ಸೂರ್ಯವಂಶ. ವಿಷ್ಣುವರ್ಧನ್ ವೃತ್ತಿ ಜೀವನದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ವಿಷ್ಣು ಡಬಲ್ ಆಕ್ಟಿಂಗ್ʻನಲ್ಲಿ ನಟಿಸಿದ್ದ ಚಿತ್ರದ ಸೀಕ್ವೆಲ್, ಈಗ ಟಿವಿಯಲ್ಲಿ ಬರುತ್ತಿದೆ. ಸೂರ್ಯವಂಶದವರ ಮೊಮ್ಮಗನಾಗಿ ಅನಿರುದ್ಧ ನಟಿಸುತ್ತಿದ್ದಾರೆ. ಅನಿರುದ್ಧ ವಿಷ್ಣುವರ್ಧನ್ ಅವರ ಮೊಮ್ಮಗನಾಗಿದ್ದ ಆ ಹುಡುಗನೇನಾ..? ಸೀರಿಯಲ್ ಶುರುವಾದ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಈ ನಡುವೆ ಸೂರ್ಯವಂಶ ಸೀರಿಯಲ್ಲಿನಲ್ಲಿ ನಟಿಸುವುದಕ್ಕೂ ಮೊದಲಿನ ಸವಾಲು, ಸಮಸ್ಯೆಗಳನ್ನು ಅನಿರುದ್ಧ ಮತ್ತು ಎಸ್.ನಾರಾಯಣ್ ಹೇಳಿಕೊಂಡಿದ್ಧಾರೆ.
ಕಲಾವಿದರನ್ನು ಆಯ್ಕೆ ಮಾಡಿಕೊಳ್ಳೋದಕ್ಖೂ ಪ್ರಾಬ್ಲಂ ಇದೆ. ನಿರ್ದೇಶಕ, ನಟ ಒಪ್ಪಿದ್ದರೂ ಸಮಸ್ಯೆ ಎದುರಾಗುತ್ತೆ.. ಅದೂ ಬೇರೆಯವರಿಂದ. ಹೌದು, ಇಂತಾದ್ದೊಂದು ಸವಾಲು ಎದುರಿಸಿದ ಕಥೆ ಹೇಳಿದ್ದು ನಟ ಅನಿರುದ್ಧ ಜತ್ಕರ್ ಮತ್ತು ನಿರ್ದೇಶಕ ಎಸ್.ನಾರಾಯಣ್. ಇಂದಿನಿಂದ ಸೂರ್ಯವಂಶ ಸೀರಿಯಲ್ ಶುರುವಾಗುತ್ತಿದೆ. ಆದರೆ, ಈ ಸೀರಿಯಲ್ಲಿಗೆ ಅನಿರುದ್ಧ ಅವರನ್ನು ಆಯ್ಕೆ ಮಾಡಬೇಡಿ ಎಂದು ಹಲವರು ಒತ್ತಾಯ ಮಾಡಿದ್ದ ವಿಷಯವನ್ನು ನಟ ಮತ್ತು ನಿರ್ದೇಶಕರಿಬ್ಬರೂ ಹೇಳಿಕೊಂಡಿದ್ಧಾರೆ.
ನನ್ನನ್ನು ಎರಡು ವರ್ಷ ಬ್ಯಾನ್ ಮಾಡಬೇಕು ಎಂದು ಹೇಳಿದ್ಧಾಗಲೇ ಉದಯ ಟಿವಿಯರು ಅನಿರುದ್ಧ್ ಜೊತೆ ಧಾರಾವಾಹಿ ಮಾಡೋಕೆ ಮುಂದಾದ್ರು. ಆಗ ಉದಯ ವಾಹಿನಿಯವರಿಗೂ ಧಮ್ಕಿ ಕರೆಗಳು ಬಂದಿದ್ದವು. ನನ್ನನ್ನು ಧಾರಾವಾಹಿಗೆ ಸೆಲೆಕ್ಟ್ ಮಾಡಿಕೊಳ್ಳಬೇಡಿ ಎಂದು ಧಮ್ಕಿ ಹಾಕಿದ್ದರು. ಆದರೆ ಉದಯ ಟಿವಿಯವರು ಹೆದರಲಿಲ್ಲ. ಧೈರ್ಯದಿಂದಲೇ ಏನೇ ಇದ್ದರೂ, ಕಚೇರಿಗೆ ಬನ್ನಿ ಮಾತಾಡೋಣ‘ ಅಂತ ಹೇಳಿದ್ದರು. ಆದರೆ ಯಾರೂ ಕೂಡ ಬರಲಿಲ್ಲ.. ಎಂದು ಹೇಳಿದ್ದಾರೆ ನಟ ಅನಿರುದ್ಧ.
ಈ ಹಿಂದೆ ಅನಿರುದ್ಧ ಜೀ ಟಿವಿಯ ಜೊತೆ ಜೊತೆಯಲಿ.. ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆಗ ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿದ್ದ ಧಾರಾವಾಹಿ ತಂಡದಲ್ಲಿ ಬಿರುಕು ಮೂಡಿತ್ತು. ಅನಿರುದ್ಧ ವಿರುದ್ಧ ಜೊತೆ ಜೊತೆಯಲಿ ಟೀಂ, ಜೊತೆ ಜೊತೆಯಲಿ ಟೀಂ ವಿರುದ್ಧ ಅನಿರುದ್ಧ ಆರೋಪ ಪ್ರತ್ಯಾರೋಪ ಮಾಡುವುದರೊಂದಿಗೆ ವಿವಾದ ಮುಗಿದಿತ್ತು. ಆಗ ಅನಿರುದ್ಧ ನಟಿಸುತ್ತಿದ್ದ ಪಾತ್ರಕ್ಕೆ ಬೇರೊಬ್ಬರನ್ನು ಕರೆತಂದಿದ್ದಾರದರೂ.. ಧಾರಾವಾಹಿಯ ಟಿಆರ್ʻಪಿ ಪಾತಾಳಕ್ಕೆ ಬಿದ್ದಿತ್ತು. ಕೊನೆಗೆ ಸೀರಿಯಲ್ ಅಂತ್ಯವಾಯ್ತು. ಇದು ಇತಿಹಾಸ.
ಅನಿರುದ್ಧ ಅವರನ್ನು ಹಾಕಿಕೊಳ್ಳಬೇಡಿ ಎಂಬ ಒತ್ತಾಯ ಎಸ್.ನಾರಾಯಣ್ ಅವರಿಗೂ ಬಂದಿತ್ತಂತೆ. ನಗೆ ಅವರು ಬೇಕು, ನನ್ನ ಕಥೆಗೆ ಅವರೇ ಸೂಕ್ತ ಎಂದಿದ್ದೆ ಎಂದಿರೋ ನಾರಾಯಣ್, ಅನಿರುದ್ಧ ಅವರನ್ನೇ ಆಯ್ಕೆ ಮಾಡಿದರು.
ಒಂದು ಪ್ರಾಡಕ್ಟ್ ಅನ್ನು ಬ್ಯಾನ್ ಮಾಡಬಹುದು. ಆದರೆ ಒಬ್ಬ ಕಲಾವಿದನನ್ನ ಬ್ಯಾನ್ ಮಾಡಲು ಸಾಧ್ಯವಿಲ್ಲ. ‘ಯಾವುದೇ ಕಲಾವಿದನನ್ನು ಬ್ಯಾನ್ ಮಾಡುವ ಹಕ್ಕು ಯಾರಿಗೂ ಇಲ್ಲ ಎಂಬ ಮಾತನ್ನು ಡಾ.ರಾಜ್ ಕುಮಾರ್ ಅವರೂ ಹೇಳಿದ್ದರು ಎಂದಿರೋ ಅನಿರುದ್ಧ ನನ್ನ ಮೇಲೆ ಬ್ಯಾನ್ ಅನ್ನೋ ಪದ ಬಳಸಿದ್ದೇ ಒಂದು ಅಪರಾಧ ಎಂದಿದ್ದಾರೆ.
ಸೂರ್ಯವಂಶ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನಟ ಅನಿರುದ್ಧ್ ಜೊತೆಗೆ ಅಶ್ವಿನಿ, ಸುಂದರ್ ರಾಜ್, ವಿಕ್ರಂ ಉದಯಕುಮಾರ್, ರವಿ ಭಟ್, ಸುಂದರಶ್ರೀ, ಲೋಕೇಶ್ ಬಸವಟ್ಟಿ, ಪುಷ್ಪಾ ಬೆಳವಾಡಿ, ನಯನಾ, ರಾಮಸ್ವಾಮಿ, ಸುನಂದಾ ಮುಂತಾದವರು ನಟಿಸುತ್ತಿದ್ದಾರೆ. ಹರಿ ಸಂತು ಪ್ರಧಾನ ನಿರ್ದೇಶನದ ‘ಸೂರ್ಯವಂಶ‘ ಧಾರಾವಾಹಿಗೆ ತನ್ವಿ ಕ್ರಿಯೇಷನ್ಸ್ ಹಣ ಹಾಕುತ್ತಿದೆ. ಈ ಧಾರಾವಾಹಿಯ ಡೈರೆಕ್ಟರ್ ವಿಷ್ಣುವರ್ಧನ್ ಅವರಿಗೆ ಸೂರ್ಯವಂಶ ಸಿನಿಮಾ ಮಾಡಿದ್ದ ಅದೇ ಎಸ್.ನಾರಾಯಣ್. ಸೂರ್ಯವಂಶದ ಮುಂದುವರಿದ ಭಾಗವನ್ನು ಧಾರಾವಾಹಿಯಲ್ಲಿ ಹೇಳುತ್ತಿದ್ಧಾರೆ.



