ಪ್ರಕಾಶ್ ರೈ/ರಾಜ್ (Prakash Raj) ಅವರ ಒಂದು ಕ್ವಾಲಿಟಿ ಏನೆಂದರೆ ಅದ್ಭುತ ನಟ. ಈ ಪ್ರಕಾಶ್ ರೈ ತಮಗೆ ಅಗತ್ಯ ಇರಲಿ, ಬಿಡಲಿ.. ಅದು ಮೋದಿ (Narendra Modi) ಅಥವಾ ಆರ್.ಎಸ್.ಎಸ್. (RSS) ವಿರುದ್ಧವಾಗಿದ್ದರಂತೂ ಕುಣಿಯುತ್ತಾ ಹೋಗಿ ಟ್ವೀಟ್ ಮಾಡ್ತಾರೆ. ಟೀಕೆಯನ್ನೇ ಮಾಡ್ತಾರೆ. ಟೀಕೆಯನ್ನು ಬಿಟ್ಟು ಮತ್ತೇನೂ ಮಾಡಲ್ಲ. ಎಷ್ಟೋ ಬಾರಿ ವಿಷಯಕ್ಕಿಂತ ಹೆಚ್ಚು ಇವರ ಟೀಕೆಯೇ ದೊಡ್ಡದಾಗಿ ಸುದ್ದಿ ಮಾಡುತ್ತೆ. ಹಾಗಂತ.. ಪ್ರಕಾಶ್ ರೈ ಏನು ಹೇಳಿದರೂ ವಿವಾದವಾಗುತ್ತಾ.. ಅಥವಾ ಅವರ ವಿವಾದಗಳನ್ನಷ್ಟೇ ಮಾತನಾಡ್ತಾರಾ.. ಗೊತ್ತಿಲ್ಲ. ಇದೀಗ ಮತ್ತೊಂದು ಹೇಳಿಕೆ ಹೊರಬಂದಿದೆ.
ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಗೌರಿನೆನಪು (Gowri Nenapu) ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಪ್ರಕಾಶ್ ರೈ (Prakash Raj), ನಾನು ಟ್ವಿಟರ್ನಲ್ಲಿ ‘ಸನಾತನಿ ಸಂಸತ್’ (Sanathani Samsath) ಎಂದು ಪೋಸ್ಟ್ ಮಾಡಿದ್ದೆ. ಅದಕ್ಕೆ, ‘ನೀನು ಸನಾತನ ಧರ್ಮ ಅಲ್ವಾ’ ಎಂದು ಒಬ್ಬ ಪ್ರಶ್ನೆ ಕೇಳಿದ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಇತ್ತೀಚೆಗೆ ತಮಿಳು ನಟ, ಮಂತ್ರಿ ಉದಯನಿಧಿ ಸ್ಟಾಲಿನ್ (udyanidhi Stalin) ಅವರ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ದೇಶಾದ್ಯಂತ ಭಾರಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅದಕ್ಕೆ ಸ್ಟಾಲಿನ್ ಅವರ ಹೇಳಿಕೆ ಬೆಂಬಲಿಸಿ ಹೇಳಿಕೆ ನೀಡಿದ್ದ ಪ್ರಕಾಶ್ ರೈ, ಇದೀಗ ಅದಕ್ಕೆ ಒಂದು ಸಮರ್ಥನೆಯನ್ನೂ ಕೊಟ್ಟಿದ್ದಾರೆ.
ನಾನು ಧರ್ಮದ ವಿರುದ್ಧ ಅಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ. ಅವರು ಸಂಸತ್ ಭವನದ ಉದ್ಘಾಟನೆ ವೇಳೆ ಹೋಮ ಹವನ ಮಾಡಿಸಿದರು. ಅದು ನಮ್ಮ ಸಂಸತ್ ಭವನ. ಅದರಲ್ಲಿ ಹೋಮ ಹವನ ಮಾಡಬಾರದು. ಯಾವುದನ್ನೂ ಸಹ ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿಯಿಂದ ಅದು ಆಗುತ್ತಿದೆ, ಅದಕ್ಕೆ ನನ್ನ ವಿರೋಧವಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಪ್ರಕಾಶ್ ರೈ ಅವರಿಗೆ ಇಸ್ರೋದವರು (ISRO)ತಿರುಪತಿಯಲ್ಲೋ.. (Thirupathi) ಮತ್ತೆಲ್ಲೋ ಪೂಜೆ ಮಾಡಿದರೆ ಅದು ಧರ್ಮವಿರೋಧಿಯಾಗಿ ಕಾಣಿಸುತ್ತದೆ. ಸಂಸತ್ ಉದ್ಘಾಟನೆ ವೇಳೆ ಹೋಮ ಮಾಡಿಸುವುದು ಸಂವಿಧಾನ ವಿರೋಧಿಯಾಗಿ ಕಾಣಿಸುತ್ತದೆ. ಆದರೆ ಅವರ ನಿಲುವಿಗೆ ಸಹಮತ ಹೊಂದಿರುವ ಪಕ್ಷದವರು ಸರ್ಕಾರದವರು ಹೋಗಿ ಪೂಜೆ ಮಾಡಿಸುವುದು ಕಾಣಿಸುವುದಿಲ್ಲ. ಸಚಿವರ ಕಚೇರಿಗಳಲ್ಲಿ ನಡೆಸುವ ಹೋಮ ಇವರ ಕಣ್ಣಿಗೂ ಬೀಳಲ್ಲ. ಯಾರೋ ಹೆಸರು ಗೊತ್ತಿಲ್ಲದ ವ್ಯಕ್ತಿಯೊಬ್ಬ ಬೇರೆ ಧರ್ಮದ ಬಗ್ಗೆ ಮಾಡುವ ಹುಚ್ಚುತನದ ಹೇಳಿಕೆಗಳು ಕಣ್ಣಿಗೆ ಬೀಳ್ತವೆ. ಆದರೆ ಹಿಂದೂ ಅಥವಾ ಹಿಂದುತ್ವವವನ್ನು ದೊಡ್ಡ ದೊಡ್ಡ ನಾಯಕರೇ ಟೀಕೆ ಮಾಡಿದರೂ, ಲೇವಡಿ ಮಾಡಿದರೂ.. ಗೊತ್ತೇ ಆಗಲ್ಲ. ಜಾಣ ಕಿವುಡು ಹಾಗೂ ಜಾಣ ಕುರುಡು ಎರಡನ್ನೂ ಪ್ರದರ್ಶನ ಮಾಡುವ ಪ್ರಕಾಶ್ ರೈ ಇದೀಗ ಹೊಸ ಹೇಳಿಕೆ ಕೊಟ್ಟಿದ್ದಾರೆ.



