ದರ್ಶನ್ ಪಾಲಿನ ಅತಿ ದೊಡ್ಡ ಶಕ್ತಿ ಯಾವುದು..? ಫ್ಯಾನ್ಸ್.
ದರ್ಶನ್ ಪಾಲಿಗ ಅತಿ ದೊಡ್ಡ ದೌರ್ಬಲ್ಯ ಯಾವುದು? ಫ್ಯಾನ್ಸ್
ದರ್ಶನ್ ಅವರು ಕನ್ನಡದಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ನಟ. ಆತನ ಲಂಗು ಲಗಾಮಿಲ್ಲದ ಮಾತು, ಹೆಂಡತಿ ಬಿಟ್ಟು ಇನ್ನೊಬ್ಬರ ಜೊತೆ ಅಫೇರ್, ಹೆಂಡತಿಗೆ ಕೆಟ್ಟಾಕೊಳಕ ಬೈಗುಳ, ಕುಡಿತ, ಚಿತ್ರರಂಗದ ಇತರೆ ಎಲ್ಲ ನಟರ ಜೊತೆ ಕಿತ್ತಾಟ, ಹೊಡೆದಾಟ, ಕೊನೆಗೆ ಕೊಲೆ ಆರೋಪ ಹೊತ್ತಿದ್ದರೂ.. ದರ್ಶನ್ ಫ್ಯಾನ್ಸ್ ಸಂಖ್ಯೆ ಕುಗ್ಗಿಲ್ಲ. ಆದರೆ.. ಇದೇ ದರ್ಶನ್ ಪಾಲಿಗೆ ವಿಲನ್ ಕೂಡಾ ಆಗಿದೆ.
ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ. ಅಭಿಮಾನಿಗಳು ಎಂದಿನಂತೆ ಹುಚ್ಚಾಟ ಮುಂದುವರೆಸಿದ್ದಾರೆ. ಇದೇ ವೇಳೆ ಕೆಲವು ನಿರ್ಮಾಪಕರು, ವಿತರಕರು ದರ್ಶನ್ರ ಹಳೆಯ ಸಿನಿಮಾಗಳನ್ನು ಮರು ಬಿಡುಗಡೆ ಮಾಡುತ್ತಾ ದರ್ಶನ್ ಕ್ರೇಜ್ ಲಾಭವನ್ನೂ ಪಡೆಯುತ್ತಿದ್ದಾರೆ. ಆದರೆ ಕೆಲವು ಅಭಿಮಾನಿಗಳ ಹುಚ್ಚಾಟ ಕರಿಯ ಪ್ರದರ್ಶನಕ್ಕೆ ಬ್ರೇಕ್ ಹಾಕುವಂತೆ ಮಾಡಿದೆ.
ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ ‘ಕರಿಯ’ ಸಿನಿಮಾದ ಮರು ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು, ದರ್ಶನ್ ಅವರ ಆರೋಪಿ ಸಂಖ್ಯೆ ಹೊಂದಿರುವ ಕಟೌಟ್, ಬ್ಯಾನರುಗಳನ್ನು ಚಿತ್ರಮಂದಿರದ ಹೊರಗೆ ಹಾಕಿದ್ದಾರೆ. ಅದರ ಜೊತೆಗೆ ದರ್ಶನ್, ಜೈಲಿನಲ್ಲಿ ಸಿಗರೇಟು ಸೇದುತ್ತಾ ಕೂತಿದ್ದ ಪೋಸ್ಟರ್ ಕೂಡಾ ಹಾಕಿದ್ದಾರೆ. ಮಾಧ್ಯಮಗಳ ಮೇಲಿನ ಸಿಟ್ಟಿನಿಂದ ದರ್ಶನ್ ಹೇಳಿದ್ದ ‘ಏನ್ರಿ ಮೀಡಿಯಾ’ ಎಂಬ ಕಟೌಟ್ ಅನ್ನೂ ಸಹ ಹಾಕಿ, ಮೀಡಿಯಾ ವಿರುದ್ಧ ಹಾಗೂ ಕೆಲವು ನಟರ ವಿರುದ್ಧ ಘೋಷಣೆ ಕೂಗಿದ್ದಾರೆ.
ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸರು ಮೊದಲಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಶಾಂತ ರೀತಿಯಲ್ಲಿ ವರ್ತಿಸಿ, ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದು ಮನವಿಯನ್ನೂ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಹಿಗ್ಗಾ-ಮುಗ್ಗ ಬೈದು, ನಿಮ್ಮಂತಹವರಿಂದಲೇ ದರ್ಶನ್ಗೂ ಕೆಟ್ಟ ಹೆಸರು ಎಂದು ಬುದ್ದಿವಾದ ಹೇಳಿದ್ದಾರೆ. ಕೆಲವು ಅಭಿಮಾನಿಗಳಿಂದ ಕ್ಷಮೆಯನ್ನೂ ಕೇಳಿಸಿದ್ದಾರೆ.
ಪೊಲೀಸರು ಅತ್ತ ಹೋಗುತ್ತಲೇ ಮತ್ತೆ ಪುಂಡಾಟ ಶುರು ಹಚ್ಚಿಕೊಂಡಿದ್ದಾರೆ ಫ್ಯಾನ್ಸ್. ವಿಷಯ ತಿಳಿದ ಪೊಲೀಸರು ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದ್ದಂತೆ ಕೆಲ ಅಭಿಮಾನಿಗಳು ಪರಾರಿಯಾಗಿದ್ದಾರೆ. ಕೆಲವರು ಒಳಗೆ ಬಾಗಿಲು ಹಾಕಿಕೊಂಡಿದ್ದಾರೆ. ಕೈಗೆ ಸಿಕ್ಕ ಕೆಲವು ಅಭಿಮಾನಿಗಳನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಗಲಾಟೆ ಮಾಡುತ್ತಿದ್ದ ಇನ್ನು ಕೆಲವು ಅಭಿಮಾನಿಗಳಿಗೆ ಲಾಠಿ ರುಚಿ ತೋರಿಸಿ ಓಡಿಸಿದ್ದಾರೆ. ಕೊನೆಗೆ ಚಿತ್ರಮಂದಿರದಲ್ಲಿ ನಡೆಯುತ್ತಿದ್ದ ಸೆಕೆಂಡ್ ಶೋ ಪ್ರದರ್ಶನವನ್ನೇ ರದ್ದು ಮಾಡಿದ್ದಾರೆ.
ಇದು ಬೆಂಗಳೂರಿನ ಪ್ರಸನ್ನ ಥಿಯೇಟರಿನಲ್ಲಿ ಕರಿಯ ಚಿತ್ರದ ಶೋ ಕಥೆಯಾದರೆ, ಬಳ್ಳಾರಿಯಲ್ಲಿ ಶಾಸ್ತ್ರಿ ಚಿತ್ರವನ್ನ ರಿ ರಿಲೀಸ್ ಮಾಡಲಾಗಿತ್ತು. ಚಿತ್ರವನ್ನು ನೋಡುವುದಕ್ಕೆ ಬಂದಿದ್ದು ಕೇವಲ 13 ಪ್ರೇಕ್ಷಕರು. ಹೀಗಾಗಿ ಮಧ್ಯಾಹ್ನದ ಹೊತ್ತಿಗೆ ಶಾಸ್ತ್ರಿ ಚಿತ್ರವನ್ನು ಎತ್ತಂಗಡಿ ಮಾಡಲಾಯಿತು. ಹೌದು, ದರ್ಶನ್ ಬಳ್ಳಾರಿಗೆ ಬಂದಾಯ್ತು, ಹವಾ ಜೋರಾಗಿಯೇ ಇರುತ್ತೆ ಎಂದು ಹಾಕಿದ್ದ ಶಾಸ್ತ್ರಿ ಚಿತ್ರಕ್ಕೆ ಮಿನಿಮಮ್ ಕಲೆಕ್ಷನ್ ಕೂಡಾ ಆಗದೆ, ಚಿತ್ರದ ಶೋ ಅನ್ನೇ ಕ್ಯಾನ್ಸಲ್ ಮಾಡಲಾಗಿದೆ.
ಇದೆಲ್ಲ ಚಿತ್ರಗಳ ಮಾತಾಯ್ತು. ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಜೈಲು ಸೇರಿರುವ ಪ್ರಕರಣದಲ್ಲಿ ಪೊಲೀಸರು ದರ್ಶನ್ ಅವರ ಈ ಅಭಿಮಾನಿಗಳ ಸೈನ್ಯದ ಮೇಲೆಯೇ ಅನುಮಾನ ಪಟ್ಟಿದ್ದಾರೆ. ಅದಕ್ಕೆ ತಕ್ಕಂತೆ ದರ್ಶನ್ ಫ್ಯಾನ್ಸ್ ಕೂಡಾ ವರ್ತಿಸಿದ್ದಾರೆ. ಇದೆಲ್ಲವೂ ದರ್ಶನ್ ಅವರಿಗೆ ಜಾಮೀನು ಕೊಡುವುದಕ್ಕೆ ಅಡ್ಡಿಯಾಗುವ ಆತಂಕವಂತೂ ಇದೆ. ಅಭಿಮಾನಿಗಳು.. ದರ್ಶನ್ ಪಾಲಿಗೆ ನಿಜವಾದ ವಿಲನ್ ಆಗುತ್ತಿದ್ದಾರೆ.



