ಕಲಾವಿದರು ಮೃತಪಟ್ಟರೆ ರಾಜ್ಯ ಸರ್ಕಾರಗಳೇ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಧೋರಣೆ ಬೆಳೆಯುತ್ತಿದೆ. ಇತ್ತೀಚೆಗೆ ನಟ ವಿಷ್ಣುವರ್ಧನ್ ಅವರ ಸ್ಮಾರಕವೊಂದು ಮೈಸೂರಿನಲ್ಲಿ ಆರಂಭವಾಯಿತು. ಆದರೆ ಅಭಿಮಾನಿಗಳು ಶಾಂತರಾಗಿಲ್ಲ. ವಿಷ್ಣುವರ್ಧನ್ ಸಮಾಧಿಗಾಗಿ ಸರ್ಕಾರ ಮುತುವರ್ಜಿ ವಹಿಸಿ ಸ್ಮಾರಕ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಡಾ.ರಾಜ್ ಮತ್ತು ಪುನೀತ್ ರಾಜ್ ಕುಮಾರ ಅವರ ಸಮಾಧಿಗಳು ಆಗಿವೆಯಷ್ಟೇ. ಸ್ಮಾರಕ ಎಂದು ನೋಡಿದರೆ ಹಾಗೇನಿಲ್ಲ. ಅದನ್ನು ಸರ್ಕಾರವೇ ಮಾಡಬೇಕು ಎಂಬ ಆಗ್ರಹ ಇನ್ನೂ ಇದೆ. ಇನ್ನು ಅಂಬರೀಷ್ ಸ್ಮಾರಕವೂ ಅಷ್ಟೇ.
ಆದರೆ ಎಷ್ಟು ಮಾಡಿದೆಯೋ.. ಅದೆಲ್ಲವನ್ನೂ ಖುದ್ದು ಸರ್ಕಾರವೇ ಮಾಡಿರುವಂತಹುದು. ಆದರೆ ಇದೆಲ್ಲದರಿಂದ ವಿಭಿನ್ನವಾಗಿ ನಿಂತಿರುವುದು ನಟ ವಿನೋದ್ ರಾಜ್. ಅವರು ಸ್ವಾಭಿಮಾನಿ ಲೀಲಾವತಮ್ಮನ ಮಗ. ಸ್ವಂತ ಹಣದಿಂದ ಲೀಲಾವತಿ ಸ್ವಾರಕ ಕಟ್ಟುತ್ತಿದ್ದಾರೆ.
ಲೀಲಾವತಿ. ಕನ್ನಡ ಚಿತ್ರರಂಗದ ಧೃವತಾರೆಯರಲ್ಲಿ ಒಬ್ಬರಾದ ಲೀಲಾವತಿಯವರಿಗೆ ಸುಂದರ ಸ್ಮಾರಕ ಕಟ್ಟಲು ಮುಂದಾಗಿದ್ದಾರೆ ಮಗ ವಿನೋದ್ ರಾಜ್. ವಿಶೇಷವೆಂದರೆ ಈ ಸ್ಮಾರಕಕ್ಕಾಗಿ ಸರ್ಕಾರದಿಂದ ಯಾವುದೇ ರೀತಿಯ ನೆರವು ಪಡೆಯುತ್ತಿಲ್ಲ. ಸರ್ಕಾರವನ್ನು ಕೇಳುವುದಕ್ಕೂ ಹೋಗಿಲ್ಲ. 55 ಲಕ್ಷ ರೂ. ವೆಚ್ಚದಲ್ಲಿ ನೆಲಮಂಗಲದ ತಮ್ಮ ತೋಟದ ಆವರಣದಲ್ಲಿಯೇ ಕಟ್ಟುತ್ತಿದ್ಧಾರೆ. ಗುದ್ದಲಿ ಪೂಜೆಯನ್ನೂ ಮಾಡಿದ್ದಾರೆ.
ಪೂಜೆಯ ಕಾರ್ಯದಲ್ಲಿ ವಿನೋದ್ ರಾಜ್, ಪತ್ನಿ ಅನು, ಪುತ್ರ ಯುವರಾಜ್ ಭಾಗಿಯಾಗಿದ್ದಾರೆ. ಸ್ಮಾರಕ ಚಾಲನೆಯ ಬಳಿಕ ವಿನೋದ್ ರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಲೀಲಾವತಿ ಅವರ ಸ್ಮಾರಕ 55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 120 ದಿನಗಳಲ್ಲಿ ಸ್ಮಾರಕ ಕೆಲಸ ಮುಗಿಯಲಿದೆ ಎಂದಿದ್ದಾರೆ ವಿನೋದ್ ರಾಜ್. ತಾಯಿ ಅವರ ಸ್ಮಾರಕವನ್ನು ನನ್ನ ಆಸೆಯಂತೆ ನಿರ್ಮಿಸಲು ನಿರ್ಧರಿಸಿದ್ದೇನೆ. ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡ್ತಿದ್ದೇವೆ ಎಂದಿರುವ ವಿನೋದ್ ರಾಜ್, ಸ್ಮಾರಕದ ವಿನ್ಯಾಸದ ಚಿತ್ರಣವನ್ನೂ ಕೊಟ್ಟಿದ್ಧಾರೆ.
ಸ್ಮಾರಕದಲ್ಲಿ ಒಂದು ಗ್ಯಾಲರಿ ಇರಲಿದೆ. ಲೀಲಾವತಿ ಅವರು ನಟಿಸಿರುವ ಎಲ್ಲ ಚಿತ್ರಗಳ ಫೊಟೋಗಳು ಗ್ಯಾಲರಿಯಲ್ಲಿರುತ್ತವೆ. ಇನ್ನೂ ಕೆಲವು ಯೋಜನೆಗಳಿವೆ. ಸಮಾಧಿಯನ್ನೊಂದು ಆಧ್ಯಾತ್ಮಿಕ ಕೇಂದ್ರವಾಗಿಸುವ ಯೋಜನೆಯೂ ಇದೆ.



