ಸ್ವಾತಿ ಮುತ್ತಿನ ಮಳೆ ಹನಿಯೇ.. ಚಿತ್ರಕ್ಕೆ ಕೋರ್ಟ್‍ನಿಂದ ಸ್ಟೇ ತಂದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು. ಒಂದು ಕಾಲದಲ್ಲಿ ಅಂತ, ಸಿಂಹದ ಮರಿ ಸೈನ್ಯ, ನಾಗರಹೊಳೆ, ಬಂಧನ, ಮುತ್ತಿನ ಹಾರ, ಹೂವುಹಣ್ಣು, ಮಹಾಕ್ಷತ್ರಿಯ, ಮುಂಗಾರಿನ ಮಿಂಚು, ಕುರಿಗಳು, ಕೋತಿಗಳು.. ಹೀಗೆ ವಿಭಿನ್ನ ಚಿತ್ರಗಳ ಮೂಲಕ ಹೆಸರುವಾಸಿಯಾಗಿದ್ದ ಬಾಬು, ಕಳೆದ ಕೆಲವರ್ಷಗಳಿಂದ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು.

ಹಾಗೆಂದು ವಿವಾದಗಳು ಸಿಂಗ್ ಬಾಬು ಅವರಿಗೆ ಹೊಸದಲ್ಲ. ಆದರೆ ಸ್ವರೂಪಗಳು ಬದಲಾಗಿವೆಯಷ್ಟೆ. ಅಂತ ಚಿತ್ರ ರಿಲೀಸ್ ಆದಾದ ಚಿತ್ರದ ಕ್ರೌರ್ಯವೇ ವಿವಾದ ಸೃಷ್ಟಿಸಿತ್ತು. ಆದರೆ ಅದು ಟ್ರೆಂಡ್ ಸೆಟ್ಟರ್ ಆಯಿತು. ಬಂಧನ ಚಿತ್ರವನ್ನಂತೂ ಕನ್ನಡ ಚಿತ್ರರಂಗ ಮರೆಯುವಂತೆಯೇ ಇಲ್ಲ. ಮುತ್ತಿನ ಹಾರ ಕನ್ನಡ ಚಿತ್ರರಂಗದ ಮೈಲಿಗಲ್ಲಾದ ಸಿನಿಮಾ. ಕನ್ನಡ, ತೆಲುಗು, ಹಿಂದಿಯಲ್ಲಿ ಚಿತ್ರ ನಿರ್ಮಾಣ ಮಾಡಿರುವ ಖ್ಯಾತಿಯಿರುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಅವರ ಇತ್ತೀಚಿನ ಸಿನಿಮಾ ಯಾವುದು ಎಂದರೆ ಅಭಿಮಾನಿಯಾದವನೂ ತಲೆ ಕೆರೆದುಕೊಳ್ಳುತ್ತಾನೆ. 2010ರಲ್ಲಿ ಬಂದ ತಿಪ್ಪಾರಳ್ಳಿ ತರ್ಲೆಗಳು ಚಿತ್ರವೇ ಕೊನೆ, 12 ವರ್ಷಗಳಲ್ಲಿ ಮತ್ತೊಂದು ಸಿನಿಮಾ ರಿಲೀಸ್ ಆಗಿಲ್ಲ. ಘೋಷಣೆಯಾಗಿವೆ. ಮುಕ್ತಾಯವಾಗಿಲ್ಲ.




ಸ್ವಾತಿ ಮುತ್ತಿನ ಮಳೆ ಹನಿಯೇ.. ಚಿತ್ರ ನಮ್ಮದು. ಈಗಾಗಲೇ ಈ ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ಮಾಡಿದ್ದು ಶೇ.80ರಷ್ಟು ಚಿತ್ರೀಕರಣ ಮುಗಿಸಿದ್ದೇವೆ ಎನ್ನುವುದು ಎಸ್.ವಿ.ಆರ್. ವಾದ. ಅಂಬರೀಷ್ ಮತ್ತು ಸುಹಾಸಿನಿ ಪ್ರಧಾನ ಪಾತ್ರದಲ್ಲಿರುವ ಚಿತ್ರ ಸೆಟ್ಟೇರಿದ್ದದ್ದು ಹೌದು, ಆದರೆ ಸೆಟ್ಟೇರಿದ್ದರ ಹೊರತಾಗಿ ನಡೆದ ಚಿತ್ರೀಕರಣದ ಬಗ್ಗೆ ಚಿತ್ರರಂಗದವರಿಗೆ ಮಾಹಿತಿ ಇಲ್ಲ. ಆ ರೀತಿಯ ಚಿತ್ರಗಳ ಸಂಖ್ಯೆ ದೊಡ್ಡದು.
ಸ್ವಾತಿ ಮುತ್ತಿನ ಮಳೆ ಹನಿಯೇ.. ಅಷ್ಟೇ ಅಲ್ಲ, ಬಂಧನ 2, ರಕ್ತಾಕ್ಷ, ರೆಬಲ್, ವೀರ ಮದಕರಿ ನಾಯಕ.. ಹೀಗೆ ಮಧ್ಯದಲ್ಲಿಯೇ ನಿಂತ ಚಿತ್ರಗಳ ಸಂಖ್ಯೆ ದೊಡ್ಡದು. ಈಗ ವೀರಕಂಬಳ ಮಾಡುತ್ತಿದ್ದಾರೆ.


ಈಗಲೂ ಅಷ್ಟೆ, ಸ್ವಾತಿ ಮುತ್ತಿನ ಮಳೆ ಹನಿಯೇ.. ಚಿತ್ರ ರಿಲೀಸ್ ಆಗದೇ ಇರುವುದು ಅವರ ಉದ್ದೇಶವಲ್ಲ. ಮಾತುಕತೆಗೆ ಬಂದರೆ ಬಗೆಹರಿಸಬಹುದು. ಆದರೆ ಫೇಸ್ ಮಾಡಬೇಕಿರುವುದು ರಮ್ಯಾ ಅವರನ್ನು. ಈ ರೀತಿಯ ಕಿರಿಕ್ಕುಗಳಿಗೆ ಬಗ್ಗುವ ಜಾಯಮಾನ ರಮ್ಯ ಅವರದ್ದಲ್ಲ. ಒಂದಂತೂ ನಿಜ, ಸ್ವಾತಿ ಮುತ್ತಿನ ಮಳೆ ಹನಿಯೇ.. ವಿವಾದ ಇಲ್ಲಿಗೇ ಮುಗಿಯುವುದಿಲ್ಲ.



