ಫಿಲ್ಮ್ ಚೇಂಬರ್ ಎನ್ನುವುದು ಹಾಗೂ ಆ ಕಮಿಟಿಯಲ್ಲಿರುವ ಸದಸ್ಯರು ಸ್ಟಾರ್ ಹೀರೋಗಳ ಹೆಸರು ಹೇಳೋದಕ್ಕೂ ಯೋಚನೆ ಮಾಡ್ತಾರೆ. ಹೀರೋಗಳ ಹೆಸರು ಹೇಳಿ ಅವರಿಂದ ತೊಂದರೆ ಆಗ್ತಾ ಇದೆ ಎಂದು ಹೇಳಿದರೂ.. ಚೇಂಬರಿನವರು ಆ ಹೀರೋ ಹೆಸರು ಹೇಳೋದಿಲ್ಲ. ಅಸಲಿಗೆ ಅವರು ಸಮಸ್ಯೆಯನ್ನೇ ಬಹಿರಂಗವಾಗಿ ಹೇಳೋದಿಲ್ಲ.
ಫಿಲ್ಮ್ ಚೇಂಬರ್ ಸಭೆ ಒಂದು ರೀತಿ ಟೀ, ಕಾಫಿ, ಬಿಸ್ಟಟ್ ಪಾರ್ಟಿಯಾಗಿದೆ, ಅಷ್ಟೆ. ಏಕೆಂದರೆ.. ದೊಡ್ಡ ಸಮಸ್ಯೆಯೇ ಆಗಿರುವ ಚಿತ್ರಮಂದಿರಗಳು ಮುಚ್ಚುತ್ತಿರುವ ವಿಷಯವನ್ನು ಸಭೆಯಲ್ಲಿ ಮಾತನಾಡಿದರಾದರೂ.. ಹೊರಗೆ ಅದನ್ನು ಹೇಳಲೇ ಇಲ್ಲ. ಸ್ಟಾರ್ ಹೀರೋಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿದರೂ.. ಹೊರ ಜಗತ್ತಿಗೆ ಅದನ್ನು ಗುಟ್ಟಾಗಿಯೇ ಇಟ್ಟರು. ಎಂದಿನಂತೆ.. ಒಂದು ಸುದ್ದಿಗೋಷ್ಠಿ ಮಾಡಿದರಷ್ಟೇ.
ಚಿತ್ರಮಂದಿರ ಬಂದ್ ಮಾಡುತ್ತೇವೆ ಎಂದು ನಾವೆಲ್ಲಿ ಹೇಳಿದ್ವಿ.. ಬಂದ್ ಮಾಡುತ್ತೀವಿ ಅಂತ ಘೋಷಣೆನೇ ಮಾಡಿಲ್ಲ, ಆದರೂ ಆ ಸುದ್ದಿ ಹರಿದಾಡಿ ಚಿತ್ರರಂಗದ ವ್ಯವಹಾರಕ್ಕೆ ತೊಂದರೆ ಆಗಿದೆ. ಇಂತಾದ್ದೊಂದು ಮಾತು ಹೇಳುವ ಮೂಲಕ ಫಿಲ್ಮ್ ಚೇಂಬರ್ ಸಭೆ ʻಚಿತ್ರಮಂದಿರ ಬಂದ್ʼ ಸುದ್ದಿ ನಿರಾಕರಿಸಿತು. ವಿಚಿತ್ರವೇನು ಗೊತ್ತೇ.. ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಅವರು ರಾಜ್ಯದಲ್ಲಿ 200+ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ ಎಂದು ಹೇಳಿದರು.
ಫಿಲಂ ಚೇಂಬರ್ ಕರೆದಿದ್ದ ಸಭೆಯಲ್ಲಿ ಚಿತ್ರರಂಗದ ಸಕ್ರಿಯ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಸಭೆಗೆ ಕರೆಯಲಾಗಿತ್ತು. ಸಭೆಯಲ್ಲಿ ನಿರ್ಮಾಪಕ, ವಿತರಕ ಜಯಣ್ಣ, ನಿರ್ಮಾಪಕ, ನಿರ್ದೇಶಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ನಿರ್ಮಾಣ ಸಂಸ್ಥೆಯ ಪ್ರತಿನಿಧಿ ಚಿದಾನಂದ್, ನಿರ್ಮಾಪಕ ತರುಣ್ ಶಿವಪ್ಪ, ಲಹರಿ ವೇಲು, ಕೆಪಿ ಶ್ರೀಕಾಂತ್ ಮೊದಲಾದವರೆಲ್ಲ ಭಾಗವಹಸಿದ್ದರು. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಒಟ್ಟಾರೆ ರಿಸಲ್ಟ್ ಇದು.
ರಾಜ್ಯದಲ್ಲಿ 600+ ಚಿತ್ರಮಂದಿರಗಳಿದ್ದು, 200ಕ್ಕೂ ಹೆಚ್ಚು ಥಿಯೇಟರುಗಳು ಬಾಗಿಲು ಹಾಕಿವೆ ಎಂದು ಒಪ್ಪಿಕೊಂಡ ಅಧ್ಯಕ್ಷರು , ‘ಕನ್ನಡ ಚಿತ್ರರಂಗ ಹಾಗೂ ಚಿತ್ರಮಂದಿರಗಳ ಬಂದ್ ಮಾಡುವುದಿಲ್ಲ’ ಎಂದು ಹೇಳಿದರು. ಆದರೆ.. ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.
ವಿಶೇಷವೆಂದರೆ.. ಸ್ಟಾರ್ ನಟರ ಚಿತ್ರಗಳ ರಿಲೀಸ್ ವಿಳಂಬಕ್ಕೆ ನಿರ್ಮಾಪಕರು ಸಭೆಯಲ್ಲಿ ಹೇಳಿದ್ದೇ ಬೇರೆ. ‘ಸಿಜಿ ವರ್ಕ್, ಪೋಸ್ಟ್ ಪ್ರೋಡಕ್ಷನ್ ವರ್ಕ್ಗಳು ತಡವಾಗುತ್ತಿವೆ. ಹೀಗಾಗಿ ವಿಳಂಬವಾಗುತ್ತಿದೆ ಎಂಬ ವಾದ ಮುಂದಿಟ್ಟ ನಿರ್ಮಾಪಕರು, ನಟರನ್ನು ವಿವಾದದಿಂದ ಹೊರಗೇ ಇಟ್ಟರು. ಸ್ಟಾರ್ ಹೀರೋಗಳು ಹೆಚ್ಚು ಸಂಭಾವನೆ ಪಡೆಯೋದು, ನಿರ್ದೇಶಕರ ಕೆಲಸದಲ್ಲಿ ಮೂಗು ತೂರಿಸೋದು, ವಿನಾಕಾರಣ ಚಿತ್ರದ ಬಜೆಟ್ ಹೆಚ್ಚಾಗುತ್ತಿರುವುದು..ಇತ್ಯಾದಿ ಇತ್ಯಾದಿ ಸಮಸ್ಯೆಗಳ ಬಗ್ಗೆ ಚೇಂಬರ್ ತುಟಿಕ್ ಪಿಟಿಕ್ ಎನ್ನಲಿಲ್ಲ.
ಕೊನೆಗೆ ಕೇರಳ ಮಾದರಿಯಲ್ಲಿ ಸರ್ಕಾರದಿಂದಲೇ ಒಟಿಟಿ ಮಾಡುವುದು, ಯುಎಫ್ʻಓ, ಕ್ಯೂಬ್ʻಗಳಲ್ಲಿ ಥಿಯೇಟರ್ ಪ್ರಸಾರದ ದರವನ್ನು ಕಡಿಮೆ ಮಾಡಿಸುವುದು, ಥಿಯೇಟರುಗಳಲ್ಲಿ ಟಿಕೆಟ್ ದರ ಕಡಿಮೆ ಮಾಡಿಸುವುದು ಸೇರಿದಂತೆ ಹಳೆಯ ನಿರ್ಣಯಗಳನ್ನೇ ತೆಗೆದುಕೊಳ್ಳಲಾಯಿತು. ಇದನ್ನು ಸರ್ಕಾರದ ಗಮನಕ್ಕೆ ತರಲಿದ್ದೇವೆ’ ಎಂದು ಚೇಂಬರ್ ಅಧ್ಯಕ್ಷ ಸುರೇಶ್ ಹೇಳುವ ಮೂಲಕ ಸಭೆ ಮುಗಿಯಿತು.
ಸಭೆಯಲ್ಲಿ ಎಲ್ಲರಿಗೂ ಟೀ, ಕಾಫಿ, ಬಿಸ್ಕೆಟ್ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳೂ ಇತ್ತು. ಆದರೆ.. ಸರ್ಕಾರಕ್ಕೆ ಒಂದು ಮನವಿ ಪತ್ರ ಸಲ್ಲಿಸುತ್ತೇವೆ ಎಂಬ ಹೊರತಾಗಿ.. ಮತ್ಯಾವ ತೀರ್ಮಾನವೂ ಆಗಲಿಲ್ಲ. ಇದಕ್ಕೆ ಇಷ್ಟೆಲ್ಲ ಬಿಲ್ಡಪ್ ಬೇಕಿತ್ತಾ..



