ಕನ್ನಡ ಚಿತ್ರರಂಗ ಬೇರೆ ಚಿತ್ರರಂಗಗಳ ಹಾಗಲ್ಲ. ಇಲ್ಲಿ ಸ್ಟಾರ್ ಹೀರೋಗಳ ಸಂಖ್ಯೆಯೇ ಮೂರು ಮತ್ತೊಂದು. ಸಿನಿಮಾ ಓಡುವುದಕ್ಕೆ ಕಂಟೆಂಟ್ ಮುಖ್ಯ ಎಂದು ಯಾರಾದರೂ ಬಾಯಿ ಬಡಿದುಕೊಳ್ಳಲಿ.. ಚಿತ್ರ ಮಂದಿರಕ್ಕೆ ಜನರನ್ನು ಕರೆದು ತರುವುದು ಮಾತ್ರ ಸ್ಟಾರ್ ನಟರೇ. ಹಾಗೆ ಜನರು ಬಂದಾಗ.. ಬರುತ್ತಿದ್ಧಾಗ.. ಆಗ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳೂ ಗೆಲ್ಲುತ್ತವೆ.
ಸರಳವಾಗಿ ಹೇಳ್ಬೇಕಂದ್ರೆ.. ಐಪಿಎಲ್ ಉದಾಹರಣೆಯನ್ನೇ ನೋಡಿ. ಐಪಿಎಲ್ ಮ್ಯಾಚುಗಳಿಗೆ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇರುವುದು ಧೋನಿ, ಕೊಹ್ಲಿ, ರೋಹಿತ್ ಶರ್ಮಾಗೆ ಮಾತ್ರ. ಹಾಗೆ ಪ್ರೇಕ್ಷಕರು ಬಂದ ಸಮಯದಲ್ಲಿ ಮಿಂಚುವ ಆಟಗಾರರು.. ಮುಂದಿನ ಸ್ಟಾರ್ ಆಟಗಾರರಾಗುತ್ತಾರೆ. ಸಚಿನ್, ಸೆಹ್ವಾಗ್, ದ್ರಾವಿಡ್, ಗಂಗೂಲಿ ಆಟ ನೋಡಲು ಬಂದಾಗ ಬೊಂಬಾಟ್ ಆಗಿ ಆಡಿದ್ದಕ್ಕೆ.. ಸ್ಟಾರ್ ಆಟಗಾರರಾದವರು ಈ ಕೊಹ್ಲಿ, ರೋಹಿತ್, ಧೋನಿ.. ಇತ್ಯಾದಿ.. ಇತ್ಯಾದಿ.. ಈಗ ಭವಿಷ್ಯದ ಸ್ಟಾರ್ ಆಟಗಾರರು ಹುಟ್ಟಬೇಕಾದ ಸಮಯ. ಕ್ರಿಕೆಟ್ಟಿನಲ್ಲಿ ಏನೋ ಒಂದಾಗುತ್ತೆ. ಆದರೆ.. ಸಿನಮಾ ರಂಗದಲ್ಲಿ.
ಸಿನಿಮಾ ನೋಡುವುದಕ್ಕೆ ಜನ ಬರುತ್ತಿಲ್ಲ ಎನ್ನುತ್ತಿರುವ ಚಿತ್ರ ನಿರ್ಮಾಪಕರ ವಾದಗಳಲ್ಲಿ ಅತ್ಯಂತ ಪ್ರಮುಖವಾದುದು ಟಿಕೆಟ್ ದರ ಇಳಿಸುವುದು. ಪಕ್ಕದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಟಿಕೆಟ್ ದರವನ್ನು ಬೇಕಾಬಿಟ್ಟಿ ಏರಿಸುವ ಹಾಗಿಲ್ಲ. ಸಿಂಗಲ್ ಸ್ಕ್ರೀನ್ ಮತ್ತು ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಠ 200 ರೂ. ನಿರ್ಬಂಧ ಇದೆ. ಆದರೆ.. ಅದು ಕರ್ನಾಟಕದಲ್ಲಿ ಆಗುತ್ತಿಲ್ಲ.
ಕಳೆದ ಬಾರಿ ಸಿಎಂ ಆಗಿದ್ಧಾಗ ಸಿಎಂ ಸಿದ್ದರಾಮಯ್ಯ 200 ರೂ. ಕಡ್ಡಾಯ ಮಾಡುವ ಘೋಷಣೆ ಮಾಡಿದ್ದರು. ಆದರೆ.. ಇದು ಜಾರಿಗೇ ಬರಲಿಲ್ಲ. ಮಲ್ಟಿಪ್ಲೆಕ್ಸಿನವರು ಕೋರ್ಟಿಗೆ ಹೋಗಿ ತಡೆ ತಂದಿದ್ದರು. ಅದಾದ ಮೇಲೆ ಆ ಪ್ರಕರಣ ಏನಾಯ್ತು? ಸರ್ಕಾರ ಅದನ್ನು ಮತ್ತೆ ಕೋರ್ಟಿನಲ್ಲಿ ಪ್ರಶ್ನೆ ಮಾಡಿತಾ..? ತಡೆಯಾಜ್ಞೆ ತೆರವು ಮಾಡುವ ಪ್ರಯತ್ನ ಏನಾಯ್ತು..? ಇವತ್ತಿನವರೆಗೂ ಮಾಹಿತಿ ಇಲ್ಲ. ಈಗ ಮತ್ತೊಮ್ಮೆ ಸಿದ್ದರಾಮಯ್ಯ ಅಧಿಕಾರಕ್ಕೇರಿದ್ಧಾರೆ. ಈಗಲಾದರೂ.. ಸರ್ಕಾರ ಈ ವಿಷಯದಲ್ಲಿ ಕಟ್ಟಿನಿಟ್ಟಾಗಿ ಈ ನಿರ್ಧಾರ ಜಾರಿಗೆ ತರುತ್ತಾ?
ವಿಚಿತ್ರ ಕಥೆ ಗೊತ್ತಾ? ತಮಿಳು, ತೆಲುಗು ಚಿತ್ರರಂಗದ ಸ್ಟಾರ್ ಹೀರೋಗಳೆಲ್ಲ ಅವರವರ ರಾಜ್ಯದಲ್ಲಿ ತಮ್ಮ ತಮ್ಮ ಅಭಿಮಾನಿಗಳಿಗೆ ಕಡಿಮೆ ಹಣದಲ್ಲಿ ಸಿನಿಮಾ ತೋರಿಸ್ತಾರೆ. ಹೆಚ್ಚು ಜನ ನೋಡಬೇಕು ಅನ್ನೋದು ಅವರ ಪ್ಲಾನ್. ಅದನ್ನವರು ಬಹಿರಂಗವಾಗಿಯೇ ಹೇಳಿಕೊಳ್ತಾರೆ. ವಾಸ್ತವ ಏನೆಂದರೆ.. ಟಿಕೆಟ್ ದರ ಹೆಚ್ಚು ಮಾಡುವ ಅಧಿಕಾರ ಅವರಿಗೆ ಇಲ್ಲ. ಏಕೆಂದರೆ.. ಅದೇ ಸ್ಟಾರ್ ಹೀರೋಗಳ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆದಾಗ ಟಿಕೆಟ್ ದರ ಬೇಕಾಬಿಟ್ಟಿ ಏರಿಕೆಯಾಗುತ್ತದೆ. ಇದು ವಾಸ್ತವ.
ಇದು ಕನ್ನಡದ ಸ್ಟಾರ್ ಹೀರೋಗಳಿಗೂ ಅನ್ವಯವಾಗುತ್ತದೆ. ದೊಡ್ಡ ದೊಡ್ಡ ಸ್ಟಾರ್ ಹೀರೋಗಳ ಸಿನಿಮಾ ರಿಲೀಸ್ ಆದಾಗ ಟಿಕೆಟ್ ರೇಟ್ ಮಾಮೂಲಿಯಂತೆ ಇರೋದಿಲ್ಲ. ಟಿಕೆಟ್ ರೇಟ್ 100 ರೂ.ಗೆ ಮಾಡಿದಾಗ ಪ್ರೇಕ್ಷಕರು ಹೆಚ್ಚು ಹೆಚ್ಚು ಬಂದ ಉದಾಹರಣೆಗಳಿದ್ದರೂ.. ಚಿತ್ರ ನಿರ್ಮಾಪಕ ಹಾಗೂ ಮಾಲೀಕರಿಗೆ ಅರ್ಜೆಂಟ್ ಆಗಿ ದುಡ್ಡು ಮಾಡುವ ಆಸೆ.
ವಾಸ್ತವದಲ್ಲಿ ಥಿಯೇಟರುಗಳಿಗೆ ಹೋಗಿ ಸಿನಿಮಾ ನೋಡುವುದು ಈಗ ಲಕ್ಷುರಿಯಾಗಿ ಹೋಗಿದೆ. ಈ ಹಿಂದೆ ವಾರಕ್ಕೊಂದು ಸಿನಿಮಾ ನೋಡುತ್ತಿದ್ದವರೂ ಕೂಡಾ.. ದುಬಾರಿ ಟಿಕೆಟ್ ದರಕ್ಕೆ ಹೆದರಿ ಸಿನಿಮಾ ನೋಡುವುದನ್ನೇ ಬಿಟ್ಟಿದ್ಧಾರೆ. ವಾರಕ್ಕೊಂದು ಸಿನಿಮಾ ನೋಡುವ ಸಂಪ್ರದಾಯವೇ ಈಗ ಮಾಯವಾಗಿ ಹೋಗಿದೆ. ಇನ್ನು ಸಿನಿಮಾ ನೋಡಲು ಹೋದವರು ನೀರು, ಕೂಲ್ ಡ್ರಿಂಕ್ಸ್, ಪಾಪ್ ಕಾರ್ನ್, ಚಿಪ್ಸ್, ಬಿಸ್ಕೆಟ್, ಸಮೋಸಾ.. ಇತ್ಯಾದಿ ಖರೀದಿಸುವುದಕ್ಕೆ ದುಬಾರಿ ದರ ಕೊಡಬೇಕು. ಥಿಯೇಟರಿಂದ ಕೇವಲ ಎರಡು ಹೆಜ್ಜೆ ಹೊರಗೆ 10 ರೂ.ಗೆ ಸಿಗುವ ನೀರಿನ ಬಾಟಲ್, ಥಿಯೇಟರ್ ಒಳಗೆ 30ರಿಂದ 50 ರೂ. ಇರುತ್ತದೆ. ಪಾಪ್ ಕಾರ್ನ್ ದರದಲ್ಲಿ ಸಣ್ಣ ಕುಟುಂಬವೊಂದು ಒಂದು ಹೊತ್ತಿನ ಊಟವನ್ನೇ ಮಾಡಬಹುದು. ಏನನ್ನೂ ತಿನ್ನದೆ ಬರೋಣ ಎಂದುಕೊಂಡರೆ.. ಅದು ಮರ್ಯಾದೆ ಪ್ರಶ್ನೆ.
ಸಣ್ಣ ಕುಟುಂಬವೊಂದು ಥಿಯೇಟರಿಗೆ ಕುಟುಂಬ ಸಮೇತ ಹೋದರೆ.. ಏನೇ ಹಿಡಿತ ಮಾಡಿ ಖರ್ಚು ಮಾಡಿದರೂ.. 2 ಸಾವಿರ ರೂ. ಬೇಕು. ಆ ಎರಡು ಸಾವಿರದಲ್ಲಿ ಐದಾರು ಓಟಿಟಿಗೆ ಸಬ್ʻಸ್ಕ್ರೈಬ್ ಆಗಬಹುದು. ಒಮ್ಮೆ ಸಬ್ʻಸ್ಕ್ರೈಬ್ ಆದರೆ, ಕನಿಷ್ಠ ಒಂದು ತಿಂಗಳು ಮನೆ ಸಿನಿಮಾಗಳ ಲೈಬ್ರರಿಯಂತಿರುತ್ತದೆ. ಬೇಕಾದ ಸಿನಿಮಾವನ್ನು ಬೇಕಾದಾಗ ನೋಡಬಹುದು. ಒಂದೊಳ್ಳೆ ಸ್ಮಾರ್ಟ್ ಟಿವಿ ಬೇಕಷ್ಟೆ.
ಇಷ್ಟೆಲ್ಲ ಲಕ್ಷುರಿ ಮನೆಯಲ್ಲಿ ಸಿಗುವಾಗ.. ʻಲೂಟಿ ಮಾಡಿಸಿಕೊಳ್ಳೋಕೆʼ ಜನ ಯಾಕೆ ಥಿಯೇಟರಿಗೆ ಬರಬೇಕು..?



