ಬದಲಾಗ್ತಾರೆ ಮಂತ್ರಿಗಳು.. ಬದಲಾಗುತ್ತೆ ಶೈಲಿ. ಟಾರ್ಗೆಟ್ ಮಾತ್ರ ಒಂದೇ.. 20+ ಲೋಕಸಭೆ (Lokasabhe) ಗೆಲುವು. ಏಕೆಂದರೆ ಆ ಘೋಷಣೆಯನ್ನು ಹೇಳುತ್ತಿರುವುದು ಡಿಕೆ ಶಿವಕುಮಾರ್ (DK Shivakumar). ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದ ಡಿಕೆ, 135 ಸೀಟು ಗೆದ್ದು ತೋರಿಸಿದರು. ಆಮೇಲೆ ಅದು 136 ಸೀಟುಗಳಾಗಿಯೇ ಪರಿವರ್ತನೆಯಾಗಿದ್ದು ಇತಿಹಾಸ. ಈಗ ಡಿಕೆ ಶಿ ಕುಮಾರ್ ಕನಿಷ್ಠ 20 ಸ್ಥಾನ ಗೆಲ್ಲೋ ಪ್ರತಿಜ್ಞೆ ಮಾಡಿದ್ದಾರೆ.
2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸೋಲುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಲೋಕಸಭೆ (Lokasabhe) ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ಗ್ಯಾರಂಟಿ ಯೋಜನೆಗಳ (Gurarantee Scheme) ಯಶಸ್ಸನ್ನು ಜನರಿಗೆ ತಲುಪಿಸುವ ಮೂಲಕ ಸ್ಥಳೀಯ ಸಂಸ್ಥೆಗಳು, ಪಾಲಿಕೆ, ಪಂಚಾಯ್ತಿಗಳಲ್ಲೂ ಗೆಲುವು ಸಾಧಿಸಬೇಕು ಎಂದು ಕರೆ ಕೊಟ್ಟಿದ್ದಾರೆ ಡಿಕೆ ಶಿವಕುಮಾರ್.
ಇಂದಿರಾಗಾಂಧಿ ಭವನದಲ್ಲಿನ ಭಾರತ್ ಜೋಡೋ (Bharath Jodo) ಸಭಾಂಗಣದಲ್ಲಿ ನಡೆದ ಕೆಪಿಸಿಸಿ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಮ್ಮ ಮುಂದೆ ಕೇವಲ 2024ರ ಲೋಕಸಭೆ ಚುನಾವಣೆ ಜತೆಗೆ 2028ರ ವಿಧಾನಸಭೆ ಚುನಾವಣೆ ಗುರಿಯೂ ಇದೆ. ಜಿಲ್ಲಾ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆಗೂ ಸಿದ್ಧತೆ ನಡೆಸಬೇಕು. ನ್ಯಾಯಾಲಯದಿಂದ ಅನುಮತಿ ಸಿಕ್ಕಿದರೆ ಇವೆಲ್ಲ ಚುನಾವಣೆ ನಡೆಸಲೂ ಸಿದ್ಧವಾಗಿದ್ದೇವೆ. ಹೀಗಾಗಿ ಕಾರ್ಯಕರ್ತರೂ ಸನ್ನದ್ಧರಾಗಬೇಕು. ಈ ನಿಟ್ಟಿನಲ್ಲಿ ಪಕ್ಷಕ್ಕೆ ದುಡಿಯದ ಸಚಿವರು, ಕೆಪಿಸಿಸಿ ಪದಾಧಿಕಾರಿಗಳನ್ನು ಬದಲಿಸುತ್ತೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾತನಾಡಿ, ‘34 ವರ್ಷಗಳ ಬಳಿಕ ದೊರೆತಿರುವ ಅಭೂತಪೂರ್ವ ಗೆಲುವನ್ನು ಕಾರ್ಯಕರ್ತರಿಗೆ ಅರ್ಪಿಸುತ್ತೇವೆ. ರಾಜ್ಯಾದ್ಯಂತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸಿದ ಕ್ಷೇತ್ರಗಳನ್ನೆಲ್ಲಾ ಬಿಜೆಪಿ ಸೋತಿದೆ. ರಾಹುಲ್ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ ಕ್ಷೇತ್ರಗಳನ್ನೆಲ್ಲಾ ಕಾಂಗ್ರೆಸ್ ಗೆದ್ದಿದೆ. ಇದು ಕೇಂದ್ರದಲ್ಲಿ ಬಿಜೆಪಿಯ ಭವಿಷ್ಯವನ್ನು ತಿಳಿಸುತ್ತದೆ’ ಎಂದರು.
ಇದೇ ವೇಳೆ ಸಚಿವ ಮುನಿಯಪ್ಪ ಅವರು ಎರಡೂವರೆ ವರ್ಷದ ನಂತರ ಹಿರಿಯ ಸಚಿವರ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಕೊಡಬೇಕು. ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆಯಬೇಕು ಎನ್ನುವ ಮೂಲಕ ಶಾಸಕರಲ್ಲಿ ಆಶಾ ಭಾವನೆ, ಆಸೆ ಹೆಚ್ಚಿಸಿದ್ದಾರೆ. ಮುನಿಯಪ್ಪ ಹಿರಿಯ ನಾಯಕರಾದರೂ, ಕೇಂದ್ರದಲ್ಲಿ ಸಚಿವರಾಗಿದ್ದವರಾದರೂ..ರಾಜ್ಯದ ಮಟ್ಟಿಗೆ ಹೊಸ ಸಚಿವರೇ.
ಇದೆಲ್ಲದರ ಮಧ್ಯೆ ಪಕ್ಷದ ಪುನಃಶ್ಚೇತನಕ್ಕೆ, ಹೊಸ ಶಕ್ತಿ ನೀಡಲು ಡಿಕೆ ಮುಂದಾಗಿದ್ದಾರೆ. ಪ್ರತಿ ಬ್ಲಾಕ್ನಲ್ಲಿ ಪಕ್ಷದ ಕಚೇರಿ ಇರಲೇಬೇಕು ಎಂದು ಸೂಚಿಸಿದ್ದೇನೆ. ನೀವು ಜಮೀನು ಖರೀದಿಸುತ್ತೀರೋ ಏನು ಮಾಡುತ್ತೀರೋ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲೇಬೇಕು. ಮುಖ್ಯಮಂತ್ರಿಗಳು, ಸಚಿವರು ಯಾವುದೇ ಜಿಲ್ಲಾ ಪ್ರವಾಸ ಮಾಡಿದರೂ ಅಲ್ಲಿನ ಜಿಲ್ಲಾಧ್ಯಕ್ಷರೂ ಇರಬೇಕು. ಇದರಲ್ಲಿ ರಾಜಿಯಿಲ್ಲ ಎಂದಿರುವ ಡಿಕೆ ಪಕ್ಷದ ಕಾರ್ಯಕರ್ತರಿಗೆ ಕೆಲವು ಸಂದೇಶ ರವಾನಿಸಿದ್ದಾರೆ.



