ಈಕೆಯೆ ಹೆಸರು ವಿ.ಶಾಲಿನಿ. ತಮಿಳುನಾಡು ಪೊಲೀಸ್ ಡಿಪಾರ್ಟ್‍ಮೆಂಟಿನಲ್ಲೀಗ ಹೆಡ್ ಕಾನ್ಸ್‍ಸ್ಟೇಬಲ್. ವಯಸ್ಸಿನ್ನೂ 36 ವರ್ಷ. ಫಿಟ್ ನೆಸ್ ಕಡಿಮೆಯಾಗಿಲ್ಲ. ತಮಿಳುನಾಡಿನ 10ನೇ ಬೆಟಾಲಿಯನ್‍ನಲ್ಲಿರೋ ಉಲುಂದುರ್ ಪೇಟ್‍ನ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಈಕೆಯ ಕೈಲೀಗ ಇರುವುದು ಲಾಠಿ ಮಾತ್ರ. ಆದರೆ ಕೆಲವೇ ವರ್ಷಗಳ ಹಿಂದೆ ಈಕೆ ಪ್ರಧಾನಿ ನರೇಂದ್ರ ಮೋದಿಯ ರಕ್ಷಕಿಯಾಗಿದ್ದವರಲ್ಲಿ ಒಬ್ಬರು. ಪ್ರಧಾನಿಯ ಎಸ್‍ಪಿಜಿ ಗ್ರೂಪಿನಲ್ಲಿ ಬೆಂಗಾವಲು ಪಡೆಯಲ್ಲಿದ್ದ ಶಾಲಿನಿ ಕೈಲಿ ಪಿ-90 ಸಬ್-ಮೆಷಿನ್‍ಗನ್ ಇರುತ್ತಿತ್ತು. ಗಂಟೆಗೆ 900 ರೌಂಡ್ ಬುಲೆಟ್ ಸಿಡಿಸಬಲ್ಲ ಮೆಷಿನ್ ಗನ್ ಅದು. ವಿಶೇಷವಾಗಿ ಇದನ್ನು ಟೆರರ್ ಆಂಟಿ ಸ್ಕ್ವಾಡ್‍ಗಳಲ್ಲಿ ಹೆಚ್ಚು ಬಳಸುತ್ತಾರೆ. ಅದನ್ನು ಬಳಸುವುದಕ್ಕೂ ಅನುಭವ ಬೇಕು. ಸುಮಾರು 3 ಕೆಜಿ ಇರುವ ಈ ಸಬ್ ಮೆಷಿನ್‍ಗನ್ನಿನಲ್ಲಿ ಸದಾ 20 ರೌಂಡಿಗಳಿಗಾಗುವಷ್ಟು ಬುಲೆಟ್ಸ್ ಲೋಡ್ ಇರುತ್ತದೆ. ಕಾರು, ಬೈಕಿನಲ್ಲಿ ಚಲಿಸುವಾಗ ಗುರಿಯಿಟ್ಟು ಬುಲೆಟ್ ಹಾರಿಸುವುದಕ್ಕೆ ಹೇಳಿ ಮಾಡಿಸಿದ ಗನ್ ಅದು. ಸಿನಿಮಾಗಳಲ್ಲಿ ಹಾರಿ..ಎಗರಿ.. ಎಡಗೈ..ಬಲಗೈನಲ್ಲಿ ಹೊಡೆಯುತ್ತಾರಲ್ಲ. ರಿಯಲ್ ಲೈಫಿನಲ್ಲಿ ರಿಯಲ್ ಗನ್ನುಗಳು ಹಾಗೆಲ್ಲ ಕೆಲಸ ಮಾಡುವುದಿಲ್ಲ. ವಾಹನಗಳಲ್ಲಿ ಚಲಿಸುವಾಗಲೂ ಇಟ್ಟ ಗುರಿ ಮಿಸ್ ಆಗದಂತೆ ನೋಡಿಕೊಳ್ಳುವ ಮೆಷಿನ್ ಗನ್ ಇದು. ಅಂದರೆ ದೇಹ ಅಲುಗಾಡಿದರೂ ಗನ್ ಇಟ್ಟ ಸ್ಥಳ ಮಿಸುಕುವುದಿಲ್ಲ. ಅಂತಹದ್ದೊಂದು ವ್ಯವಸ್ಥೆ ಇರುತ್ತದೆ. ಅಂತಹ ಗನ್ ಹಿಡಿದಿದ್ದ ಲೇಡಿ ಫೈರ್ ಬ್ರಾಂಡ್ ಶಾಲಿನಿ, ಈಗ ಸ್ಟೇಷನ್ನಿನಲ್ಲಿ ಲಾಠಿ ಹಿಡಿದುಕೊಂಡು ನಿಂತಿರೋದ್ಯಾಕೆ?

ಶಾಲಿನಿ ತಮಿಳುನಾಡಿನಿಂದ ಪ್ರಧಾನಿ ಭದ್ರತೆಗೆ ನಿಯೋಜನೆಗೊಂಡ ಮೊದಲ ಆಫೀಸರ್. ರಾಜೀವ್ ಗಾಂಧಿ ಮತ್ತು ಎಲ್‍ಟಿಟಿಈ ಬೆಂಬಲಿಸುವವರು ಹೆಚ್ಚಿರುವ ತಮಿಳುನಾಡಿನವರನ್ನು ಪ್ರಧಾನಿ ಭದ್ರತೆಗೆ ನಿಯೋಜಿಸುವ ಸಾಹಸ, ಧೈರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿರಲಿಲ್ಲ. ಆದರೆ ಶಾಲಿನಿ ಪ್ರಧಾನಿಯವರ ಕ್ಲೋಸ್ ಪ್ರೊಟೆಕ್ಷನ್ ಟೀಂ (ಸಿಪಿಟಿ)ಗೆ ಸೇರಿದ್ಧೇ ಒಂದು ರೋಚಕ ಕಥೆ. ಸಪೆಷಲ್ ಪ್ರೊಟೆಕ್ಷನ್ ಗ್ರೂಪಿನ ಸದಸ್ಯೆಯಾಗಿದ್ದು, ಮೋದಿಯವರ ದೇಶ ವಿದೇಶ ಪ್ರವಾಸಗಳಲ್ಲಿ ಬಾಡಿಗಾರ್ಡ್ ಆಗಿದ್ದು ಒಂದು ಸ್ಪೆಷಲ್ ಸ್ಟೋರಿಯೇ ಸರಿ.
ಬಡತನದಲ್ಲೇ ಹುಟ್ಟಿ ಬೆಳೆದ ಶಾಲಿನಿ ತಮಿಳುನಾಡು ಪೊಲೀಸ್ ಪಡೆಗೆ ಸೇರಿದ್ದು 2005ರಲ್ಲಿ. ಕಾನ್ಸ್‍ಸ್ಟೇಬಲ್ ಆಗಿ. ಗಣಿತದಲ್ಲಿ ಆಸಕ್ತಿಯಿದ್ದ ಶಾಲಿನಿ, ಡ್ಯೂಟಿಯಲ್ಲಿದ್ದಾಗಲೇ ಡಿಗ್ರಿಯನ್ನೂ ಮುಗಿಸಿದರು. 2006ರಲ್ಲಿ ಪೊಲೀಸ್ ಟ್ರೈನಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಿದರು. ಆಗ ಕಂಪ್ಯೂಟರ್ ಗೊತ್ತಿದ್ದವರ ಸಂಖ್ಯೆಯೇ ಕಡಿಮೆ. ಅಲ್ಲಿಂದ ಪರೇಡ್ ಇನ್‍ಸ್ಟ್ರಕ್ಟರ್ ಆದ ಶಾಲಿನಿ ಆ ಹಾದಿಯಲ್ಲಿದ್ದಾಗಲೇ ಎಸ್‍ಪಿಜಿ ತಂಡದ ಪ್ರೊಬೆಷನರಿ ಟ್ರೈನಿಂಗ್ ಪಡೆದರು. 2013ರಲ್ಲಿ ನನ್ನ ಸೀನಿಯರ್ ಇನ್ಸ್‍ಪೆಕ್ಟರ್ ಭಕ್ತನ್ ಎಂಬುವವರು ತಮಿಳುನಾಡು ಪೊಲೀಸ್ ಅಕಾಡೆಮಿಯ ಎಸ್‍ಪಿ ನಾಗರಾಜನ್ ಎಂಬುವವರ ಬಳಿಗೆ ಕರೆದುಕೊಂಡು ಹೋದರು. ಅವರ ಮುಂದೆ ನಿಲ್ಲುವವರೆಗೂ ನನಗೂ ಗೊತ್ತಿರಲಿಲ್ಲ. ನಾನು ಎಸ್‍ಪಿಜಿಗೆ ಸೆಲೆಕ್ಟ್ ಆಗಿದ್ದೆ. ತಮಿಳುನಾಡಿನಿಂದ ನಾನೇ ಫಸ್ಟ್ ಎಂಬ ವಿಷಯವೂ ಗೊತ್ತಿರಲಿಲ್ಲ. ದೆಹಲಿಗೆ ಕಾಲಿಟ್ಟೆ. ಹಲವಾರು ಟೆಸ್ಟ್ ಮತ್ತು ಎಕ್ಸಾಮುಗಳು ನಡೆದವು. 35 ಪುರುಷ ಆಫೀಸರುಗಳ ಮಧ್ಯೆ ನಾನೊಬ್ಬಳೇ ಲೇಡಿ. ಕೊನೆಗೂ ತರಬೇತಿ ಮುಗಿಯಿತು. ಅವೆಲ್ಲ ಮುಗಿದು ಎಸ್‍ಪಿಜಿಗೆ ಅಧಿಕೃತವಾಗಿ ಸೇರುವುದಕ್ಕೆ 2 ವರ್ಷವಾಯಿತು ಎಂದು ಹಳೆಯ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಶಾಲಿನಿ.

ಮೊದಲಿಗೆ ಶಾಲಿನಿಯವರನ್ನು ಸೋನಿಯಾ ಗಾಂಧಿ ನಿವಾಸದ ಕಾವಲಿಗೆ ಹಾಕಲಾಯಿತಂತೆ. ಹಾಗೆ ವೃತ್ತಿ ನಡೆಯುತ್ತಿರುವಾಗಲೇ ಪ್ರಧಾನಿಯವರ ಎಸ್‍ಪಿಜಿ ಮತ್ತು ಸಿಪಿಟಿಗೆ ಆಯ್ಕೆಯಾದೆ. ಎಲ್ಲ ಟ್ರೈನಿಂಗ್ ಆಗಿದ್ದರೂ ಮತ್ತೆ ಪ್ರಧಾನಿ ಭದ್ರತೆಗೆ ನಿಯೋಜಿಸುವ ಮುನ್ನ ಮತ್ತೆ 5 ತಿಂಗಳು ಅತ್ಯಂತ ಕಠಿಣ ತರಬೇತಿ ನೀಡಲಾಯಿತು ಎಂದು ನೆನಪಿಸಿಕೊಳ್ಳೋ ಶಾಲಿನಿ, ಈಗ ತಮಿಳುನಾಡಿಗೆ ವಾಪಸ್ ಆಗಿದ್ಧಾರೆ. ಗನ್ ಹಿಡಿದಿದ್ದ ಕೈಲೀಗ ಕೇವಲ ಲಾಠಿ ಇದೆ.
ಅಷ್ಟು ತರಬೇತಿ ಪಡೆದಿರುವ ಶಾಲಿನಿಯವರನ್ನು ಪೊಲೀಸ್ ಇಲಾಖೆಯ ಬೇರೆ ವಿಭಾಗಕ್ಕೆ, ಕನಿಷ್ಠ ತರಬೇತಿಗಾದರೂ ಬಳಸಿಕೊಳ್ಳಬಹುದಲ್ಲ.. ಎಂದರೆ.. ಅಡ್ಡಿಯಾಗಿರುವುದು ಬ್ರಿಟಿಷರ ಕಾಲದ ಕಾನೂನುಗಳು. ಏಕೆಂದರೆ ಪ್ರಧಾನಿಯ ಸೆಕ್ಯುರಿಟಿಗೇ ಹೋಗಿದ್ದರೂ ಆಕೆ ನೇಮಕವಾಗಿದ್ದುದು ಕಾನ್ಸ್‍ಸ್ಟೇಬಲ್ ಆಗಿ. ಪೇದೆಯಾಗಿದ್ದವರಿಗೆ ಹೆಡ್ ಕಾನ್ಸ್‍ಟೇಬಲ್ ಹುದ್ದೆ ಕೊಡಬಹುದು. ಅದಕ್ಕಿಂತ ಮೇಲಿನ ಹುದ್ದೆ ಕೊಡೋಕೆ ಆಗಲ್ಲ. ಅಷ್ಟೆಲ್ಲ ಆಗಿ, ಎಸ್‍ಪಿಜಿ/ಸಿಪಿಟಿ ಟೀಂಗಳು ಹಳೆಯ ಪೊಲೀಸ್ ಡಿಪಾರ್ಟ್‍ಮೆಂಟ್ ರೂಲ್ಸ್‍ನಲ್ಲಿ ಇಲ್ಲ. ಹೀಗಾಗಿ ಅಲ್ಲಿನ ಸರ್ವೀಸ್ ಕೂಡಾ ಶಾಲಿನಿಯ ಡ್ಯೂಟಿ ಹಿಸ್ಟರಿಯ ಅಧಿಕೃತ ದಾಖಲೆಯಾಗುವುದಿಲ್ಲ. ಅನುಭವ ಹೇಳಿಕೊಳ್ಳಬಹುದಷ್ಟೆ, ದಾಖಲೆಯಲ್ಲಿ ಷೀ ಇಸ್ ಜಸ್ಟ್ ಕಾನ್ಸ್‍ಟೇಬಲ್. ಹೀಗಾಗಿ ಶಾಲಿನಿ ಕೈಲೀಗ ಕೇವಲ ಲಾಠಿ ಇದೆ.



