

ರಾತ್ರಿ ಪೂರಾ ನಿದ್ದೆ ಇಲ್ಲ ಕಣ್ಣಿಗೆ..
ಕಾಯಿ ಕಾಯಿ ನುಗ್ಗೆಕಾಯಿ ಆಸೆಗೆ..
ಬಿಟ್ಟು ಬಂದೆ ನಾನು ನನ್ನ ಹಾಸಿಗೆ..
ಹಂಸಲೇಖ ಈ ಹಾಡನ್ನು ಹಳ್ಳಿಮೇಷ್ಟ್ರು ಚಿತ್ರಕ್ಕಾಗಿ ಬರೆದಿದ್ದೇ ಬರೆದಿದ್ದು.. ನುಗ್ಗೆಕಾಯಿಗೆ ಒಂದು ವೆಜಿಟೇಬಲ್ ವಯಾಗ್ರಾ ಇಮೇಜ್ ಬಂದುಬಿಡ್ತು. ಪೋಲಿ ದೃಶ್ಯಗಳಲ್ಲಿ ನುಗ್ಗೆಕಾಯಿ ಕಾಮನ್ ಆಗಿ ಹೋಯ್ತು. ಆದರೆ ನುಗ್ಗೆಕಾಯಿ ಮಹಿಮೆ ಇಷ್ಟೇ ಅಲ್ಲ.. ಅದು ಒಂದು ದೇಶವನ್ನೇ ಕಾಪಾಡಿದೆ. ಕ್ಯೂಬಾ ಅನ್ನೋ ದೇಶಕ್ಕೆ ನುಗ್ಗೆಕಾಯಿ ಕೊಟ್ಟ ಶಕ್ತಿ ಎಂಥದ್ದು ಅನ್ನೋದನ್ನು ಆ ದೇಶದ ಅಧ್ಯಕ್ಷನಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಇಡೀ ಜಗತ್ತಿನೆದುರು ತೆರೆದಿಟ್ಟಿದ್ದ.

ನುಗ್ಗೆಕಾಯಿಗೆ ಪವಾಡದ ತರಕಾರಿ ಅನ್ನೋ ಬಿರುದು ಕೊಟ್ಟಿದ್ದ. ಕ್ಯೂಬಾದ ಫಿನ್ಲೆ ಇನ್ಸ್ಟಿಟ್ಯೂಟ್ ಹಲವು ಕಾಯಿಲೆಗಳಿಂದ ನರಳುತ್ತಿದ್ದ ಕ್ಯೂಬನ್ನರಿಗೆ ಪರಿಹಾರ ರೂಪದಲ್ಲಿ ಸೂಚಿಸಿದ್ದ ತರಕಾರಿ ಈ ನುಗ್ಗೆಕಾಯಿ. ಅದನ್ನು ಜಗತ್ತಿನ ಹಸಿದವರ ಆಹಾರ ಎಂಬ ಬಿರುದು ಕೊಟ್ಟಿದ್ದೂ ಅದೇ ಕ್ಯೂಬಾ. ಆ ದೇಶಕ್ಕೆ ನುಗ್ಗೆಕಾಯಿಯನ್ನು ಕೊಟ್ಟಿದ್ದು ನಮ್ಮ ಭಾರತ. ಫಿನ್ಲೆ ಇನ್ಸ್ಟಿಟ್ಯೂಟ್ ಸ್ಥಾಪಕ ಹ್ಯೂರ್ಗೋ ಅದಕ್ಕಾಗಿಯೇ ಭಾರತಕ್ಕೆ ಬಂದು ನುಗ್ಗೆಕಾಯಿಯ ವಿವಿದ ಭಕ್ಷ್ಯಬೋಜ್ಯಗಳ ರೆಸಿಪಿ ತೆಗೆದುಕೊಂಡು ನುಗ್ಗೆಕಾಯಿ ಬೀಜಗಳನ್ನೂ ತೆಗೆದುಕೊಂಡು ಹೋಗಿ ಕ್ಯೂಬಾದಲ್ಲಿ ನೆಟ್ಟು, ಆ ಇಡಿ ದೇಶವನ್ನು ಅಪೌಷ್ಠಿಕತೆಯಿಂದ ಕಾಪಾಡಿದ್ದನ್ನು ಇಡೀ ಜಗತ್ತು ಬೆಕ್ಕಸ ಬೆರಗಾಗಿ ನೋಡಿದೆ.
ಅಂತಹ ನುಗ್ಗೆಕಾಯಿಯ ನುಗ್ಗೆ ಹೂವು, ನುಗ್ಗೆ ಕಾಯಿ, ನುಗ್ಗೆ ಎಲೆ ಎಲ್ಲವೂ ಹೆಚ್ಚಿನ ಪೌಷ್ಟಿಕಾಂಶದಿಂದ ಕೂಡಿರುವ ಆಹಾರ. ಇವೆಲ್ಲವನ್ನೂ ಬಳಸಿ ವೆರೈಟಿ ವೆರೈಟಿ ಸಾಂಬಾರು ಮಾಡಿ ತಿಂತಾರೆ. ಬಲಿತ ನುಗ್ಗೆಕಾಯಿಯನ್ನು ಒಣಗಿಸಿ, ಅದರೊಳಗಿನ ನುಗ್ಗೆ ಬೀಜಗಳನ್ನು ಹುರಿದು ತಿಂತಾರೆ. ಬೇಯಿಸಿಯೂ ತಿಂತಾರೆ. ಇದು ಉರಿಯೂತಕ್ಕೆ ಮದ್ದು. ಹೃದ್ರೋಗಕ್ಕೆ ಮದ್ದು. ಕೊಲೆಸ್ಟರಾಲ್ ಕಡಿಮೆ ಮಾಡೋಕೆ ಮದ್ದು. ಶುಗರ್ ಕಂಟ್ರೋಲ್ ಮಾಡೋಕೆ ಮದ್ದು. ಸಿಂಪಲ್ಲಾಗಿ ಹೇಳಬೇಕೆಂದರೆ ನುಗ್ಗೆಕಾಯಿ ಮನುಷ್ಯನ ಪಾಲಿಗೆ ಆತನ ಆರೋಗ್ಯಕ್ಕೆ ಒಂದು ರಕ್ಷಣಾ ಕೋಟೆ. ನುಗ್ಗೆ ಸೊಪ್ಪಿನ ರಸ ಸೇವಿಸಿದರೆ ಬ್ಯಾಕ್ಟೀರಿಯ ಕಂಟ್ರೋಲ್ ಮಾಡಬಹುದು. ಗಾಯಕ್ಕೆ , ತುರಿಕೆಗೆ ನುಗ್ಗೆ ರಸವು ಒಳ್ಳೆಯ ಮದ್ದು. ರೋಗನಿರೋಧಕ ಶಕ್ತಿ ಹೆಚ್ಚಿಸುವ ತಾಕತ್ತು ಈ ನುಗ್ಗೆಯಲ್ಲಿದೆ.
ನುಗ್ಗೆ ಬೀಜಗಳಲ್ಲಿರೋ ಹಲವು ಪೋಷಕಾಂಶಗಳು ಮತ್ತು ವಿಟಮಿನ್ನುಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕೀಲು ನೋವನ್ನು ಕಡಿಮೆ ಮಾಡುವ ಕ್ಯಾಲ್ಸಿಯಂ ಈ ನುಗ್ಗೆಬೀಜದಲ್ಲಿದೆ. ಅದು ಮೂಳೆಗಳನ್ನ ಬಲಪಡಿಸುತ್ತೆ. ಕೀಲುಗಳಿಗೆ ತಾಕತ್ತು ಕೊಡುತ್ತದೆ. ಸಂಧಿವಾತಕ್ಕೆ ಕೂಡಾ ಇದು ಒಳ್ಳೆಯ ಮದ್ದು.
ನುಗ್ಗೆ ಬೀಜದಲ್ಲಿರೋ ಕಬ್ಬಿಣ ಮತ್ತು ಸತುವಿನ ಅಂಶ ಮಧುಮೇಹಿಗಳಿಗೆ ರಾಮಬಾಣ. ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಲ್ಲದೆ ನುಗ್ಗೆಯಲ್ಲಿರೋ ಫೈಬಲ್ ದೇಹದ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು.
ನುಗ್ಗೆ ಬೀಜಗಳನ್ನ ನೀರಿನಲ್ಲಿ ನೆನಸಿ ಆ ನೀರನ್ನು ಮಲಗುವ ಮೊದಲು ಕುಡಿದರೆ ಅದೊಂದು ಹೆಲ್ದಿ ಸ್ಲೀಪಿಂಗ್ ಟ್ಯಾಬ್ಲೆಟ್ನಂತೆ ಕೆಲಸ ಮಾಡುತ್ತೆ. ನಿದ್ರೆಯನ್ನು ಸುಧಾರಿಸುತ್ತದೆ. ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ನುಗ್ಗೆ ಬೀಜವನ್ನು ತಿನ್ನುವುದು ಒಳ್ಳೆಯದು.ಇವು ಹೃದಯರಕ್ತನಾಳದ ವ್ಯವಸ್ಥೆಯನ್ನು ರಕ್ಷಿಸುವಾಗ ನಿಮ್ಮ ಹೃದಯಕ್ಕೆ ಉತ್ತಮವಾದ ಕೆಲವು ಗುಣಲಕ್ಷಣಗಳನ್ನು ಹೊಂದಿರುತ್ತವೆ. ಇದು ನಿಸ್ಸಂಶಯವಾಗಿ ಆರೋಗ್ಯಕರ ಹೃದಯವನ್ನು ಉತ್ತೇಜಿಸುತ್ತದೆ, ವಿಶೇಷವಾಗಿ ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನು ಹೊಂದಿರುವ ಜನರಿಗೆ ನುಗ್ಗೆ ಬೀಜಗಳ ಸೇವನೆ ಬಹಳ ಉತ್ತಮ ಎನ್ನಲಾಗುತ್ತದೆ.

ಎಲ್ಲ ರೀತಿಯ ಅಮಿನೊ ಆಸಿಡ್ ಹೊಂದಿರುವ ಏಕೈಕ ಗಿಡವೆಂದರೆ ಅದು ನುಗ್ಗೇಕಾಯಿ. ಅಂದಹಾಗೆ ಇದರಲ್ಲಿ ಕ್ಯಾನ್ಸರ್ ನಿವಾರಕ ಶಕ್ತಿಯೂ ಇದೆಯಂತೆ. ಅದನ್ನು ಕ್ಯೂಬಾದಿಂದ ವೆನಿಜುವೆಲಾ ಅಧ್ಯಕ್ಷರಿಗೂ ತಲುಪಿ, ವೆನಿಜುವೆಲಾದಲ್ಲಿ ಕೂಡಾ ನುಗ್ಗೆಕಾಯಿಯ ಕ್ರಾಂತಿಯಾಗಿದೆ.
ನಿಮಗೆ ಗೊತ್ತಿರಲಿ, ನುಗ್ಗೆಕಾಯಿಯಿಂದ ಏನೇನೆಲ್ಲ ವೆರೈಟಿ ಅಡುಗೆ ಮಾಡಬಹುದೋ.. ಅದೆಲ್ಲವನ್ನೂ ಕ್ಯೂಬಾ ಅನ್ನೋ ಪುಟ್ಟ ದೇಶ ಅಕ್ಷರಶಃ ಭಾರತದಿಂದ ಬರೆಸಿಕೊಂಡು ಜನರಿಗೆ ಹಂಚಿದೆ. ಆದರೆ.. ನಮ್ಮ ಮನೆಯ ಹಿತ್ತಲಿನ ನುಗ್ಗೆಕಾಯಿ ಎಂದರೆ ನಮಗೇ ಅದು ಮದ್ದಲ್ಲ ಎನಿಸುತ್ತಿದೆ. ಅದೇ ವಿಪರ್ಯಾಸ.



