ಸ್ಪಂದನಾ ಅವರ ಅಕಾಲಿಕ ಸಾವು ವಿಜಯ್ ರಾಘವೇಂದ್ರ ಅವರ ಪಾಲಿಗೆ ಆಘಾತ. ಬ್ಯಾಂಕಾಕ್`ಗೆ ಹೋಗಿದ್ದ ಸ್ಪಂದನಾ, ದಿಢೀರ್ ಎಂದು ನಿದ್ರೆಯಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಸ್ಪಂದನಾ ಅವರ ಮೃತದೇಹವನ್ನು ಥೈಲ್ಯಾಂಡ್`ನಿಂದ ತಂದು ಸಂಸ್ಕಾರ ನಡೆಸಲಾಗುತ್ತಿದೆ. ವಿಜಯ್ ರಾಘವೇಂದ್ರ ಅವರಿಗೆ ಚಿತ್ರರಂಗದ ಹಿರಿಯರು, ಸಂಬಂಧಿಕರು, ಸಾಂತ್ವನ ಹೇಳುತ್ತಿದ್ದಾರೆ.
ರಾತ್ರಿ ಸುಮಾರು 11.30ಕ್ಕೆ ವಿಮಾನ ನಿಲ್ದಾಣಕ್ಕೆ ಸ್ಪಂದನಾ ಅವರ ಪಾರ್ಥಿವ ಶರೀರವನ್ನು ತರಲಾಯಿತು. ಶ್ರೀಮುರಳಿ, ಚಿನ್ನೇಗೌಡ, ಬಿಕೆ ಶಿವರಾಮ್, ಬಿಕೆ ಹರಿಪ್ರಸಾದ್ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿದ್ದು ಪಾರ್ಥಿವ ಶರೀರವನ್ನು ಸ್ವೀಕರಿಸಿದರು.
ಶಿವಣ್ಣ, ಗೀತಾ ಶಿವರಾಜ್`ಕುಮಾರ್, ಅಶ್ವಿನಿ ಪುನೀತ್ ರಾಜ್`ಕುಮಾರ್, ರಾಘವೇಂದ್ರ ರಾಜ್`ಕುಮಾರ್, ಸುಧಾರಾಣಿ, ಗಿರಿಜಾ ಲೋಕೇಶ್, ಶ್ರೀನಾಥ್, ವಿಜಯ್ ಪ್ರಕಾಶ್, ಮಧು ಬಂಗಾರಪ್ಪ ಸೇರಿದಂತೆ ಚಿತ್ರರಂಗದವರು, ಪೊಲೀಸ್ ಇಲಾಖೆಯ ಸೀನಿಯರ್ ಅಧಿಕಾರಿಗಳು, ಸಾವಿರಾರು ಅಭಿಮಾನಿಗಳು ಆಗಮಿಸಿದ್ದಾರೆ.
ರಾಘವೇಂದ್ರ ರಾಜ್‍ಕುಮಾರ್ : ಯಾರಿಗೂ ಏನೂ ಹೇಳೋಕೆ ಸಾಧ್ಯವಾಗುತ್ತಿಲ್ಲ. ಪ್ರಪಂಚದಲ್ಲಿ ಎಲ್ಲವೂ ನಡೆಯುತ್ತಿರುತ್ತದೆ. ಎಲ್ಲವನ್ನೂ ತಡೆಯುವ ಶಕ್ತಿಯನ್ನು ದೇವರ ನೀಡಲಿ. ರಾಘು ನೋಡಲು ತುಂಬಾ ಕಷ್ಟವಾಗುತ್ತಿದೆ.
ಶ್ರೀನಾಥ್ : ರಾಘುಗೆ ದೇವರು ಶಕ್ತಿ ಕೊಡಲಿ ಆ ದೇವರೆ ಕಾಪಾಡಬೇಕು ಅಷ್ಟೇ. ಮಗು ಬಗ್ಗೆ ಏನು ಹೇಳಲಿ.. ಸ್ಪಂದನಾ ಆತ್ಮಕ್ಕೆ ಶಾಂತಿ ಸಿಗಲಿ
ಸುಧಾರಾಣಿ : ಅವರ ಕುಟುಂಬದ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ನಾನು ಸ್ಪಂದನಾ ಭೇಟಿ ಮಾಡಿದಾಗೆಲ್ಲ ತುಂಬಾ ಚೆನಾಗಿ ಮಾತಾಡ್ತಿದ್ವಿ. ಮಿತಭಾಷಿ ಸ್ಪಂದನಾ. ಹೀಗೆ ಆಗಿರೋದು ನಂಬೋದಕೆ ಆಗ್ತಿಲ್ಲ..
ಗಿರಿಜಾ ಲೋಕೇಶ್ : ಸ್ಪಂದನ ಮುಖದಲ್ಲಿನ ಕಳೆ ಸ್ವಲ್ವವೂ ಕುಂದಿಲ್ಲ. ಮಲಗಿದ್ದಲ್ಲೆ ಸಾವಾಗಿದೆ , ಇಂತಹ ಸಾವು ಹಿರಿಯರಿಗೆ ಬರಬೇಕಿದೆ. ಪುಟ್ಟ ಮಕ್ಕಳಿಗೆ ಸಾವಾದ್ರೆ ತಂದೆ ತಾಯಿ ತಡೆದುಕೊಳ್ಳಲಾಗದು. ರಾಘುವನ್ನ ದೇವರೇ ಕಾಪಾಡಬೇಕು..
ವಿಜಯ್ ಪ್ರಕಾಶ್ : ಇಲ್ಲಿಗೆ ಬಂದು ಈ ಸಮಯ ವಿಜಯ್ ಭೇಟಿ ಮಾಡೋದು ತುಂಬ ಕಷ್ಟ. ವಿಜಯ್ ಮತ್ತು ಕುಟುಂಬಕ್ಕೆ ಈ ನೋವು ಸಹಿಸುವ ಶಕ್ತಿ ಭಗವಂತ ನೀಡಲಿ.



