ಇಲ್ಲಿ ಎಷ್ಟು ಅಸ್ಥಿಪಂಜರಗಳು ಸಿಕ್ಕಿವೆ..
೧೦೬..
ಎಲ್ಲರೂ ಒಂದೇ ಕಡೆ ಸತ್ತಿದ್ದು ಹೇಗೆ?
ಪೊಲೀಸರ ಪ್ರಕಾರ ಏನೋ ರೋಗ ಬಂದೋ.. ಸತ್ತಿರಬೇಕು. ಒಟ್ಟಿಗೇ ಹೂಳಿರಬೇಕು. ಆದರೆ ಫೊರೆನ್ಸಿಕ್ ತಜ್ಞರ ಪ್ರಕಾರ ಒಬ್ಬೊಬ್ಬರ ಕೈ ಮೂಳೆ, ನರ, ಕಾಲು, ಮೂಳೆಗಳೆಲ್ಲ ಕಟ್ ಆಗಿವೆ. ಇದು ರೋಗದಿಂದ ಆದ ಸಾವಲ್ಲ, ಇವೆಲ್ಲವೂ ಕೊಲೆಗಳು. ಪೊಲೀಸರ ವಾದ ಒಪ್ಪದೆ ಪ್ರಕರಣದ ಬೆನ್ನು ಹತ್ತುವ ರೀನಾ ಡಿಸೋಜಾ ಅವರಿಂದಲೇ ಕಾಟೇರನ ಕಥೆ ಓಪನ್ ಆಗುತ್ತದೆ.
ಕಾಟೇರ ಶುರುವಾಗುವುದೇ ಈಕೆಯ ಪಾತ್ರದಿಂದ. ಕಾಟೇರನ ಇಡೀ ಕಥೆಯ ನಿರೂಪಣೆ ಶುರುವಾಗುವುದು, ಕಾಟೇರನ ಬಗ್ಗೆ ಕುತೂಹಲ ಹುಟ್ಟುವುದು ಅಷ್ಟೇ ಅಲ್ಲ, ಕಾಟೇರನನ್ನು ಒಂದು ಹಂತಕ್ಕೆ ರಕ್ಷಣೆ ಮಾಡುವುದು ಹಾಗೂ ಕ್ಲೈಮಾಕ್ಸ್ʻಗೆ ಮುನ್ನುಡಿ ಬರೆಯುವುದು ಕೂಡಾ ಈಕೆಯೇ. ಪಾತ್ರದ ಹೆಸರು ರೀನಾ ಡಿಸೋಜಾ. ಫೊರೆನ್ಸಿಕ್ ಎಕ್ಸ್ʻಪರ್ಟ್. ಬುಸುಬುಸನೆ ಸಿಗರೇಟು ಸೇದುತ್ತಾ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳೋ ಈಕೆ, ಶ್ವೇತಾ ಪ್ರಸಾದ್. ರಾಧಾ ರಮಣ, ಶ್ರೀರಸ್ತು ಶುಭಮುಸ್ತು ಧಾರಾವಾಹಿಯಲ್ಲಿ ನಟಿಸಿ ಖ್ಯಾತರಾದವರು. ಕಳ್ ಬೆಟ್ಟದ ದರೋಡೆಕೋರರು ಚಿತ್ರದಲ್ಲಿ ನಟಿಸಿರುವ ಶ್ವೇತಾ ಪ್ರಸಾದ್ ಅವರಿಗೆ ಕಾಟೇರ ಸ್ಟಾರ್ ಪಟ್ಟ ತಂದು ಕೊಟ್ಟಿದೆ.
ಸಿನಿಮಾ ರಿಲೀಸ್ ಆಗೋವರೆಗೆ ನಾನು ನನ್ನ ಪಾತ್ರದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳೋ ಹಾಗೆ ಇರಲಿಲ್ಲ. ಏಕೆಂದರೆ ನನ್ನ ಮೂಲಕವೇ ಇಡೀ ಕಥೆ ತೆರೆದುಕೊಳ್ಳುತ್ತೆ. ಹೀಗಾಗಿಯೇ ಪ್ರಮೋಷನ್ನಿಗೆ ಕೆಲವೇ ದಿನ ಇರುವಾಗ ಪ್ರಮೋಷನ್ನಿನಲ್ಲಿ ಕಾಣಿಸ್ಕೊಂಡಿದ್ದೆ ಎನ್ನುವ ಶ್ವೇತಾ ಪ್ರಸಾದ್ ಅವರಿಗೆ ದರ್ಶನ್ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ರೆ ಯಾವ ರೀತಿಯ ಜನಪ್ರಿಯತೆ ಸಿಗುತ್ತೆ ಅನ್ನೋದು ಗೊತ್ತಾಗಿದೆ ಎಂದು ಹೇಳಿಕೊಂಡಿದ್ದಾರೆ.
ರೀನಾ ಡಿಸೋಜಾ ಪಾತ್ರಕ್ಕೆ ಯಾವುದೇ ಆಡಿಶನ್‌ಗಳನ್ನು ಮಾಡ್ಲಿಲ್ಲ. ಆದ್ರೆ ತರುಣ್ ಸುಧೀರ್ ಅವರು ನನ್ನನ್ನು ಭೇಟಿ ಮಾಡಿ ಪಾತ್ರದ ಬಗ್ಗೆ ಸವಿವರವಾಗಿ ಹೇಳಿದರು. ಮಾತ್ರವಲ್ಲ ಅವರು ನನ್ನ ಬಳಿ ಕೇಳಿದ ಮೊದಲ ಪ್ರಶ್ನೆ ಅಂದ್ರೆ ನೀವು ಸ್ಮೋಕ್ ಮಾಡ್ತೀರಾ ಅಂತ. ನಾನು ಮಾಡಲ್ಲ ಅಂತ ಹೇಳಿದೆ. ಅದಕ್ಕೆ ತರುಣ್ ಅವರು ಇದು ತುಂಬಾ ಬೋಲ್ಡ್ ಸೀನ್. ಸ್ಮೋಕಿಂಗ್ ಇರುತ್ತೆ ಅಂತ ಹೇಳಿದ್ರು. ಪಾತ್ರಕಲ್ವಾ, ನಾನು ಕಲಿತೀನಿ ಅಂತ ಹೇಳ್ದೆ ಎಂದು ಹೇಳಿದ್ದ ಶ್ವೇತಾಗೆ ಬಾಯಿಗೆ ಹೊಗೆ ಎಳೆದುಕೊಂಡು ಉಫ್ ಅಂತಾ ಬಿಡ್ತಿದ್ದರಂತೆ. ಆದರೆ ಮೊದಲ ದಿನವೇ ಸ್ಮೋಕ್ ಮಾಡೋದಂದ್ರೆ ಬರೀ ಉಫ್ ಅಂದಂಗಲ್ಲ ಅನ್ನೋದು ಗೊತ್ತಾಯ್ತು. ಅಮೇಲೆ ಮತ್ತೆ ೧೫ ದಿನ ಗ್ಯಾಪ್ ಇತ್ತು. ಅಷ್ಟರಲ್ಲಿ ಪ್ರಾಕ್ಟೀಸ್ ಮಾಡಿದೆ ಅನ್ನೋ ಶ್ವೇತಾ ಪ್ರಸಾದ್ ನಿರ್ದೇಶಕ ತರುಣ್ ಸುಧೀರ್, ಕ್ಯಾಮೆರಾಮನ್ ಸುಧಾಕರ್ ಅವರನ್ನು ಹೊಗಳಿದ್ದಾರೆ.
ಒಟ್ಟಿನಲ್ಲಿ ಕಿರುತೆರೆಯ ಶ್ರೀರಸ್ತು ಶುಭಮಸ್ತು, ರಾಧಾ ರಮಣ ಖ್ಯಾತಿಯನ್ನೂ ಮೀರಿಸುವಂತೆ ಕಾಟೇರ ಯಶಸ್ಸು ಹಾಗೂ ಜನಪ್ರಿಯತೆ ತಂದುಕೊಟ್ಟಿದೆ. ಇಡೀ ಚಿತ್ರದಲ್ಲಿ ಶ್ವೇತಾ ಪ್ರಸಾದ್ ಅವರು ತೆರೆಯ ಮೇಲೆ ಕಾಣಿಸುವುದು ಸುಮಾರು ೨೦ ನಿಮಿಷ ಮಾತ್ರ.



