ಮಾಜಿ ಸಿಎಂ ಕುಮಾರಸ್ವಾಮಿಯವರು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatheendra Siddaramaiah) ಮೇಲೆ ಮಾಡಿರುವ ಆರೋಪ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಕುಮಾರಸ್ವಾಮಿ (HD Kumarswamy) ಅವರ ಸುದ್ದಿ ಮೂಲಗಳು ಹೇಗಿರುತ್ತವೆ ಎಂಬುದರ ಪರಿಚಯ ಜನರಿಗೆ ಇದೆ. ರಾಜಕಾರಣಿಗಳಿಗೂ ಇದೆ. ವಿರೋಧಿಗಳೇ ಆಗಲಿ.. ಮಿತ್ರರೇ ಆಗಲಿ.. ಕುಮಾರಸ್ವಾಮಿಯವರನ್ನು ಅವರ ಸುದ್ದಿಯ ಮೂಲಗಳನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ಅಂತಹ ಕುಮಾರಸ್ವಾಮಿ ಇದೀಗ ಯತೀಂದ್ರ ಅವರ ಮೇಲೆ ಆರೋಪ ಮಾಡಿದ್ದಾರೆ.
ದೇಶದಲ್ಲಿ ಜಿಎಸ್ಟಿ ಇರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಸದಾಗಿ ‘ವೈಎಸ್ಟಿ ತೆರಿಗೆ (YST TAX) ಆರಂಭವಾಗಿದೆ ಎಂದಿದ್ದಾರೆ ಕುಮಾರಸ್ವಾಮಿ. ವೈಎಸ್ಟಿ ಎಂದರೆ ಏನು? ಸ್ವಲ್ಪ ಬಿಡಿಸಿ ಹೇಳಿ ಎಂಬ ಪ್ರಶ್ನೆಗೆ.. ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳನ್ನು ಕೇಳಿ. ಈಗಾಗಲೇ ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿ. ನೀವೂ ಪತ್ತೆಹಚ್ಚಿ ಎಂದಿರುವ ಕುಮಾರಸ್ವಾಮಿ, ಅಧಿಕಾರಿಗಳನ್ನು ಮನೆಯಲ್ಲಿಟ್ಟುಕೊಂಡು ಸಭೆ ಮಾಡುವುದು ಏತಕ್ಕೆ. ವಿಧಾನಸೌಧದಲ್ಲಿ ಮಾಡಲಿ, ಸರ್ಕಾರಿ ಕಚೇರಿಗಳಲ್ಲಿ ಮಾಡಲಿ, ಮನೆಯಲ್ಲಿ ಮೀಟಿಂಗ್ ಯಾಕೆ ಎಂದು ಪ್ರಶ್ನಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಹಣ ಕೊಟ್ಟು ಪೋಸ್ಟ್ ಪಡೆಯಲು ಬಂದವರನ್ನು ದೂರ ಇಟ್ಟಿದ್ದೆ. ಬಿಡಿಎಗೆ ಕೂರಲು ಬಂದ ಅಧಿಕಾರಿಯನ್ನು ಹೊರಗಟ್ಟಿದ್ದೆ. ಯಲಹಂಕ ತಹಶಿಲ್ದಾರ್ ಹುದ್ದೆಗೆ ಒಂದೂವರೆ ಕೋಟಿ ಕೊಡುತ್ತೇವೆ ಎಂದವರನ್ನೂ ಆಚೆ ಇಟ್ಟಿದ್ದೆ. ಇದು ನಾನು ನಡೆಸಿದ ಆಡಳಿತ. ಈಗ ನೋಡಿದರೆ ವೈಎಸ್ಟಿ ತೆರಿಗೆ ಆರಂಭವಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ಆಡಳಿತ ಹಳಿತಪ್ಪಿದೆ. ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿಗಳು’ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ ಅಲ್ಲ. ಇಲಾಖೆಗೊಬ್ಬ ಮುಖ್ಯಮಂತ್ರಿ ಇದ್ದಾರೆ. ಒಬ್ಬೊಬ್ಬರೂ ಮುಖ್ಯಮಂತ್ರಿಯಂತೆ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದರು. ಇಲ್ಲಿ ಸಿದ್ದರಾಮಯ್ಯ ಒಂದು ಹೇಳಿದರೆ, ಸತೀಶ್ ಜಾರಕಿಹೊಳಿ ಇನ್ನೊಂದು ಹೇಳುತ್ತಾರೆ. ಹಾಗಾದರೆ, ಇಲ್ಲಿ ಎಷ್ಟುಜನ ಸಿಎಂಗಳು ಇದ್ದಾರೆ ಎಂದು ಪ್ರಶ್ನಿಸಿದ ಅವರು, ಇದನ್ನು ಸರ್ಕಾರ ಅಂತ ಕರೀತೀರಾ? ಇಲ್ಲೇನಾದರೂ ಪಾರದರ್ಶಕತೆ ಅನ್ನೋದು ಇದೆಯಾ ಎನ್ನುವುದು ಕುಮಾರಸ್ವಾಮಿ ಪ್ರಶ್ನೆ.
ವರ್ಗಾವಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ದಂಧೆಯಾಗಿ ಹೋಗಿದೆ ಎಂಬ ಆರೋಪ ಮಾಡಿದ ಕುಮಾರಸ್ವಾಮಿ, ನಾನು ಸಿದ್ದರಾಮಯ್ಯ ಅವರನ್ನು ಕೇಳಲು ಬಯಸುತ್ತೇನೆ. ನಾನು ತಮ್ಮ ಪಕ್ಷದ ಜತೆ ಸರ್ಕಾರ ರಚನೆ ಮಾಡಿದ್ದಾಗ ನೀವೆಲ್ಲ ಏನೇನು ಮಾಡಿದ್ದೀರಿ ಎನ್ನುವುದು ಗೊತ್ತಿದೆ. ಪೊಗದಸ್ತಾದ ಇಲಾಖೆಗಳನ್ನು ಇಟ್ಟುಕೊಂಡಿದ್ದ ನಿಮ್ಮ ಮಂತ್ರಿಗಳು ಏನು ಮಾಡಿದರು? ಮುಖ್ಯಮಂತ್ರಿಯಾಗಿ ನಾನು ಯಾವೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡುವಂತೆಯೇ ಇರಲಿಲ್ಲ. ಎಲ್ಲ ದಂಧೆಗಳು ಯಾರ ಮೂಗಿನಡಿ ನಡೆಯುತ್ತಿದ್ದವು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.



