ವೈಎಸ್‍ವಿ ದತ್ತ.ವಿಧಾನಸೌಧದಲ್ಲಿ ಮೇಷ್ಟ್ರು ಎಂದೇ ಫೇಮಸ್. ಬಿಎಸ್‍ಸಿ ಓದಿದ್ದ ವೈಎಸ್‍ವಿ ದತ್ತ ಕಡೂರಿನ ಯಗಟಿಯವರು. ಮೇಷ್ಟ್ರಾಗಿದ್ದ ದಿನಗಳಲ್ಲಿಯೇ ದೇವೇಗೌಡರ ಸಂಪರ್ಕಕ್ಕೆ ಬಂದರು. ಮೇಷ್ಟ್ರು ಕೆಲಸ ಬಿಟ್ಟು ಜನತಾದಳ ಸೇರಿದರು. 

ದತ್ತ ಜೆಡಿಎಸ್ ತೊರೆಯಲಿದ್ದಾರೆ ಎಂಬುದು ಸುಮಾರು 1 ವರ್ಷದಿಂದ ಚಲಾವಣೆಯಲ್ಲಿರುವ ಸುದ್ದಿ. ಡಿಸೆಂಬರಿನಲ್ಲಿ ಆಡಿಯೋ ಒಂದು ರಿಲೀಸ್ ಆಗಿತ್ತು. ಲೀಕ್ ಆಗಿದ್ದ ವಿಡಿಯೋದಲ್ಲಿ ದತ್ತ ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದರೆ, ಸಿದ್ದರಾಮಯ್ಯ ಬಗ್ಗೆ ಪ್ರೀತಿ ಹಂಚಿಕೊಂಡಿದ್ದರು. ಅದಾದ ಮೇಲೆ ತಾನು ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಇಡೀ ದೇಶದಲ್ಲಿ ಮೋದಿಗೆ ಠಕ್ಕರ್ ಕೊಡುವ ನಾಯಕರೊಬ್ಬರಿದ್ದಾರೆ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಹೇಳಿ ಈಗ ಕಾಂಗ್ರೆಸ್ ಸೇರುತ್ತಿದ್ದಾರೆ.

ದೇವೇಗೌಡರ ಬಳಿ ದತ್ತ ಅವರು ಸೇರಿದಾಗ ದತ್ತ ಅವರಿಗೆ 20 ವರ್ಷ. ಈಗ ಸರಿಸುಮಾರು 70 ವರ್ಷ. ಅಲ್ಲಿಗೆ ಸುಮಾರು 4 ದಶಕಗಳ ಬಾಂಧವ್ಯಕ್ಕೆ ಕೊನೆ ಬೀಳಲಿದೆ. ಕಳೆದ ಚುನಾವಣೆ ವೇಳೆಯೇ ಕಡೆಯ ಗಳಿಗೆಯಲ್ಲಿ ಟಿಕೆಟ್ ಸಿಕ್ಕಿತ್ತು. ಅಲ್ಲದೆ ಸೋತ ನಂತರ ದತ್ತ ಪಕ್ಷದ ವೇದಿಕೆಗಳಲ್ಲಿ ನಾಪತ್ತೆಯಾಗುತ್ತಿದ್ದರು. ಮಾಧ್ಯಮಗಳಲ್ಲಿ ಖಾಯಮ್ ಆಗಿರುತ್ತಿದ್ದವರು, ಅಲ್ಲಿಯೂ ಕಾಣಿಸಿಕೊಳ್ಳೋದು ಕಡಿಮೆ ಮಾಡಿಬಿಟ್ಟಿದ್ದರು.
ದೇವೇಗೌಡರ ಬಗ್ಗೆ ಎರಡು ಮಾತಿಲ್ಲ. ಅವರ ಜಾತ್ಯತೀತತೆ ಬಗ್ಗೆ ಅನುಮಾನವಿಲ್ಲ. ಆದರೆ ಕುಮಾರಸ್ವಾಮಿ ಬಗ್ಗೆ ಕೇಳಬೇಡಿ ಎನ್ನುತ್ತಲೇ ಅಸಮಾಧಾನ ಹೊರಹಾಕಿದ್ದಾರೆ ದತ್ತ. ಮೂಲಗಳ ಪ್ರಕಾರ ದತ್ತ ಕಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ಜನವರಿ 15ರಂದು ದತ್ತ ಕಾಂಗ್ರೆಸ್ ಸೇರಲಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ದತ್ತ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.

ದತ್ತ ಹೊರಡುತ್ತಿದ್ದಂತೆಯೇ ಕನಲಿ ಕೆಂಡವಾಗಿರುವ ಜೆಡಿಎಸ್ ಮಾನಸಪುತ್ರನನ್ನು ದೇವೇಗೌಡರ ತಮ್ಮ ಇನ್ನೊಬ್ಬ ಮಗನೆಂದೇ ನಂಬಿದ್ದರು. ಕೇಳಿದ್ದೆಲ್ಲ ಕೊಟ್ಟರು. ಪ್ರೀತಿ, ವಿಶ್ವಾಸ ಧಾರೆಯೆರೆದರು. ಅದೆಲ್ಲವನ್ನೂ ಮರೆತು ಗೌಡರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಮಾನಸಪುತ್ರನ ಮುಳುಗಿಯೇ ಹೋಗುತ್ತಿದ್ದ ಬದುಕನ್ನು ತಂದೆಗಿಂತ ಹೆಚ್ಚಾಗಿ ಗಟ್ಟಿಯಾಗಿ ನಿಂತು ಕಟ್ಟಿಕೊಟ್ಟವರು ಗೌಡರು. ಮಾನಸಪುತ್ರನನ್ನು ಕಳೆದುಕೊಂಡ ಬಗ್ಗೆ ದೇವೇಗೌಡರು ಕೊರಗುವುದಿಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಗೌಡರಿಗೆ ಮಾನಸಪುತ್ರರೇ. ಈ ಮಾನಸಪುತ್ರನಿಗೆ ನಂಬಿಕೆ ಎಂದರೆ ವ್ಯಾಪಾರ. ಪ್ರೀತಿ ಎಂದರೆ ಲಾಭದ ದಾರಿ. ವಿಶ್ವಾಸ ಎಂದರೆ ರಾಜಕೀಯ ಹಕೀಕತ್ತಿನ ಮಾರ್ಗ. ಡೋಂಗಿ ಮಾನಸಪುತ್ರನನ್ನು ಮರೆತರೇ ಲೇಸು ಎಂದು ಕಿಡಿ ಕಾರಿದೆ ಜೆಡಿಎಸ್.



