ಸೀಬೆ ಕಾಯಿ ಅಂತಾರೆ. ಪೇರಲ ಹಣ್ಣೂ ಅಂತಾರೆ. ಹಿಂದಿಯಲ್ಲಿ ಗವ್ವಾ ಅಂತಾರೆ. ಆದರೆ ಈ ಹಣ್ಣಿನ ತಾಕತ್ತು ಸೇಬಿನ ಹಣ್ಣಿಗಿಂತ ಒಂದು ತೂಕ ಜಾಸ್ತಿ. ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ, ಮನೆಯಂಗಳದಲ್ಲೆ ಬೆಳೆಯಬಹುದಾದ ಸೀಬೆ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಉಪ್ಪು-ಖಾರ ಹಾಕ್ಕೊಂಡು ತಿಂತಿದ್ರೆ ಎಷ್ಟು ತಿಂದ್ರೂ ತಿನ್ಬೇಕು ಅನ್ಸುತ್ತೆ. ಆದರೆ ಈ ಹಣ್ಣು ತಿಂದರೆ ಕೆಮ್ಮು ಬರುತ್ತೆ. ಇನ್ಯಾವುದೋ ರೋಗ ಬರುತ್ತೆ ಅನ್ನೋ ಮೂಢ ನಂಬಿಕೆಗಳಿವೆ. ಆದರೆ ಅವು ಮೂಢನಂಬಿಕೆಗಳು ಮಾತ್ರ. ಸತ್ಯವಲ್ಲ. ಸೀಬೆಹಣ್ಣಿನಲ್ಲಿ ಭಯಂಕರ ಶಕ್ತಿ ಇದೆ. ಇದು ದಿ ಬೆಸ್ಟ್ ರೋಗನಿರೋಧಕ ಹಣ್ಣು. ಪೇರಲೆ ಹಣ್ಣುಗಳು ಉತ್ಕರ್ಷಣ ನಿರೋಧಕ. ಇದರಲ್ಲಿ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಸಮೃದ್ಧವಾಗಿದೆ.
ಸೀಬೆಯಲ್ಲಿ ಕ್ಯಾಲರಿ ಕಡಿಮೆ. ನೂರು ಗ್ರಾಂ ಪೇರಳೆಯಲ್ಲಿ 68 ಕ್ಯಾಲರಿ ಮಾತ್ರ ಇದೆ. ಆಹಾರದ ನಾರಿನಾಂಶವು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುತ್ತೆ. ಹಸಿವು ತಡೆಯುತ್ತೆ. ಹೆಚ್ಚು ಕ್ಯಾಲರಿ ದೇಹಕ್ಕೆ ಸೇರಿಸದೆ, ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಪೇರಳೆ ಹಣ್ಣಿನಿಂದಾಗಿ ಸಿಗುವುದು.
ಸಕ್ಕರೆ ಪ್ರಮಾಣ ನಿಯಂತ್ರಿಸುತ್ತೆ. ಹೀಗಾಗಿ ಇದು ಡಯಾಬಿಟಿಸ್ ಇರುವವರಿಗೆ ಒಳ್ಳೆಯದು. ಪೇರಲೆ ಎಲೆಗಳ ಸಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಇನ್ಸುಲಿನ್ ಪ್ರತಿರೋಧಕವಾಗಯೂ ಕೆಲಸ ಮಾಡುತ್ತೆ. ಊಟದ ಮೊದಲು ಅಥವಾ ಊಟದ ನಂತರ ಇದರ ಎಲೆಯ ಚಹಾ ಸೇವಿಸಿದರೆ ಉತ್ತಮ.
ಈ ಹಣ್ಣಿನಲ್ಲಿರೋ ವಿಟಮಿನ್ ಸಿ ಕಿತ್ತಳೆಯಲ್ಲಿರುವ ವಿಟಮಿನ್ ಸಿ ಗಿಂತ ೪ ಪಟ್ಟು ಹೆಚ್ಚು. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುವುದಲ್ಲದೆ ಸಾಮಾನ್ಯ ಸೋಂಕುಗಳಿಂದ ರಕ್ಷಾಕವಚವಾಗಿ ಕೆಲಸ ಮಾಡುತ್ತೆ. ಹಾಗೂ ಕಣ್ಣುಗಳಿಗೂ ಒಳ್ಳೆಯದು.
ಲೈಕೋಪೀನ್, ಕ್ವೆರ್ಸೆಟಿನ್, ವಿಟಮಿನ್ ಸಿ ಮತ್ತು ಇತರೆ ಪಾಲಿಫಿನಾಲ್‌ಗಳು ಪ್ರಬಲವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತವೆ. ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಇರುವವರು ಇದನ್ನು ತಿಂದರೆ ಉತ್ತಮ.
ಹೃದಯಕ್ಕೂ ಒಳ್ಳೆಯದು ಈ ಸೀಬೆ ಹಣ್ಣು. ಆರೋಗ್ಯಕರವಾದ ಪೇರಲೆ ಹಣ್ಣು ದೇಹದ ಸೋಡಿಯಂ ಮತ್ತು ಪೊಟ್ಯಾಸಿಯಮ್ ಸಮತೋಲನವನ್ನು ಸುಧಾರಿಸುತ್ತದೆ. ಇದರಿಂದಾಗಿ ಬಿಪಿ ಇರುವ ರೋಗಿಗಳಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಮಲಬದ್ಧತೆಗೂ ಇದು ರಾಮಬಾಣ. ಪೆರಲೆಯಲ್ಲಿ ಫೈಬರ್ ಹೆಚ್ಚಾಗಿದ್ದು ಇದು ಜೀರ್ಣ ವ್ಯವಸ್ಥೆಗೆ ಪ್ರಯೋಜನಕಾರಿ. ಪೇರಲೆ ಬೀಜಗಳನ್ನು ಸಂಪೂರ್ಣವಾಗಿ ಸೇವಿಸಿದರೆ ಅಥವಾ ಅಗಿಯುತ್ತಿದ್ದರೆ, ಕರುಳಿನ ಚಲನೆ ಚೆನ್ನಾಗಿರುತ್ತದೆ.
ಪೇರಲೆಯಲ್ಲಿರೋ ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಬೂಸ್ಟರ್. ಇದು ದೃಷ್ಟಿ ಕ್ಷೀಣಿಸುವುದನ್ನು ತಡೆಯುವುದಲ್ಲದೆ, ದೃಷ್ಟಿಯನ್ನು ಸುಧಾರಿಸುತ್ತದೆ. ಕಣ್ಣಿನ ಪೊರೆ ಇರುವವರು ಇದನ್ನು ಹೆಚ್ಚಾಗಿ ತಿನ್ನಬೇಕು.
ಫೋಲಿಕ್ ಆಮ್ಲ ಅಥವಾ ವಿಟಮಿನ್ ಬಿ-೯ ಅಂಶವಿದ್ದು ಇದು ಗರ್ಭಿಣಿಯರಿಗೆ ಒಳ್ಳೆಯದು. ಗರ್ಭಿಣಿಯರು ಸೀಬೆ ಹಣ್ಣು ಅಥವಾ ಸೀಬೆ ಕಾಯಿ ತಿನ್ನೋದ್ರಿಂದ ಹೊಟ್ಟೆಯಲ್ಲಿನ ಮಗುವಿನ ನರಮಂಡಲ ವೃದ್ಧಿಯಾಗುತ್ತದೆ.

ಅಲ್ಲದೆ ಈ ಹಣ್ಣಿನ ಎಲೆಗಳು ಪ್ರಬಲವಾದ ಉರಿಯೂತದ ಕ್ರಿಯೆಯನ್ನು ಹೊಂದಿವೆ. ಸೋಂಕಿನ ವಿರುದ್ಧ ಹೋರಾಡುವ ಮತ್ತು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಪ್ರಬಲವಾದ ಬ್ಯಾಕ್ಟೀರಿಯಾದ ಸಾಮರ್ಥ್ಯ ಹೊಂದಿವೆ. ಹೀಗಾಗಿ, ಪೇರಲೆ ಎಲೆಗಳನ್ನು ಸೇವಿಸುವುದರಿಂದ ಹಲ್ಲುನೋವಿಗೆ ಅದ್ಭುತವಾದ ಮನೆಮದ್ದಾಗಿದೆ. ಪೇರಲೆ ಎಲೆಗಳ ರಸವು ಹಲ್ಲುನೋವು, ಊದಿಕೊಂಡ ಒಸಡುಗಳು ಮತ್ತು ಬಾಯಿಯ ಹುಣ್ಣುಗಳನ್ನು ಸಹ ಗುಣಪಡಿಸುತ್ತದೆ ಎಂದು ತಿಳಿದುಬಂದಿದೆ.
ತೂಕ ಇಳಿಸಿಕೊಳ್ಳಲು ಸರ್ಕಸ್ ಮಾಡುವವರಿಗೂ ಇದು ಒಳ್ಳೆಯದು. ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಒದಗಿಸುವುದರ ಜೊತೆಗೆ ಚಯಾಪಚಯವನ್ನು ನಿಯಂತ್ರಿಸುತ್ತದೆ. ಈ ಮೂಲಕ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹಸಿವು ಹೆಚ್ಚಾದಗ ಒಂದು ಪೇರಲೆ ತಿಂದರೆ ಸಾಕು ಹಸಿವನ್ನು ಸುಲಭವಾಗಿ ನೀಗಿಸುತ್ತದೆ. ಸೇಬು, ಕಿತ್ತಳೆ, ದ್ರಾಕ್ಷಿ ಮತ್ತು ಇತರೆ ಹಣ್ಣುಗಳಿಗೆ ಹೋಲಿಸಿದರೆ ಪೇರಲೆಯಲ್ಲಿ ವಿಶೇಷವಾಗಿ ಹಸಿ ಪೇರಲೆಯಲ್ಲಿ ಕಡಿಮೆ ಸಕ್ಕರೆ ಹೊಂದಿರುತ್ತದೆ.
ಪೇರಲೆ ಹಣ್ಣಲ್ಲಿ ವಿಟಮಿನ್-ಸಿ ಮತ್ತು ಕಬ್ಬಿಣ ಅಂಶವು ಅತ್ಯಧಿಕ ಪ್ರಮಾಣದಲ್ಲಿದೆ. ಇದು ಶೀತ ಮತ್ತು ವೈರಲ್ ಸೋಂಕುಗಳ ವಿರುದ್ಧ ಹೋರಾಡುತ್ತದೆ. ಹಸಿ ಪೇರಲೆಯ ಎಲೆಗಳ ರಸ ಅಥವಾ ಕಷಾಯ ಕೆಮ್ಮು ಮತ್ತು ಶೀತ ನಿವಾರಿಸುತ್ತದೆ. ಅಲ್ಲದೆ ಎಲ್ಲಕ್ಕಿಂತ ಮಿಗಿಲಾಗಿ ಇದು ಚರ್ಮವನ್ನು ಸುಕ್ಕುಗಳಿಂದ ರಕ್ಷಿಸುತ್ತದೆ.



