ಸಿಗಂದೂರು ಚೌಡೇಶ್ವರಿ ಸೇತುವೆ. ಈ ಸೇತುವೆಗಾಗಿ ಇಲ್ಲಿನ ಜನರ ಹೋರಾಟ ಇಂದು ನಿನ್ನೆಯದಲ್ಲ. ಸುಮಾರು 7 ದಶಕಗಳ ಹೋರಾಟ. ಆ ಹೋರಾಟದ ಫಲವಾಗಿ ಸೇತುವೆ ಮೊನ್ನೆ ಮೊನ್ನೆಯಷ್ಟೇ ಉದ್ಘಾಟನೆಯಾಗಿದೆ. ಆದರೆ.. ಅಲ್ಲಿಯೂ ರಾಜಕೀಯ. ʻನನ್ನನ್ನು ಸರಿಯಾಗಿ ಆಹ್ವಾನ ಮಾಡಲಿಲ್ಲʼ ಎಂಬ ಕಾರಣ ನೀಡಿ ಕಾರ್ಯಕ್ರಮದಿಂದ ದೂರ ಉಳಿದಿದೆ ರಾಜ್ಯ ಸರ್ಕಾರ. ಕಾಗೋಡು ತಿಮ್ಮಪ್ಪ ಅವರನ್ನು ಬಿಟ್ಟರೆ, ಒಬ್ಬರೇ ಒಬ್ಬ ಸ್ಥಳೀಯ ಶಾಸಕ ಉದ್ಘಾಟನೆಯಲ್ಲಿ ಪಾಲ್ಗೊಂಡಿಲ್ಲ.
ಕಾರಣ ಏನೆಂದು ಹುಡುಕಿದರೆ ಕಾಣುವುದು ಶಿಷ್ಟಾಚಾರ. ಪ್ರೋಟೋಕಾಲ್ ಅಷ್ಟೇ. ಸಿದ್ಧರಾಮಯ್ಯ ಅವರ ಪ್ರಕಾರ.. ಅವರಿಗೆ ಗೊತ್ತಿಲ್ಲದೇ ಇನ್ವಿಟೇಷನ್ ಕಾರ್ಡಿನಲ್ಲಿ ಅವರ ಹೆಸರು ಹಾಕಲಾಗಿದೆ. ಜುಲೈ 11ರಂದು ಪತ್ರ ಬಂದಿದೆ. ಆದರೆ ಸಂಸದ ಬಿವೈ ರಾಘವೇಂದ್ರ ಅವರ ಪ್ರಕಾರ ಜುಲೈ 9ರಂದೇ ಆಹ್ವಾನ ನೀಡಲಾಗಿದೆ. ಯಾವತ್ತು ಆಹ್ವಾನ ನೀಡಲಾಯಿತು ಎನ್ನುವ ವಿಷಯದಲ್ಲಿ ಇಬ್ಬರಲ್ಲಿ ಒಬ್ಬರು ಸುಳ್ಳು ಹೇಳ್ತಿರೋದು ಸತ್ಯ.
ಎರಡನೆಯದ್ದು ಸಿದ್ಧರಾಮಯ್ಯ ಅವರ ಹೆಸರಿಗಿಂತ ಮೇಲೆ ಯಡಿಯೂರಪ್ಪ ಅವರ ಹೆಸರು ಹಾಕಿರೋದೂ ಕಾರಣ ಎನ್ನಲಾಗ್ತಿದೆ. ಈ ಯೋಜನೆಯ ಪ್ಲಾನ್ ಆಗಿದ್ದು ಯಡಿಯೂರಪ್ಪ ಅವಧಿಯಲ್ಲಿ. ಮೊದಲ ಬಾರಿ ಸಿಎಂ ಆಗಿದ್ದಾಗ ಪ್ಲಾನ್ ಆಯಿತು. ಪ್ರಾಜೆಕ್ಟ್ ಸಿದ್ಧವಾಯಿತು. ಆದರೆ.. ಕಾಗದ ಪತ್ರಗಳು, ಪೇಪರ್ ವರ್ಕ್ ಮುಗಿಯುವಷ್ಟರಲ್ಲಿ ಯಡಿಯೂರಪ್ಪ ಕೆಳಗೆ ಇಳಿದರು. ಸಿದ್ಧರಾಮಯ್ಯ ಅಧಿಕಾರಕ್ಕೆ ಬಂದರು. ಅವರ ಐದು ವರ್ಷ ಕಂಪ್ಲೀಟ್ ಆಗಿ.. ಕುಮಾರಸ್ವಾಮಿ ಸಿಎಂ ಆದರು. ಈ ಇಬ್ಬರ ಅವಧಿಯಲ್ಲಿ ಸಿಗಂಧೂರು ಸೇತುವೆ ಬಗ್ಗೆ ಭಾಷಣಗಳು ಹೊರಬಿದ್ದವೇ ಹೊರತು, ಕೆಲಸ ಆಗಲಿಲ್ಲ. ಇಷ್ಟೆಲ್ಲ ಮುಗಿದು ಮತ್ತೆ ಕೆಲಸಕ್ಕೆ ವೇಗ ಸಿಕ್ಕಿದ್ದು ಯಡಿಯೂರಪ್ಪ ಸಿಎಂ ಆದ ಮೇಲೆಯೇ. ಈಗ ಸೇತುವೆ ಮುಗಿದು ಲೋಕಾರ್ಪಣೆಯಾಗಿದೆ. ಆದರೆ.. ಮತ್ತೊಮ್ಮೆ ಸಿದ್ಧರಾಮಯ್ಯ ಅಧಿಕಾರದಲ್ಲಿದ್ದಾರೆ. ಸೇತುವೆ ಉದ್ಘಾಟನೆಗೂ ಹೋಗಿಲ್ಲ.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಕರಡು ಪ್ರತಿಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ, ನನಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ನಿಗದಿಯಾಗಿರುವ ಪೂರ್ವ ನಿಯೋಜಿತ ಕಾರ್ಯಕ್ರಮಗಳಲ್ಲಿ ನಾನು ಪಾಲ್ಗೊಳ್ಳುತ್ತಿದ್ದೇನೆ ಎನ್ನುವುದು ಸಿದ್ಧರಾಮಯ್ಯ ಅವರ ಪತ್ರ.
73 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 2.12 ಕಿ ಮೀ. ಉದ್ದದ ಈ ಸೇತುವೆ, ಭಾರತದ 4ನೇ ಅತಿ ಉದ್ದದ ಕೇಬಲ್ ಸೇತುವೆ ಹಾಗೂ ಕರ್ನಾಟಕದ ಅತಿ ಉದ್ದದ ಸೇತುವೆಯೂ ಹೌದು. ಆದರೆ.. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪ್ರಕಾರ ಭೌತಿಕವಾಗಿ ಹಾಜರಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 11 ರಂದು ಆಹ್ವಾನ ನೀಡಲಾಗಿದೆ. ಅಲ್ಲದೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವು ವಹಿಸುವಂತೆ ಕೋರಲಾಗಿದೆ. ಒಂದು ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೇ ವರ್ಚುವಲ್ ಮೂಲಕವಾದರೂ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜುಲೈ 12 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಹ್ವಾನಿಸಲಾಗಿತ್ತು.
ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮ ನಿಮ್ಮ ಅಧ್ಯಕ್ಷತೆಯಲ್ಲೇ ನಡೆಯಲಿ ಮತ್ತು ಭೌತಿಕವಾಗಿ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗದಿದ್ದರೇ ವರ್ಚುವಲ್ ಮೂಲಕವಾದರೂ ಭಾಗವಹಿಸಿ ಎಂದು ಸಚಿವ ನಿತಿನ್ ಗಡ್ಕರಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಆಹ್ವಾನ ನೀಡಿದ್ದ ವಿಷಯವನ್ನೂ ಹೇಳಿದ್ದಾರೆ.
ಪರಮೇಶ್ವರ್ ಅವರ ಪ್ರಕಾರ ಕಮ್ಯುನಿಕೇಷನ್ ಗ್ಯಾಪ್ ಆಗಿದೆ. ಹಾಗಾದರೆ.. ಆ ಕಮ್ಯುನಿಕೇಷನ್ ಗ್ಯಾಪ್ʻಗೆ ಕಾರಣ ಯಾರು.. ಹುಡುಕದೇ ಹೋದರೆ.. ಸಿದ್ಧರಾಮಯ್ಯ ಅವರ ಜನಪ್ರಿಯತೆಗೆ ಪೆಟ್ಟು ಬೀಳುವುದು ಖಂಡಿತಾ. ಇಂತಹ ಕೆಟ್ಟ ರಾಜಕಾರಣವನ್ನು ಕನ್ನಡಿಗರು ಯಾವತ್ತೂ ಮೆಚ್ಚಿಕೊಂಡಿಲ್ಲ.



