗಿ ನರಳಿದ ಕ್ರಿಕೆಟ್ ಆಟಗಾರರ ಲಿಸ್ಟ್ ಇಲ್ಲಿದೆ. ಈ ಪಟ್ಟಿಯಲ್ಲಿ ದಶಕಕ್ಕೂ ಹೆಚ್ಚು ಕಾಲ ಕ್ರಿಕೆಟ್ ಆಡಿದವರ ಹೆಸರನ್ನಷ್ಟೇ ಹೇಳಲಾಗಿದೆ. ನೂರಾರು ಆಟಗಾರರು ಈ ಚಟಕ್ಕೆ ಬಲಿಯಾಗಿ ಕ್ರಿಕೆಟ್‍ಗೆ ಬಂದಷ್ಟೇ ವೇಗದಲ್ಲಿ ಮನೆಗೆ ವಾಪಸ್ ಆಗಿದ್ದಾರೆ. ಆಟ ಬಿಟ್ಟಿದ್ದಾರೆ. ಕುಡಿತವನ್ನು ಬಿಟ್ಟು ಶಿಸ್ತು ಅಳವಡಿಸಿಕೊಂಡವರು ಗೆದ್ದಿದ್ದಾರೆ.
- ಜೆಸ್ಸಿ ರೈಡರ್


ನ್ಯೂಜಿಲ್ಯಾಂಡಿನ ಈ ಆಟಗಾರ ಡುಮ್ಮನೆಂದೇ ಖ್ಯಾತರಾಗಿದ್ದವರು. 2009/10ರಲ್ಲಿ ಅಖಾಡಕ್ಕಿಳಿದ ರೈಡರ್ ಆರಂಭವಂತೂ ಅದ್ಭುತವಾಗಿತ್ತು. ಅದ್ಭುತ ಓಪನಿಂಗ್ ಪಡೆದುಕೊಂಡ ರೈಡರ್ ಅವರ ಪತನ ಆರಂಭವಾಗಿದ್ದು ಇಂಡಿಯಾದಲ್ಲೇ. ಕುಡಿತದ ಚಟಕ್ಕೆ ಬಿದ್ದ ರೈಡರ್ ಭಾರತ ಪ್ರವಾಸಕ್ಕೆ ಬಂದಾಗ ಆಟದಲ್ಲೂ ಕಳೆಗುಂದಿದರು. ವ್ಯಕ್ತಿತ್ವವೂ ಮೂರಾಬಟ್ಟೆಯಾಗಿ ಹೋಯ್ತು. ಎಣ್ಣೆಯೊಳಗೆ ಸೋಡಾ ಬೆರೆತಂದೆ ಬೆರೆತಿದ್ದವರು ರೈಡರ್.
2013ರಲ್ಲಿ ಕ್ರಿಸ್ಟ್ ಚರ್ಚ್‍ನಲ್ಲಿ ಬಾರ್‍ನಲ್ಲಿ ಗಲಾಟೆ ಮಾಡಿಕೊಂಡರು. ಬಾರ್ ವೇಯ್ಟರ್ ಗಳ ಜೊತೆ ನಡೆದ ಗಲಾಟೆಯಲ್ಲಿ ಈತನನ್ನು ಯಾವ ಪರಿ ಹೊಡೆದರೆಂದರೆ ತಲೆಗೆ ಪೆಟ್ಟು ಬಿದ್ದು, ತಲೆಯ ಮೂಳೆ ಫ್ರಾಕ್ಚರ್ ಆಗಿ ಮೆಡಿಕಲ್ ಕೋಮಾಕ್ಕೆ ಹೋಗಿದ್ದರು ರೈಡರ್.
ಕೋಮಾದಿಂದ ಹೊರಬಂದ ಮೇಲೆ ರೈಡರ್ ಮತ್ತೆ ಆಟಕ್ಕೆ ಚಿಗುತುಕೊಂಡರು. ಸೆಂಚುರಿ ಹೊಡೆದರು. ಈಗಲೂ ಕುಡಿಯುತ್ತಾರಂತೆ.. ಆದರೆ ಮೊದಲಿನಂತೆ ಅಲ್ಲ.
- ಬೆನ್ ಸ್ಟೋಕ್ಸ್


ಈ ಇಂಗ್ಲಿಷ್ ಆಲ್ರೌಂಡರ್`ಗೆ ಕ್ರಿಕೆಟ್ ಜಗತ್ತಿನಲ್ಲೀಗ ದೊಡ್ಡ ಸ್ಥಾನಮಾನವಿದೆ. ಆದರೆ ಒಂದು ಕಾಲದಲ್ಲಿ ಈತ ಕುಡಿಯೋದೇ ನನ್ ಬಿಸಿನೆಸ್ಸು ಎಂಬಂತೆ ಬದುಕಿದ್ದವ. ಕುಡಿತದ ಮತ್ತಿನಲ್ಲಿ ಸಣ್ಣ ಸಣ್ಣ ಜಗಳಕ್ಕೂ ಕ್ಯಾತೆ ಮಾಡುತ್ತಿದ್ದ ಬೆನ್ ಸ್ಟೋಕ್ಸ್, ಆಸ್ಟ್ರೇಲಿಯಾದಲ್ಲಿ ಬಾರ್ ವೊಂದರ ಹೊರಗೆ ಗಲಾಟೆ ಮಾಡಿಕೊಂಡು ಸಿಕ್ಕಾಪಟ್ಟೆ ಹೊಡೆದಿದ್ದ. ವಿಡಿಯೋ ಹೊರಬಂದು ಜೈಲಿಗೂ ಹೋಗಿದ್ದ.
ಕೊನೆಗೆ 2018ರಲ್ಲಿ ಕೇಸಿನಿಂದ ಮುಕ್ತನಾಗಿ ಬಂದವನಿಗೆ ಬೆನ್ನೆಲುಬಾಗಿ ನಿಂತಿದ್ದು ಇಂಗ್ಲೆಂಡ್‍ನ ಕ್ಯಾಪ್ಟನ್ ಆಗಿದ್ದ ಇಯಾನ್ ಮಾರ್ಗನ್. ಮಾರ್ಗನ್ ಬೆಂಬಲವಿಲ್ಲದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಬೆನ್ ಸ್ಟೋಕ್ಸ್ ಕ್ರಿಕೆಟ್ ಜಗತ್ತಿನಿಂದ ಕಣ್ಮರೆಯಾಗಿ ಹೋಗುತ್ತಿದ್ದರೇನೋ.. ಈಗ ಬೆನ್ ಸ್ಟೋಕ್ಸ್ ನಂಬಿಕಸ್ತ ಆಲ್ರೌಂಡರ್ ಆಗಿದ್ದಾರೆ.
- ಆ್ಯಂಡ್ರೂ ಸೈಮಂಡ್ಸ್


ಮಂಕಿಗೇಟ್ ಖ್ಯಾತಿಯ ಆ್ಯಂಡ್ರೂ ಸೈಮಂಡ್ಸ್ ಕುಡಿತಕ್ಕೂ ಫೇಮಸ್ ಆಗಿದ್ದವರೇ. ಅಶಸ್ತಿಗೆ ಖ್ಯಾತರಾಗಿದ್ದ ಆ್ಯಂಡ್ರೂ ಸೈಮಂಡ್ಸ್ ಶಿಸ್ತನ್ನೂ ಅಳವಡಿಸಿಕೊಂಡಿದ್ದರೆ ಜಗತ್ತಿನ ಶ್ರೇಷ್ಟ ಕ್ರಿಕೆಟ್ ದಿಗ್ಗಜರ ಸಾಲಿನಲ್ಲಿ ನಿಲ್ಲುತ್ತಿದ್ದರೇನೋ.
2009ರಲ್ಲಿ ಈತನ ಕುಡಿತ ವಿಪರೀತಕ್ಕೆ ಹೋಯ್ತು. ನ್ಯೂಜಿಲ್ಯಾಂಡ್ ಎದುರಿನ ಪ್ರಾಕ್ಟೀಸ್ ಮ್ಯಾಚಿನಲ್ಲಿ ಈತನ ವರ್ತನೆ ತಡೆಯಲಾಗದೆ ಕ್ರಿಕೆಟ್ ಆಸ್ಟ್ರೇಲಿಯಾ ಈತನನ್ನು ತಂಡದಿಂದಲೇ ಹೊರಗಟ್ಟಿತು. ಅಂದಿನಿಂದ ಸೈಮಂಡ್ಸ್ ತಿದ್ದಿಕೊಳ್ಳುವ ಪ್ರಯತ್ನ ಮಾಡಿದರಾದರೂ ಕ್ರಿಕೆಟ್ ಆಸ್ಟ್ರೇಲಿಯಾ ಕ್ಷಮಿಸುವುದಕ್ಕೆ ರೆಡಿ ಇರಲಿಲ್ಲ.
ಈ ಹಿಂದೆಯೂ ಈತನ ಕುಡಿತದ ಸುದ್ದಿಗಳಿದ್ದವಾದರೂ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಈತನ ಅದ್ಭುತ ಆಟಕ್ಕಾಗಿ ಸಹಿಸಿಕೊಂಡಿದ್ದರು. ಬುದ್ದಿ ಹೇಳುತ್ತಿದ್ದರು. ವಿಪರೀತಕ್ಕೆ ಹೋದಾಗ ರಕ್ಷಣೆ ಕೊಡುತ್ತಿದ್ದರು. ಆಗಲೇ ತಿದ್ದಿಕೊಂಡಿದ್ದರೆ ಆ ರೀತಿ ಅವಮಾನಕಾರಿಯಾಗಿ ರಿಟೈರ್ ಆಗುವ ಅಗತ್ಯ ಇರಲಿಲ್ಲ.
- ಮಾಂಟಿ ಪನೇಸರ್


ಭಾರತದಲ್ಲಿ ಸ್ಪಿನ್ ಪಿಚ್. ಇಲ್ಲಿ ಗೆಲ್ಲೋದು ಅಸಾಧ್ಯ ಎನ್ನುವಂತಿದ್ದ ಕಾಲದಲ್ಲಿ ಇಂಗ್ಲೆಂಡ್‍ಗೆ ಸ್ಪಿನ್ ಬ್ರಹ್ಮಾಸ್ತ್ರವಾಗಿ ಬಂದವರು ಮಾಂಟಿ ಪನೇಸರ್. ಭಾರತದಲ್ಲಿ ಇಂಗ್ಲೆಂಡ್‍ಗೆ ಟೆಸ್ಟ್ ಸರಣಿ ಗೆಲ್ಲಿಸಿಕೊಟ್ಟಿದ್ದ ರಣಧೀರ. ಈತನ ಕುಟುಂಬದ ಜನ್ಮಭೂಮಿ ಭಾರತವೇ.
ಸಿಕ್ಕಾಪಟ್ಟೆ ಪಾರ್ಟಿ ಮಾಡುತ್ತಿದ್ದ. ಮಧ್ಯರಾತ್ರಿವರೆಗೂ ಕುಡಿಯುತ್ತಿದ್ದ ಪನೇಸರ್ ಕೆಲವೊಮ್ಮೆ ಪಂದ್ಯವನ್ನೂ ತಪ್ಪಿಸಕೊಳ್ಳುತ್ತಿದ್ದರು. ಕುಡಿದು ರಂಪ ಮಾಡಿಕೊಳ್ಳುತ್ತಿದ್ದರು. ಒಮ್ಮೆಯಂತೂ ಲಂಡನ್‍ನಲ್ಲಿ ಬೌನ್ಸರುಗಳ ಮೇಲೆ ಮೂತ್ರ ಮಾಡಿ ಸುದ್ದಿಯಾಗಿದ್ದರು. ಆ ಗಲಾಟೆ ನಂತರ ಮಾಂಟಿ ಪನೇಸರ್ ಕ್ರಿಕೆಟ್ ಬದುಕು ಅಂತ್ಯವಾಯಿತು. ಇಂಗ್ಲೆಂಡ್ ಟೀಮಿನಲ್ಲಿ ಜಾಗ ಸಿಗಲಿಲ್ಲ.
- ರಿಕಿ ಪಾಂಟಿಂಗ್


ಈ ಕುಡಿತದ ಗಲಾಟೆಗಳು, ವಿಪರೀತ ಅಗ್ರೆಸ್ಸಿವ್ ಎನ್ನಿಸುವ ಘನತೆಯಿಲ್ಲದ ವ್ಯಕ್ತಿತ್ವ ಪಾಂಟಿಂಗ್‍ರನ್ನು ಕ್ರಿಕೆಟ್ ದಿಗ್ಗಜರ ಸ್ಥಾನದಿಂದ ಹೊರಹಾಕಿವೆ. ಈತನ ಕುಡಿತದ ಚಟ ಹೇಗಿತ್ತೆಂದರೆ ಒಮ್ಮೆ ಕುಡಿದ ಮತ್ತಿನಲ್ಲಿ ನಾಯಿಯೊಂದನ್ನು ಅಟ್ಟಾಡಿಸಿಕೊಂಡು ಕಚ್ಚಿದ್ದ. ನಾಯಿಯೂ ಕಚ್ಚಿ ಇಂಜಕ್ಷನ್ ಹಾಕಿಸಿಕೊಂಡು ರೆಸ್ಟ್ ಮಾಡಿದ್ದ ಖ್ಯಾತಿ ಈತನದ್ದು.
ಮತ್ತೊಮ್ಮೆ ಪಾಂಟಿಂಗ್ ಹೊಡೆತಕ್ಕೆ ಏಟು ತಿಂದವನ ಒಂದು ಕಣ್ಣು ದೃಷ್ಟಿ ಕಳೆದುಕೊಂಡಿತ್ತು.
ಸ್ಟೀವ್ ವಾ ಈತನನ್ನು ರಕ್ಷಿಸಿದ್ದಷ್ಟೇ ಅಲ್ಲ, ಈತನನ್ನು ಕ್ರಿಕೆಟ್ ಮೇಲೆ ಮನಸ್ಸು ಮೂಡುವಂತೆ ಮಾಡಿದರು. ಆದರೆ ಆಸ್ಟ್ರೇಲಿಯನ್ ಕ್ರಿಕೆಟಿಗರ ಪ್ರಕಾರ ಸ್ಟೀವ್ ವಾ ಎದುರು ಇಲ್ಲದೇ ಇದ್ದಾಗ ಪಾಂಟಿಂಗ್ ಮತ್ತದೇ ಹಳೆಯ ಕುಡುಕನ ಅವತಾರವೆತ್ತುತ್ತಿದ್ದ. ಈಗಲೂ ಕೂಡಾ ಸಚಿನ್ ನಂತರ ಅತೀ ಹೆಚ್ಚು ಶತಕಗಳ ಲಿಸ್ಟಿನಲ್ಲಿರೋ, ಅತೀ ಹೆಚ್ಚು ವಿಶ್ವಕಪ್ ಗೆದ್ದಿರುವ ಕ್ಯಾಪ್ಟನ್ ಪಾಂಟಿಂಗ್‍ಗೆ ದಿಗ್ಗಜನ ಸ್ಥಾನ ಈ ಕುಡಿತದಿಂದಲೇ ಸಿಕ್ಕಿಲ್ಲ.
- ಲಿಯಾನ್ ಪ್ಲಂಕೆಟ್


ಆಟಕ್ಕೆಷ್ಟು ಫೇಮಸ್ಸೋ.. ಈ ಇಂಗ್ಲೆಂಡ್ ಆಟಗಾರ ಕುಡಿತಕ್ಕೂ ಅಷ್ಟೇ ಫೇಮಸ್ಸು. ಒಂದಲ್ಲ.. ಎರಡು ಬಾರಿ ಡ್ರಂಕ್ & ಡ್ರೈವ್ ಕೇಸಿನಲ್ಲಿ ಒಮ್ಮೆ 20 ತಿಂಗಳು ಹಾಗೂ ಮತ್ತೊಮ್ಮೆ 40 ತಿಂಗಳು ಈತನ ಡ್ರೈವಿಂಗ್ ಲೈಸೆನ್ಸ್ ಕಿತ್ತುಕೊಳ್ಳಲಾಗಿತ್ತು. ಕುಡಿತದ ಚಟದಿಂದಾಗಿಯೇ ಇಂಗ್ಲೆಂಡ್‍ನಂತಾ ಶ್ರೀಮಂತ ಕ್ರಿಕೆಟ್ ತಂಡದಲ್ಲಿದ್ದೂ ಆರ್ಥಿಕವಾಗಿ ಬೀದಿಗೆ ಬಿದ್ದಿದ್ದವನು ಲಿಯಾನ್ ಪ್ಲಂಕೆಟ್
- ಡೇವಿಡ್ ವಾರ್ನರ್


ಪ್ರಸ್ತುತ ವಿಶ್ವ ಕ್ರಿಕೆಟಿಗರ ಲಿಸ್ಟಿನಲ್ಲಿರುವ ಕೆಲವು ಹೆಸರುಗಳೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜೋ ರೂಟ್, ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್. ಇಂತಹ ಖ್ಯಾತರ ಲಿಸ್ಟಿನಲ್ಲಿರೋ ವಾರ್ನರ್ ಟೆಸ್ಟ್, ಒನ್ ಡೇ ಹಾಗೂ ಟ್ವೆಂಟಿ-20 ಮೂರೂ ಮಾದರಿಯಲ್ಲಿ ಅದ್ಭುತ ಆಟಗಾರ.
ಈ ವಾರ್ನರ್ ಕುಡಿತಕ್ಕೆ.. ಮತ್ತಿನಲ್ಲಿದ್ದಾಗ ಏಟು ತಿಂದವರಲ್ಲಿ ಒಬ್ಬ ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಜೋ ರೂಟ್. ಅವರಿಬ್ಬರ ಹೊಡೆದಾಟಕ್ಕೆ ಕಾರಣ ಇವತ್ತಿಗೂ ನಿಗೂಢ. ಆದರೆ ಅದಾದ ಮೇಲೆ ವಾರ್ನರ್ ಕುಡಿತವನ್ನು ಕಂಟ್ರೋಲಿಗೆ ತೆಗೆದುಕೊಂಡಿದ್ದಂತೂ ಸತ್ಯ.
- ಆ್ಯಂಡ್ರೂ ಫ್ಲಿಂಟಾಫ್


ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯೆ ನಡೆಯೋ ಆಷಸ್ ಟೆಸ್ಟ್ ಟೂರ್ನಿ ಇದೆಯಲ್ಲ, ಅದಕ್ಕೆ ದೊಡ್ಡ ಮಹತ್ವವಿದೆ. ಆಸ್ಟ್ರೇಲಿಯಾ ವಿರುದ್ಧ ಆಷಸ್ ಗೆಲ್ಲೋಕೆ ಸಾಧ್ಯವಿಲ್ಲ ಎನ್ನುತ್ತಿದ್ದ ಕಾಲದಲ್ಲಿ ಇಂಗ್ಲೆಂಡಿಗೆ ಆಷಸ್ ಗೆದ್ದು ಕೊಟ್ಟಿದ್ದು ಪ್ಲಿಂಟಾಫ್-ಪೀಟರ್ಸನ್ ಜೋಡಿ. ಆದರೆ ಕುಡಿತದ ಚಟದಿಂದಾಗಿಯೇ ಪದೇ ಪದೇ ಗಾಯಾಳುವಾದ ಪ್ಲಿಂಟಾಫ್ ಬಂದಷ್ಟೇ ವೇಗದಲ್ಲಿ ವಾಪಸ್ ಹೋದರು. ಪ್ಲಿಂಟಾಫ್ ಒಬ್ಬ ನ್ಯಾಚುರಲ್ ಕ್ರಿಕೆಟ್ ಆಟಗಾರನಾಗಿದ್ದ. ಕುಡಿತ ಆತನ ಕ್ರಿಕೆಟ್‍ನ್ನು ಬೇಗ ಮುಗಿಸಿತು ಎನ್ನುತ್ತಾರೆ ಕ್ರಿಕೆಟ್ ಪಂಡಿತರು.
- ವಿನೋದ್ ಕಾಂಬ್ಳಿ


ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಹೆಚ್ಚೂ ಕಡಿಮೆ ಒಟ್ಟಿಗೇ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟವರು. ಕೆಲವು ಪಂಡಿತರ ಪ್ರಕಾರ ಕಾಂಬ್ಳಿಯ ಸ್ಟೈಲ್ ತೆಂಡೂಲ್ಕರ್ ಆಟಕ್ಕಿಂತ ಅದ್ಭುತವಾಗಿತ್ತು. ಟೆಕ್ನಿಕಲಿ ಸಚಿನ್‍ಗಿಂತ ಸ್ಟ್ರಾಂಗ್ ಇದ್ದರು. ಆದರೆ ತೆಂಡೂಲ್ಕರ್‍ಗೆ ಇವತ್ತು ಕ್ರಿಕೆಟ್ ದಿಗ್ಗಜರ ಪಟ್ಟಿಯಲ್ಲಿ ನಂ.1 ಸ್ಥಾನವಿದೆ. ಸಚಿನ್ ಕ್ರಿಕೆಟ್ ದೇವರಾಗಿದ್ದರೆ ಕಾಂಬ್ಳಿ ಬದುಕನ್ನೇ ಕಳೆದುಕೊಂಡರು. ಹಣ, ಆಸ್ತಿ, ಪ್ರೀತಿ ಎಲ್ಲವನ್ನೂ ಕಳೆದುಕೊಂಡರು. ಜೀವದ ಗೆಳೆಯಂತಿದ್ದ ತೆಂಡೂಲ್ಕರ್ ನೆರವು ನೀಡಿದರಾದರೂ ಪದೇ ಪದೇ ದಾರಿ ತಪ್ಪಿದ ಕಾಂಬ್ಳಿಯನ್ನು ಅವರು ಕೂಡಾ ಕೈಬಿಟ್ಟರು.
- ಪ್ರವೀಣ್ ಕುಮಾರ್


ಲೆಫ್ಟ್ ಮತ್ತು ರೈಟ್. ಎರಡೂ ಕಡೆ ಒಂದೇ ವೇಗದಲ್ಲಿ ಸ್ವಿಂಗ್ ಮಾಡುವ ಬೌಲರುಗಳು ಅಪರೂಪ. ಈಗ ಬೂಮ್ರಾ, ಆಂಡರ್ಸನ್ ತರಹದವರು ಮಾಡ್ತಾರಲ್ಲ ಅಂತಾದ್ದೊಂದು ಶಕ್ತಿಯಿದ್ದ ಬೌಲರ್ ಪ್ರವೀಣ್ ಕುಮಾರ್. ಒಳ್ಳೆಯ ಬ್ಯಾಟ್ಸ್‍ಮನ್ ಕೂಡಾ ಆಗಿದ್ದ ಪ್ರವೀಣ್ ಕುಮಾರ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದು ಕುಡಿತದಿಂದಾಗಿ. ಮೊದಲ ಟೆಸ್ಟಿನಲ್ಲೇ 5 ವಿಕೆಟ್ ಪಡೆದಿದ್ದ ಪ್ರವೀಣ್ ಕುಮಾರ್ ಕೇವಲ 6 ಟೆಸ್ಟುಗಳಲ್ಲಿ 27 ವಿಕೆಟ್ ಪಡೆದಿದ್ದರು. ಆದರೆ ಕುಡಿತದ ಮತ್ತಿನಲ್ಲಿ ಪದೇ ಪದೇ ಮಾಡಿಕೊಂಡ ಗಲಾಟೆಗಳು ಪ್ರವೀಣ್ ಕ್ರಿಕೆಟ್‍ನ್ನು ಮುಗಿಸಿದವು. ಇದರಿಂದ ಒತ್ತಡಕ್ಕೊಳಗಾದ ಅವರು ಕುಡಿತದ ಮತ್ತಿನಲ್ಲಿ ಒಮ್ಮ ಆತ್ಮಹತ್ಯೆಗೂ ಯತ್ನಿಸಿ ಅದೃಷ್ಟವಶಾತ್ ಬದುಕಿಕೊಂಡಿದ್ದರು.



