ಆ ಮಗು ಹುಟ್ಟಿ ಕೇವಲ 21 ದಿನ. ಆದರೆ ಆ ಮಗುವಿನ ಹೊಟ್ಟೆಯಲ್ಲಿತ್ತು 8 ಭ್ರೂಣ. ಜಾರ್ಖಂಡ್ನಲ್ಲಿ ಇತ್ತೀಚೆಗೆ ನಡೆದಿರುವ ಘಟನೆ ಇದು. ರಾಂಚಿಯಲ್ಲಿ ಬುಧವಾರ ಒಂದು ಆಪರೇಷನ್ ನಡೀತು. ಆ ಶಸ್ತ್ರಚಿಕಿತ್ಸೆಯಲ್ಲಿ ಕೇವಲ 21 ದಿನದ ಹೆಣ್ಣು ಶಿಶುವಿನ ಹೊಟ್ಟೆಯಿಂದ 8 ಭ್ರೂಣವನ್ನು ವೈದ್ಯರು ಹೊರತೆಗೆದಿದ್ದಾರೆ. ರಾಮಗಢದ ಪುಟ್ಟ ಕಂದ ಅಕ್ಟೋಬರ್ 10 ರಂದು ಜನಿಸಿತ್ತು. ಮಕ್ಕಳ ಹೊಟ್ಟೆಯಿಂದ ಭ್ರೂಣ ಹೊರಬರುವ ಪ್ರಕರಣಗಳು ಅಪರೂಪ. ಅಪರೂಪದಲ್ಲಿ ಅವಳಿ-ಜವಳಿ ಅಥವಾ ಅವಳಿ-ತ್ರಿವಳಿ ಮಿಸ್ ಆಗಿ ಒಂದು ಭ್ರೂಣದೊಳಗೆ ಇನ್ನೊಂದು ಭ್ರೂಣ ಬೆಳೆಯುವುದು ಕೂಡಾ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಆದರೆ, 21 ದಿನಗಳ ಶಿಶುವಿನ ಹೊಟ್ಟೆಯಿಂದ 8 ಭ್ರೂಣಗಳು ಹೊರಬಂದ ಘಟನೆ ಬಹುಶಃ ವಿಶ್ವದಲ್ಲೇ ಮೊದಲು ಎಂದು ವೈದ್ಯರು ಹೇಳಿದ್ದಾರೆ.
ರಾಂಚಿಯ ರಾಣಿ ಮಕ್ಕಳ ಆಸ್ಪತ್ರೆಯಲ್ಲಿ ಈ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ತಿಂಗಳು 10 ರಂದು ಜನಿಸಿದ್ದ ಮಗುವಿನ ಹೊಟ್ಟೆ ದೊಡ್ಡ ಪ್ರಮಾಣದಲ್ಲಿ ಊದಿಕೊಂಡಿತ್ತು. ಇದಕ್ಕೆ ಕಾರಣವೇನು ಎಂದು ತಿಳಿಯಲು ವೈದ್ಯರು ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ಗೊತ್ತಾಗಿತ್ತು. ಹಾಗಾಗಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆಪರೇಷನ್ ಬಳಿಕವೇ ಇದು ಗಡ್ಡೆಯಲ್ಲ, ಭ್ರೂಣ ಎನ್ನುವುದು ವೈದ್ಯರಿಗೆ ಗೊತ್ತಾಗಿದೆ. ಎಂಟು ಭ್ರೂಣವನ್ನೂ ವೈದ್ಯರು ಹೊರತೆಗೆದಿದ್ದಾರೆ.

ಸಿಟಿ ಸ್ಕ್ಯಾನ್ ನೋಡಿದಾಗ ಹೊಟ್ಟೆಯಲ್ಲಿ ಡರ್ಮಟೈಟಿಸ್ ಸಿಸ್ಟ್ ಇರುವುದು ಪತ್ತೆಯಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಮಗುವನ್ನು ಆಸ್ಪತ್ರೆಯಿಂದ ಮೊದಲು ಡಿಸ್ಚಾರ್ಜ್ ಮಾಡಲಾಗಿತ್ತು. 21 ದಿನಗಳ ನಂತರ ಕರೆತರುವಂತೆ ಹೇಳಲಾಗಿತ್ತು. ನವೆಂಬರ್ 2 ರಂದು ಅಂದರೆ ಬುಧವಾರ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದಾಗ 8 ಭ್ರೂಣಗಳು ಹೊರಬಂದಿವೆ.
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ ಡಾ. ಇಮ್ರಾನ್ ಪ್ರಕಾರ ಇದು ಫೀಟ್ ಫೀಟು ಪ್ರಕರಣ. ಫೀಟ್ ಇನ್ ಫೀಟು, ಒಂದಕ್ಕಿಂತ ಹೆಚ್ಚು ಭ್ರೂಣಗಳು ಒಂದರಲ್ಲಿಯೇ ಬೆಳೆಯುವುದು. ಗರ್ಭಾಶಯದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಬೆಳೆಯುತ್ತಿದ್ದರೆ, ಭ್ರೂಣದ ಬೆಳವಣಿಗೆಯ ಸಮಯದಲ್ಲಿ ಮಗುವಿನೊಳಗೆ ಹೋದ ಜೀವಕೋಶಗಳು, ಆ ಭ್ರೂಣವು ಮಗುವಿನೊಳಗೆ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಈ ಜೀವಕೋಶಗಳು ಮಗುವಿನೊಳಗೆ ಹೇಗೆ ಪ್ರವೇಶಿಸುತ್ತವೆ ಎನ್ನುವುದು ಗೊತ್ತಾಗಿಲ್ಲ. ಅಂತಹ ನವಜಾತ ಶಿಶುವಿನ ಸೊಂಟದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಮೊಟ್ಟೆಯ ರೀತಿಯ ಗಡ್ಡೆ ಕಾಣುತ್ತದೆ. ಮೂತ್ರ ವಿಸರ್ಜನೆ ನಿಲ್ಲುತ್ತದೆ. ಇದು ತುಂಬಾ ನೋವುಂಟುಮಾಡುತ್ತದೆ. ಈ ರೋಗಲಕ್ಷಣಗಳ ನಂತರ, ವೈದ್ಯರು ಪರೀಕ್ಷಿಸಿದ ಬಳಿಕ ಫೀಟ್ ಇನ್ ಫೀಟು ಖಚಿತವಾಗುತ್ತದೆ ಎನ್ನುತ್ತಾರೆ.
ಇಂತಹುದು ಜಗತ್ತಿನ 5-10 ಲಕ್ಷ ಮಕ್ಕಳಲ್ಲಿ ಒಬ್ಬರಲ್ಲಿ ಕಂಡು ಬರುತ್ತದೆ. ಇದುವರೆಗೆ ವಿಶ್ವಾದ್ಯಂತ ನಡೆದಿರುವ ಇಂತಹ ಪ್ರಕರಣಗಳ ಸಂಖ್ಯೆ 200 ದಾಟಿಲ್ಲ. ಆದರೆ 8 ಭ್ರೂಣಗಳು ಬಿಡುಗಡೆಯಾದ ವಿಶ್ವದ ಮೊದಲ ಪ್ರಕರಣ ಇದಾಗಿದೆ. ಇಂಡಿಯಾದಲ್ಲಿ ಇದುವರಗೆ ಇಂತಹ 10 ಪ್ರಕರಣಗಳು ನಡೆದಿವೆಯಂತೆ.



