ʻಕೃಷ್ಣಂ ಪ್ರಣಯ ಸಖಿ’ ಆದ್ಮೇಲೆ ಇನ್ನೊಂದ್ ಲವ್ ರೊಮ್ಯಾಂಟಿಕ್ ಸಿನಿಮಾವನ್ನೇ ಮಾಡ್ತಾರೆ ಅನ್ನೋ ನಂಬಿಕೆಗಳನ್ನೆಲ್ಲ ಬ್ರೇಕ್ ಮಾಡಿ, ಹ್ರಾಂ..ಕ್ರೀಂ..ಫಟ್ ಅವತಾರ ಎತ್ತಿದ್ಧಾರೆ. ಗಣೇಶ್ ನಟಿಸ್ತಾ ಇರೋ ಹಾರರ್ ಸಸ್ಪೆನ್ಸ್ ಥ್ರಿಲ್ಲರ್, ಕ್ಷುದ್ರ ಕಥೆಯು ಟೈಟಲ್ ಪಿನಾಕ. ಈ ಪಿನಾಕದಲ್ಲಿ ಗಣೇಶ್ ಮಾಟಗಾರನೋ.. ಅಘೋರಿಯೋ.. ಗೊತ್ತಾಗ್ತಾ ಇಲ್ಲ. ಗೋಲ್ಡನ್ ಸ್ಟಾರ್ ಅಂದ್ರೆ ಲವ್.. ಕಾಮಿಡಿ.. ರೊಮ್ಯಾನ್ಸ್.. ನಗು.. ಅಂತಾ ಗಣೇಶ್ ಇದ್ದಕ್ಕಿದ್ದಂತೆ ಅವತಾರ ಬದಲಿಸಿದ್ದಾರೆ. ಆದರೆ ಇದೇ ವೇಳೆ ಗಣೇಶ್ ಒಂದು ಮಾತು ಹೇಳಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ವಿಲನ್ ಆಗಿ.
ಉದ್ದುದ್ದ ಕೂದಲು, ಕುರುಚಲು ಗಡ್ಡ, ಬಣ್ಣಗಟ್ಟಿದ ಹಲ್ಲು, ಮುಖದಲ್ಲೊಂದು ಕ್ರೌರ್ಯ, ಗರಗರ ಗಗ್ಗರ ಧ್ವನಿ, ತಲೆಬುರುಡೆ- ಅಸ್ಥಿಪಂಜರಗಳ ಸಿಂಹಾಸನ, ಕೈಯಲ್ಲೊಂದು ಮಂತ್ರದಂಡ.. ಇದು ಗಣೇಶ್ ರೂಪ. ಪಿನಾಕ ಎಂದರೆ ತ್ರಿಶೂಲ, ಶಿವನ ಬಿಲ್ಲು ಅನ್ನೋ ಅರ್ಥನೂ ಇದೆ. ಹೀಗಾಗಿನೇ ಭಾರತ ಸರ್ಕಾರ ಇತ್ತೀಚೆಗೆ ನಿರ್ಮಿಸಿರುವ ಸ್ವದೇಶಿ ನಿರ್ಮಿತ ರಾಕೆಟ್ ಲಾಂಚರ್ʻಗೆ ಪಿನಾಕ ಅಂತಾ ಹೆಸರಿಟ್ಟಿದೆ. ಅದೆಲ್ಲ ಒಂದ್ ಕಥೆ ಆದ್ರೆ, ಗಣೇಶ್ ವಿಲನ್ ಆಗಿರುವುದು ಇನ್ನೊಂದು ಕಥೆ. ಗಣೇಶ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ವಿಲನ್ ಪಾತ್ರದ ಮೂಲಕ. ಹೌದು, ಗಣೇಶ್ ಅಭಿನಯದ ಮೊದಲ ಸಿನಿಮಾ ಠಪೋರಿ.
ಆ ಠಪೋರಿ ಚಿತ್ರಕ್ಕೆ ಹೀರೋ ಆಗಿದ್ದವರು ಹಂಸಲೇಖ ಅವರ ಪುತ್ರ ಅಲಂಕಾರ್. ಹೀರೋಯಿನ್ ಪ್ರೇಮಾ. ಬಿ.ಸುರೇಶ್ ಅವರು ಆಕ್ಷನ್ ಕಟ್ ಹೇಳಿದ್ದ ಸಿನಿಮಾ ಅದು. ಅದೇ ಬಿ ಸುರೇಶ್ ಅವರ ಜೊತೆ ಗಣೇಶ್ ಮುಂದೊಂದು ದಿನ ಸಕ್ಕರೆ ಅನ್ನೋ ಸಿನಿಮಾಗೆ ಹೀರೋ ಆದ್ರು. ಆದರೆ ಗಣೇಶ್ ವಿಲನ್ ಆಗಿದ್ದ ಠಪೋರಿ ಸಿನಿಮಾ, ಅಟ್ಟರ್ ಫ್ಲಾಪ್ ಆಗಿತ್ತು. ಹಾಗೆ ನೋಡಿದರೆ ಬಿ.ಸುರೇಶ್ ಅವರದ್ದೇ ನಿರ್ಮಾಣದ ಸಕ್ಕರೆ ಕೂಡಾ ಅಟ್ಟರ್ ಫ್ಲಾಪ್ ಚಿತ್ರವೇ.
ಅದಾದ್ಮೇಲೆ ಗಣೇಶ್ ಅವರು ಬೆಳೆದರು ಅನ್ನೋದು ಕರ್ನಾಟಕಕ್ಕೆ ಗೊತ್ತು. ಮುಂಗಾರು ಮಳೆ ನಂತರ ಗಣೇಶ್, ಗೋಲ್ಡನ್ ಸ್ಟಾರ್ ಆದರು. ಆದರೆ ಗಣೇಶ್ ಇದುವರೆಗೆ ಮಾಡಿದ್ದೆಲ್ಲ ಕಾಮಿಡಿ ರೋಲ್‌ಗಳೇ. ಗಣೇಶ್ ಅವರು ಆ ಠಪೋರಿ ಚಿತ್ರ ಆದ್ಮೇಲೆ ವೆರೈಟಿ ಪಾತ್ರಗಳನ್ನ ಟ್ರೈ ಮಾಡಿದ್ದಾರೇನೋ ಹೌದು, ಆದರೆ ಲವ್ವರ್ ಬಾಯ್ ಆಗಿ ಸಿಕ್ಕಿರೋ ಸಕ್ಸಸ್ ಬೇರೆ ಪಾತ್ರಗಳಲ್ಲಿ ಸಿಕ್ಕಿಲ್ಲ. ಅಂತಹ ಗಣೇಶ್ ಇದೀಗ ಅಘೋರಿಯೋ.. ಮಂತ್ರವಾದಿಯೋ.. ಗೊತ್ತಾಗದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಇತಿಹಾಸ ಕೆದಕಿದರೆ, ಮಂತ್ರವಾದಿಯಾಗಿ ನಟಿಸಿದ ನಾಯಕ ನಟ ಡಾ.ರಾಜ್ ಕುಮಾರ್ ಮಾತ್ರ. ಅದೂ ಸತಿಶಕ್ತಿ ಚಿತ್ರದಲ್ಲಿ. ಕಚಟತಪ.. ಗಜಡದಬ.. ಮಂತ್ರಗಳನ್ನು ಹೇಳುವ ಮಂತ್ರವಾದಿಯನ್ನು ಜನ ಮರೆಯೋಕೆ ಸಾಧ್ಯವೇ ಇಲ್ಲ. ಒಬ್ಬ ನಾಯಕ ನಟನಾಗಿ ಗಣೇಶ್ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದಾರೆ. ಆ ಪ್ರಯತ್ನ ಸಕ್ಸಸ್ಸಾಗಲಿ. ಪಿನಾಕ ವಿಜೃಂಭಿಸಲಿ.



